ADVERTISEMENT

ಈಡೇರದ ‘ಮೊಮ್ಮಗಳ’ ಮದುವೆ ಆಸೆ...

ಪಾಪು ಅವರ ಕಾರು ಚಾಲಕ ಸೈಯದ್ ಅಲಿ ನರೇಗಲ್ ನೆನಪಿನಾಳ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 9:03 IST
Last Updated 18 ಮಾರ್ಚ್ 2020, 9:03 IST
ಹುಬ್ಬಳ್ಳಿಯಲ್ಲಿ ಪಾಟೀಲ ಪುಟ್ಟಪ್ಪ ಅವರಿಗೆ ಗಾಂಧಿ ಟೋಪಿ ತೊಡಿಸಿದ ಅವರ ಕಾರು ಚಾಲಕ ಸೈಯದ್ ಅಲಿ ನರೇಗಲ್ (ಬಲಭಾಗದಲ್ಲಿರುವವರು) –ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್
ಹುಬ್ಬಳ್ಳಿಯಲ್ಲಿ ಪಾಟೀಲ ಪುಟ್ಟಪ್ಪ ಅವರಿಗೆ ಗಾಂಧಿ ಟೋಪಿ ತೊಡಿಸಿದ ಅವರ ಕಾರು ಚಾಲಕ ಸೈಯದ್ ಅಲಿ ನರೇಗಲ್ (ಬಲಭಾಗದಲ್ಲಿರುವವರು) –ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್   

ಹುಬ್ಬಳ್ಳಿ: ನನ್ನ ತಾಯಿ ಪೀರಾಂಬಿ ಹಾಗೂ ತಂದೆ ಖಾದರ್‌ ಸಾಬ್‌, ಪಾಟೀಲ ಪುಟ್ಟಪ್ಪ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ನೆರವಿನಿಂದ 25 ವರ್ಷಗಳ ಹಿಂದೆ ಅವರ ಕಾರು ಚಾಲಕನಾಗಿ ಸೇರಿಕೊಂಡೆ. ಕೆಲಸಕ್ಕೆ ಸೇರಿದ ಹೊಸದರಲ್ಲಿ ಅವರ ಬಗ್ಗೆ ಏನೂ ಗೊತ್ತಿರಲಿಲ್ಲ.

ಅವರ ನೇರವಾಗಿ ಹೇಳುವ ಮನೋಭಾವ ನನಗೆ ಇಷ್ಟವಾಗುತ್ತಿದ್ದರೂ, ಒಳಗೊಳಗೆ ಭಯವಾಗುತ್ತಿತ್ತು. ಆದ್ದರಿಂದ ಆರೇ ತಿಂಗಳಲ್ಲಿ ಕೆಲಸ ಬಿಟ್ಟೆ. ಕೆಲ ತಿಂಗಳ ಬಳಿಕ ಮನೆಗೆ ಕರೆಯಿಸಿಕೊಂಡು ಬುದ್ಧಿ ಹೇಳಿ ಜೀವನದ ಕೊನೆಯತನಕ ತಮ್ಮೊಂದಿಗೆಇರುವಂತೆ ಹೇಳಿದರು. ಹಾಗೆಯೇ ಜೊತೆಯಲ್ಲಿದ್ದೆ.

ಪಾಪು ಅವರಿಂದಾಗಿ ರಾಜ್ಯ ಮತ್ತು ಹೊರರಾಜ್ಯಗಳ ಬಹಳಷ್ಟು ಮಠ, ಮಂದಿರ, ರಾಜಭವನ, ರಾಷ್ಟ್ರಪತಿ ಭವನ, ಹಲವಾರು ರಾಜಕಾರಣಿಗಳನ್ನು ನೋಡುವ ಸೌಭಾಗ್ಯ ಲಭಿಸಿತು. ಭಾರತ ದರ್ಶನ ಮಾಡುವ ಅವಕಾಶ ಸಿಕ್ಕಿತು.

ADVERTISEMENT

ತಂದೆಯ ಪ್ರೀತಿ ನೀಡಿ, ಸ್ವಂತ ಮಗನಿಗಿಂತಲೂ ಹೆಚ್ಚು ಅಕ್ಕರೆ ತೋರಿದ ಅವರು, ನನ್ನ ಕುಟುಂಬದವರ ಬಗ್ಗೆ ಅಪಾರ ಗೌರವ ಇತ್ತು. ತಮ್ಮ ಕುಟುಂಬದಂತೆ ನಮ್ಮ ಕುಟುಂಬದ ಹಿತವನ್ನೂ ಕಾಯುತ್ತಿದ್ದರು. 25 ವರ್ಷಗಳಿಂದ ಅವರು ಹೋದಲೆಲ್ಲ ಹೋಗಿದ್ದೇನೆ. ತಮ್ಮ ಹಲವಾರು ಭಾಷಣಗಳಲ್ಲಿ ನನ್ನ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಪತ್ನಿ ತೀರಿಕೊಂಡ ಬಳಿಕ ಸೈಯದ್‌ ನನ್ನ ಜೀವನದ ಭಾಗವೇ ಆಗಿದ್ದಾರೆ ಎಂದು ಪ್ರಶಂಸಿಸಿದ್ದಾರೆ.

ಪಾಪು, ಮೊಮ್ಮಗಳ (ನನ್ನ ಮಗಳ) ಮದುವೆ ಮಾಡಬೇಕು ಎನ್ನುವ ಆಸೆ ಹೊಂದಿದ್ದರು. ಇದಕ್ಕಾಗಿ ಸ್ವತಃ ಅವರೇ ನಾಲ್ಕೈದು ಕಡೆ ಹುಡುಗನನ್ನೂ ನೋಡಿದ್ದರು. ಆದಿ ಚುಂಚನಗಿರಿಮಠದ ಸ್ವಾಮೀಜಿ, ಸಿದ್ಧೇಶ್ವರ ಸ್ವಾಮೀಜಿ ಹೀಗೆ ಹಲವಾರು ಮಠಾಧೀಶರಿಗೆ ನನ್ನ ಮೊಮ್ಮಗಳ ಮದುವೆಗೆ ನೀವೆಲ್ಲರೂ ಬರಬೇಕು ಎಂದು ಹೇಳಿದ್ದರು. ಆದರೆ, ಈ ಆಸೆ ಈಡೇರುವ ಮೊದಲೇ ಇಹಲೋಕ ತ್ಯಜಿಸಿದ್ದು ಸಾಕಷ್ಟು ನೋವು ತಂದಿದೆ.

ಕೆಲಸಕ್ಕೆ ಸೇರಿದ ಆರಂಭದಲ್ಲಿ ಅವರು ಯಾರು ಎಂಬುದೇ ಗೊತ್ತಿರಲಿಲ್ಲ. ಈಗ ಕನ್ನಡದ ಧೀಮಂತ ನಾಯಕನೊಂದಿಗೆ ಜೀವನ ಕಳೆದಿದ್ದೇ ಸೌಭಾಗ್ಯ ಎನ್ನುವ ಹೆಮ್ಮೆಯ ಭಾವ ಮೂಡಿದೆ. ಇದು ನನ್ನ ಜೀವನವನ್ನು ಸಾರ್ಥಕಗೊಳಿಸಿದೆ.ಅವರು ಹೇಳಿದ್ದ ಕಡೆಗೆಲ್ಲ ಕರೆದೊಯ್ದೆ. ಈಗ ನಾನಿಲ್ಲದಿದ್ದರೂ ಅವರು ಹೊರಟು ಹೋದರು.

ನಿರೂಪಣೆ: ಪ್ರಮೋದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.