ADVERTISEMENT

ಪರೀಕ್ಷಾ ಪೆ ಚರ್ಚಾ: ಸಂವಾದ ವೀಕ್ಷಿಸಿದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 13:32 IST
Last Updated 27 ಜನವರಿ 2023, 13:32 IST
ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಭವನದಲ್ಲಿ ಶುಕ್ರವಾರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ವಿದ್ಯಾರ್ಥಿಗಳಿಗೆ ‘ಎಕ್ಸಾಂ ವಾರಿಯರ್‌’ ಪುಸ್ತಕ ವಿತರಿಸಿದರು. ಜಿಲ್ಲಾ ಪಂಚಾಯ್ತಿ ಸಿಇಒ ಸುರೇಶ ಇಟ್ನಾಳ್‌ ಇದ್ದಾರೆ
ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಭವನದಲ್ಲಿ ಶುಕ್ರವಾರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ವಿದ್ಯಾರ್ಥಿಗಳಿಗೆ ‘ಎಕ್ಸಾಂ ವಾರಿಯರ್‌’ ಪುಸ್ತಕ ವಿತರಿಸಿದರು. ಜಿಲ್ಲಾ ಪಂಚಾಯ್ತಿ ಸಿಇಒ ಸುರೇಶ ಇಟ್ನಾಳ್‌ ಇದ್ದಾರೆ   

ಹುಬ್ಬಳ್ಳಿ: ‘ಪರೀಕ್ಷೆಯಲ್ಲಿ ಕಡಿಮೆ‌ ಅಂಕ ಬಂದರೂ, ಜೀವನದ ಪರೀಕ್ಷೆಯಲ್ಲಿ ಯಶಸ್ವಿಯಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಹೇಳಿದ್ದಾರೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳೊಂದಿಗೆ ನಡೆಸಿದ ‘ಪರೀಕ್ಷಾ ಪೆ ಚರ್ಚಾ’ ಸಂವಾದ ಕಾರ್ಯಕ್ರಮದ ನೇರ ಪ್ರಸಾರವನ್ನು ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಶುಕ್ರವಾರ ವಿದ್ಯಾರ್ಥಿಗಳ ಜೊತೆ ವೀಕ್ಷಿಸಿ, ನಂತರ ಮಾತನಾಡಿದರು. ‘ಪರೀಕ್ಷೆ ಹೇಗೆ ಎದುರಿಸಬೇಕು, ಮಾನಸಿಕ –ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ, ಅಧ್ಯಯನ, ನಿದ್ರೆ ಹೀಗೆ ಇತ್ಯಾದಿ ವಿಷಯಗಳ ಕುರಿತು ಪ್ರಧಾನಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ, ಸಲಹೆ–ಸೂಚನೆಗಳನ್ನು ನೀಡಿದ್ದಾರೆ. ವಿದ್ಯಾರ್ಥಿಗಳ ಜೀವನಕ್ಕೆ ಪ್ರೇರಣದಾಯಕವಾಗಿದ್ದು, ಪ್ರತಿಭೆ ಅನಾವರಣಕ್ಕೆ ಸಹಕಾರಿಯಾಗಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದಂತೆ ಜೀವನವೂ ವಿಕಾಸವಾಗಬೇಕು ಎನ್ನುವುದು ಪ್ರಧಾನಿಯವರ ಆಶಯ’ ಎಂದರು.

‘ವಿದ್ಯಾರ್ಥಿಗಳು ಈ ಸಂವಾದ ವೀಕ್ಷಿಸಲು ದೇಶದಾದ್ಯಂತ ವ್ಯವಸ್ಥೆ ಮಾಡಲಾಗಿತ್ತು. ರಾಜ್ಯದ ವಿದ್ಯಾರ್ಥಿಗಳು ಸಹ ಸಂವಾದದಲ್ಲಿ ಪಾಲ್ಗೊಂಡಿದ್ದರು. ಸ್ಥಳೀಯ ವಿದ್ಯಾರ್ಥಿಗಳು ಅದನ್ನು ವೀಕ್ಷಿಸಲೆಂದು ಜಿಲ್ಲಾ ಪಂಚಾಯ್ತಿ ಮತ್ತು ಶಿಕ್ಷಣ ಇಲಾಖೆ ಇಲ್ಲಿ ವ್ಯವಸ್ಥೆ ಮಾಡಿತ್ತು’ ಎಂದು ಹೇಳಿದರು.

ADVERTISEMENT

ಇದಕ್ಕೂ ಪೂರ್ವ ಕನ್ನಡಕ್ಕೆ ಭಾಷಾಂತರಿಸಿರುವ ಪ್ರಧಾನಿ ನರೇಂದ್ರ ಮೋದಿ ಬರೆದಿರುವ ‘ಎಕ್ಸಾಂ ವಾರಿಯರ್‌’ ಪುಸ್ತಕವನ್ನು ಸಚಿವ ಜೋಶಿ ವಿದ್ಯಾರ್ಥಿಗಳಿಗೆ ವಿತರಿಸಿದರು. ಜಿಲ್ಲಾ ಪಂಚಾಯ್ತಿ ಸಿಇಒ ಸುರೇಶ ಇಟ್ನಾಳ್‌, ತಾ.ಪಂ ಇಒ ಗಂಗಾಧರ ಕಂದಕೂರ್‌, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ್‌, ರೂಪಾ ಶೆಟ್ಟಿ, ವೀರನ್ಣ ಸವಡಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಕಾಲೇಜು ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.