
ಧಾರವಾಡ: ಹಿಂಗಾರು ಹಂಗಾಮಿನ ಮಕ್ಕೆಜೋಳ ಬೆಳೆಗೆ ಕೀಟ ಬಾಧೆ ಹಾಗೂ ಲದ್ದಿ ಹುಳುಗಳ ಬಾಧೆ ಹಲವೆಡೆ ಕಂಡು ಬಂದಿದೆ. ಇಳುವರಿ ಕುಸಿತ, ಬೆಳೆ ನಷ್ಟದ ಆತಂಕ ಬೆಳೆಗಾರರನ್ನು ಕಾಡುತ್ತಿದೆ.
ಜಿಲ್ಲೆಯಲ್ಲಿ ಹಿಂಗಾರಿನಲ್ಲಿ ಶೇ 89ರಷ್ಟು ಬಿತ್ತನೆಯಾಗಿದೆ. 7,200 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ನೀರಾವರಿ ಪ್ರದೇಶದ ರೈತರು ಬೆಳೆ ಪರಿವರ್ತನೆಗಾಗಿ ಈ ಬಾರಿ ಹೆಚ್ಚು ಮಕ್ಕೆಜೋಳ ಬೆಳೆದಿದ್ದಾರೆ. ತೇವಾಂಶ ಹೆಚ್ಚಾಗಿರುವುದರಿಂದ ಬೆಳೆ ಸೊಂಪಾಗಿ ಬೆಳೆದಿತ್ತು.
ಒಂದೆರೆಡು ವಾರಗಳಿಂದ ಅಲ್ಲಲ್ಲಿ ಕಾಣಸಿಕೊಂಡಿದ್ದು, ಲದ್ದಿಹುಳು ಕಾಟ ಈಚೆಗೆ ಹೆಚ್ಚಾಗಿದೆ. ಈ ಹುಳು ಸುಳಿಯನ್ನು ಕೊರೆದು ತಿನ್ನುವುದಲ್ಲದೇ ಹೊಸದಾಗಿ ಚಿಗುರುವ ಎಲೆಗಳನ್ನು ತಿನ್ನುತ್ತಿವೆ. ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ಧಾರೆ.
ತಡಕೋಡ, ಮಾದನಭಾವಿ, ಶಿಂಗನಹಳ್ಳಿ, ತೇಗೂರು, ಬೇಲೂರು, ಗರಗ, ದುಬ್ಬನಮರಡಿ, ಅಗಸಹಳ್ಳಿ, ಕೋಟೂರ, ನರೇಂದ್ರ ಸಹಿತ ವಿವಿಧಡೆ ಲದ್ದಿಹುಳು ಹುಳು ಹಾವಳಿ ಕಂಡು ಬಂದಿದೆ. ಹುಳು ಹತೋಟಿಗೆ ರೈತರು ಔಷಧ ಸಿಂಪಡಣೆಯಲ್ಲಿ ತೊಡಗಿದ್ದಾರೆ.
‘ಎರಡು ಎಕರೆಯಲ್ಲಿ ಮಕ್ಕೆಜೋಳ ಬೆಳೆದಿದ್ದೇನೆ. ಉಳುಮೆ, ಬಿತ್ತನೆ ಬೀಜ, ರಸಗೊಬ್ಬರ, ಬೇಸಾಯ, ಕೂಲಿ ಮೊದಲಾದವುಗಳಿಗೆ ಎಕರೆಗೆ ₹ 15 ಸಾವಿರ ಖರ್ಚಾಗಿದೆ. ಎರಡು ಭಾರಿ ಔಷಧ ಸಿಂಪಡಿಸಿದರೂ ಕೀಟ ನಿಯಂತ್ರಣವಾಗಿಲ್ಲ. ಪ್ರತಿವಾರ ಔಷಧ ಸಿಂಪಡಣೆ ಅನಿವಾರ್ಯವಾಗಿದೆ. ಹಾಕಿದ ಬಂಡವಾಳವೂ ವಾಪಸ್ ಸಿಗುವ ಭರವಸೆ ಇಲ್ಲದಂತಾಗಿದೆ’ ಎಂದು ಕೋಟೂರಿನ ರೈತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಸೆಪ್ಪೆಂಬರ್, ಅಕ್ಟೋಬರ್‌ನಲ್ಲಿ ಬಿತ್ತನೆ ಮಾಡಿದ್ದ ಮಕ್ಕೆಜೋಳಕ್ಕೆ ಲದ್ದಿಹುಳು ಬಾಧೆ ಕಂಡು ಬಂದಿದೆ. ಕೀಟಬಾಧೆ ಶೇ 10ಕ್ಕೂ ಕಡಿಮೆ ಇದ್ದರೆ ಅಂಥ ಸಸಿಗಳನ್ನು ಆರಿಸಿ ಕಿತ್ತು ಹಾಕಿದರೆ ಸಾವಿರಾರು ಮರಿಗಳನ್ನು ನಾಶಪಡಿಸಿದಂತಾಗುತ್ತದೆ. ಹೆಚ್ಚಿದ್ದರೆ ಮೋಹಕ ಬಲೆಗಳನ್ನು ಹಾಕಿ ಒಂದು ಬಲೆಯಲ್ಲಿ ನಾಲ್ಕಕ್ಕಿಂತ ಹೆಚ್ಚು ಗಂಡು ಪತಂಗಗಳನ್ನು ಹಾಕಬೇಕು. ಇದರಿಂದ ಕೀಟಗಳು ಮೊಟ್ಟೆ ಇಡುವ ಸಂಖ್ಯೆ ಕಡಿಮೆ ಮಾಡಲು ಸಾಧ್ಯ ಇದೆ. ಇಲ್ಲದಿದ್ದರೆ ಇದು ಜಮೀನಿನಿಂದ ಜಮೀನಿಗೆ ವ್ಯಾಪಿಸುತ್ತದೆ, ನಿರ್ಲಕ್ಷ್ಯ ಮಾಡಬಾರದು’ ಎಂದು ಕೃಷಿ ವಿ.ವಿ. ಬೇಸಾಯಶಾಸ್ತ್ರ ವಿಭಾಗದ ವಿಜ್ಞಾನಿ ಬಸವರಾಜ ಏಣಗಿ ತಿಳಿಸಿದರು.
ಮಕ್ಕೆಜೋಳಕ್ಕೆ ಲದ್ದಿಹುಳು ಬಾಧೆ ಹೆಚ್ಚಾಗುತ್ತಿದೆ. ಕೃಷಿ ಅಧಿಕಾರಿಗಳು ಹೊಲಗಳಲ್ಲಿ ಬೆಳೆ ಪರಿಶೀಲಿಸಬೇಕು. ಬೆಳೆ ಉಳಿಸಿಕೊಳ್ಳುವ ಕುರಿತು ಬೆಳೆಗಾರರಿಗೆ ಸಲಹೆ ನೀಡಬೇಕುಮೌನೇಶ ದರಗಾದ ಬೆಳೆಗಾರ ಕೋಟೂರ ಗ್ರಾಮ
ಲೀಟರ್ ನೀರಿಗೆ 0.4 ಗ್ರಾಂ ‘ಇಮಾಮ್ಯಾಕ್ಟಿನ್ ಬೆಂಜೊಯೇಟ್‘ ಕೀಟನಾಶಕ ಮತ್ತು ಮೂರು ಗ್ರಾಂ ‘ಆಲ್ 19‘ ಲಘು ಪೋಷಕಾಂಶ ಬೆರೆಸಿ ಬೆಳೆಯ ಸುಳಿಗೆ ಸಿಂಪಡಿಸಬೇಕು. ಇದರಿಂದ ಕೀಟ ಬಾಧೆ ನಿಯಂತ್ರಿಸಬಹುದುರಾಜಶೇಖರ ಅನಗೌಡರ ಸಹಾಯಕ ಕೃಷಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.