ADVERTISEMENT

ಗರಿಗೆದರಿದ ಚಟುವಟಿಕೆ; ಹೆಚ್ಚಿದ ಜನ–ವಾಹನಗಳ ದಟ್ಟಣೆ

ಲಾಕ್‌ಡೌನ್‌ ಭಾಗಶಃ ಸಡಿಲಿಕೆ: ಮಧ್ಯಾಹ್ನದವರೆಗೆ ಸಹಜ ಸ್ಥಿತಿ, ಬಳಿಕ ಯಥಾಸ್ಥಿತಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 17:22 IST
Last Updated 14 ಜೂನ್ 2021, 17:22 IST
ಹುಬ್ಬಳ್ಳಿಯ ಚನ್ನಮ್ಮನ ವೃತ್ತದ ಬಳಿ ಸೋಮವಾರ ಕಂಡುಬಂದ ವಾಹನ ದಟ್ಟಣೆ
ಹುಬ್ಬಳ್ಳಿಯ ಚನ್ನಮ್ಮನ ವೃತ್ತದ ಬಳಿ ಸೋಮವಾರ ಕಂಡುಬಂದ ವಾಹನ ದಟ್ಟಣೆ   

ಹುಬ್ಬಳ್ಳಿ: ಸರ್ಕಾರ ಲಾಕ್‌ಡೌನ್ ಅನ್ನು ಭಾಗಶಃ ಸಡಿಲಿಸಿ ಮಧ್ಯಾಹ್ನ 2ರವರೆಗೆ ‌ಅಗತ್ಯ ವಸ್ತುಗಳ ಖರೀದಿ ಮತ್ತು ಮಾರಾಟಕ್ಕೆ ಅವಕಾಶ ನೀಡಿದ ಬೆನ್ನಲ್ಲೇ, ನಗರದಲ್ಲಿ ಸೋಮವಾರ ವ್ಯಾಪಾರ ಚಟುವಟಿಕೆಗಳು ಗರಿಗೆದರಿದವು. ಬೆಳಿಗ್ಗೆಯಿಂದ ಇದ್ದ ಜನ ಹಾಗೂ ವಾಹನಗಳ ಓಡಾಟ ಮಧ್ಯಾಹ್ನ 2ರ ನಂತರ ಕ್ರಮೇಣ ತಗ್ಗಿತು.

ಚನ್ನಮ್ಮನ ವೃತ್ತ, ಕೋರ್ಟ್ ವೃತ್ತ, ಜನತಾ ಮಾರ್ಕೆಟ್, ದುರ್ಗದ ಬೈಲ್, ಷಾ ಬಜಾರ್, ನೀಲಿಜಿನ್ ರಸ್ತೆ, ಸ್ಟೇಷನ್ ರಸ್ತೆ, ಕೋಯಿನ್ ರಸ್ತೆ, ಸಿದ್ಧಪ್ಪ ಕಂಬಳಿ ರಸ್ತೆ, ದೇಶಪಾಂಡೆ ನಗರ, ಕೇಶ್ವಾಪುರ, ವಿದ್ಯಾನಗರ, ಗೋಕುಲ ರಸ್ತೆ, ಕಾರವಾರ ರಸ್ತೆ, ಹಳೇ ಹುಬ್ಬಳ್ಳಿ, ಗಣೇಶ ಪೇಟೆ ಸೇರಿದಂತೆ ವಿವಿಧೆಡೆ ಜನದಟ್ಟಣೆ ಹೆಚ್ಚಾಗಿತ್ತು. ವಾಹನಗಳ ಓಡಾಟವೂ ಜೋರಾಗಿತ್ತು.

ರಸ್ತೆ ಬದಿಯಲ್ಲಿ ತರಕಾರಿ, ಹಣ್ಣುಗಳು ಸೇರಿದಂತೆ ಇತರ ವಸ್ತುಗಳ ವ್ಯಾಪಾರಕ್ಕೆ ಹಿಂದಿನಂತೆಯೇ ಕಳೆಬಂದಿತ್ತು. ದಿನಸಿ ಅಂಗಡಿಗಳಲ್ಲಿ ಹೆಚ್ಚಿನ ಜನ ಜಮಾಯಿಸಿದ್ದರು. ದೊಡ್ಡ ಹೋಟೆಲ್‌ಗಳು, ದರ್ಶಿನಿಗಳು ಹಾಗ ರಸ್ತೆ ಬದಿ ಹೋಟೆಲ್‌ಗಳಲ್ಲಿ ಜನ ಕಾಫಿ ಮತ್ತು ಟೀ ಸೇವಿಸಿ ಉಪಾಹಾರ ಸೇವಿಸಿ, ಪಾರ್ಸೆಲ್ ತೆಗೆದುಕೊಂಡು ಹೋಗುತ್ತಿದ್ದ ದೃಶ್ಯ ಕಂಡುಬಂತು. ಬೇಕರಿಗಳು ಸೇರಿದಂತೆ ಇತರ ತಿನಿಸು ಮಾರಾಟದ ಅಂಗಡಿಗಳು ಸಹ ತೆರೆದಿದ್ದವು.

ADVERTISEMENT

ವಾಹನ ದಟ್ಟಣೆ:

ಹಳೇ ಕೋರ್ಟ್ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತ ಸಂಪರ್ಕಿಸುವ ರಸ್ತೆಯನ್ನು ಸ್ಮಾರ್ಟ್‌ ಸಿಟಿ ಯೋಜನೆ ಕಾಮಗಾರಿ ನಿಮಿತ್ತ ಪೊಲೀಸರು ಬಂದ್ ಮಾಡಿದ್ದರಿಂದ, ವಾಹನಗಳು ಕೋರ್ಟ್ ವೃತ್ತದಿಂದ ನೇರವಾಗಿ ಚನ್ನಮ್ಮ ವೃತ್ತಕ್ಕೆ ಹೋಗಲು ವ್ಯವಸ್ಥೆ ಮಾಡಲಾಗಿತ್ತು. ಇದರಿಂದಾಗಿ ವಾಹನಗಳ ದಟ್ಟಣೆ ಹೆಚ್ಚಾಯಿತು. ಸಂಚಾರ ಪೊಲೀಸರು ವಾಹನಗಳನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಈದ್ಗಾ ಮೈದಾನ ಮತ್ತು ಚನ್ನಮ್ಮನ ವೃತ್ತದ ಪಾರ್ಕಿಂಗ್ ಜಾಗ ಕೂಡ ಬಹುತೇಕ ಭರ್ತಿಯಾಗಿತ್ತು.

ಅಂತರ ಲೆಕ್ಕಕ್ಕಿಲ್ಲ

ಲಾಕ್‌ಡೌನ್ ಭಾಗಶಃ ತೆರವಿನಿಂದಾಗಿ ಹಲವೆಡೆ ಲಾಕ್‌ಡೌನ್‌ ನಿಯಮಗಳನ್ನು ಜನ ಓಡಾಡುತ್ತಿದ್ದದ್ದು ಕಂಡುಬಂತು.ದುರ್ಗದ ಬೈಲ್, ಜನತಾ ಬಜಾರ್, ಗಾಂಧಿ ಮಾರುಕಟ್ಟೆ ಸೇರಿದಂತೆ ವಿವಿಧೆಡೆ ಅಗತ್ಯ ವಸ್ತುಗಳ ಖರೀದಿಗೆ ಜನ ಅಂತರ ಲೆಕ್ಕಿಸದೆ ಮುಗಿಬಿದ್ದರು. ರಸ್ತೆಯಲ್ಲಿ ಮತ್ತು ಮಾರುಕಟ್ಟೆಯಲ್ಲಿ ಜನದಟ್ಟಣೆ ನಿಯಂತ್ರಿಸಲಾಗದೆ ಪೊಲೀಸರು ಮಧ್ಯಾಹ್ನದವರೆಗೆ ಅಸಹಾಯಕರಾಗಿ ನಿಂತರು. ಎರಡು ಗಂಟೆಯಾಗುತ್ತಿದ್ದಂತೆ ಜನರನ್ನು ಚದುರಿಸಿದರು. ಬೀದಿ ವ್ಯಾಪಾರವನ್ನು ಬಂದ್ ಮಾಡಿಸಿ, ಅಂಗಡಿಗಳ ಬಾಗಿಲು ಮುಚ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.