
ಹುಬ್ಬಳ್ಳಿ: ‘ಪೋಷಕರು ಮೊದಲು ಒಳ್ಳೆಯ ವಿಷಯಗಳನ್ನು ಅರಿತು, ನಂತರ ಮಕ್ಕಳಿಗೆ ಕಲಿಸಬೇಕು. ಪರಸ್ಪರರಲ್ಲಿ ನಂಬಿಕೆ ಇದ್ದರೆ ಮಕ್ಕಳ ಉತ್ತಮ ಬೆಳವಣಿಗೆ ಸಾಧ್ಯವಾಗುತ್ತದೆ’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.
ಮಕ್ಕಳ ದಿನಾಚರಣೆ ಪ್ರಯುಕ್ತ ತಾಲ್ಲೂಕಿನ ರಾಯನಾಳ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಪೋಷಕರ–ಶಿಕ್ಷಕರ ಮಹಾಸಭೆಯಲ್ಲಿ ಅವರು ಮಾತನಾಡಿದರು.
‘ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಮನೆಯಲ್ಲಿ ಪೂರಕ ವಾತಾವರಣ ಸೃಷ್ಟಿಸಬೇಕಿರುವುದು ಪೋಷಕರ ಕರ್ತವ್ಯ. ಶಾಲೆಯಲ್ಲಿ ನಡೆಯುವ ಪೋಷಕರ ಸಭೆಗೆ ತಂದೆ, ತಾಯಿ ಇಬ್ಬರೂ ಹಾಜರಾಗಬೇಕು. ಮಕ್ಕಳ ಸಮಸ್ಯೆ ತಿಳಿದು, ಅದನ್ನು ಸರಿಪಡಿಸಲು ಯತ್ನಿಸಬೇಕು. ಅವರಿಗೆ ಶಿಸ್ತು, ಸಂಸ್ಕೃತಿ ಕಲಿಸಬೇಕು’ ಎಂದರು.
‘ಈಗಿನ ಕಾಲದ ಮಕ್ಕಳು ಜಾಗರೂಕರಿದ್ದಾರೆ. ಯೋಚಿಸುವ, ಪ್ರಶ್ನಿಸುವ ಮನೋಭಾವ ಅವರಲ್ಲಿದೆ. ಪೋಷಕರ ವರ್ತನೆಯು ಮಕ್ಕಳ ಮೇಲೆ ನೇರ ಪರಿಣಾಮ ಬೀರುವುದರಿಂದ ನಮ್ಮ ಮಾತು, ವರ್ತನೆ ಸರಿಯಾಗಿರಬೇಕು’ ಎಂದರು.
‘ಎಷ್ಟೇ ಶ್ರಮ ವಹಿಸಿದರೂ ಎಲ್ಲರಿಗೂ ಯಶಸ್ಸು ಸಿಗುವುದಿಲ್ಲ. ಸೋಲಿನ ಕಾರಣ ಹುಡುಕಿ, ನಾವೇ ವಿಧಿಸಿಕೊಂಡ ಕಟ್ಟಳೆಯಿಂದ ಹೊರಬೇಕಿದೆ. ಅವಕಾಶ ಸದ್ಬಳಕೆ ಮಾಡಿಕೊಂಡು ಸಾಧನೆ ಮಾಡಬೇಕು. ಶಿಕ್ಷಣದಿಂದ ಮಾತ್ರ ಸಮಾನತೆ ಸಿಗುವುದರಿಂದ, ಮಕ್ಕಳು, ಪೋಷಕರು ಹಾಗೂ ಶಿಕ್ಷಕರು ಗುಣಮಟ್ಟದ ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡಬೇಕು’ ಎಂದರು.
‘ಮಕ್ಕಳ ಜೊತೆ ಬೆರೆಯುವ ಅವಕಾಶ ಸಿಕ್ಕಿರುವುದು ಶಿಕ್ಷಕರ ಭಾಗ್ಯ. ಅವರಿಗೆ ಕಲಿಸುವುದರೊಂದಿಗೆ ಶಿಕ್ಷಕರೂ ಕಲಿಯುತ್ತಾರೆ. ಮಕ್ಕಳ ಅಭಿವೃದ್ಧಿಗೆ ಎಲ್ಲರ ಸಹಭಾಗಿತ್ವ ಅಗತ್ಯವಿದೆ. ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಆರಂಭಿಸಿರುವ ಪೋಷಕರ–ಶಿಕ್ಷಕರ ಮಹಾಸಭೆಯನ್ನು ವಿದ್ಯಾಕಾಶಿಯಾದ ಧಾರವಾಡ ಜಿಲ್ಲೆಯಲ್ಲಿ ಯಶಸ್ವಿಗೊಳಿಸಬೇಕಿದೆ’ ಎಂದು ಹೇಳಿದರು.
ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲೆ ನೂರ್ ಜಹಾನ್ ಕಿಲ್ಲೇದಾರ್ ಹಾಗೂ ಎಸ್.ಬಿ. ಸೊರಟೂರ ಉಪನ್ಯಾಸ ನೀಡಿದರು. ಸಂವಿಧಾನದ ಪೀಠಿಕೆಯ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ರುದ್ರಪ್ಪ ಮೇಟಿ, ಉಪಾಧ್ಯಕ್ಷೆ ಗಂಗಮ್ಮ ಮಾರಡಗಿ, ಜಿಲ್ಲಾ ಪಂಚಾಯಿತಿ ಕೆಡಿಪಿ ಸದಸ್ಯ ನಾಗರಾಜ ಹೆಗ್ಗಣ್ಣವರ, ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್ ಜೆ.ಬಿ. ಮಜ್ಜಗಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ, ಪದವಿ ಪೂರ್ವ ವಿಭಾಗದ ಉಪನಿರ್ದೇಶಕಿ ತೇಜಸ್ವಿನಿ ನಾರಾಯಣಕರ, ಗ್ರಾಮೀಣ ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷ ದಂಡಗಲ್, ಪಿಡಿಒ ನಾಗರಾಜ್, ಕೆಪಿಎಸ್ ಶಾಲೆಯ ಪ್ರಾಚಾರ್ಯ ಸಂಜೀವ್ ಕುಮಾರ್ ಬಿ., ಉಪಪ್ರಾಚಾರ್ಯೆ ರೇಣುಕಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.