ADVERTISEMENT

ಕ್ವಾರಂಟೈನ್‌ನಿಂದ ಪರಾರಿ: ಬಂಧನ

ಮೊಬೈಲ್ ಕಳ್ಳತನ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 27 ಜೂನ್ 2020, 16:55 IST
Last Updated 27 ಜೂನ್ 2020, 16:55 IST
ಬೆಂಡಿಗೇರಿ ಪೊಲೀಸ್ ಠಾಣೆಯ ಇಬ್ಬರು ಮಹಿಳಾ ಗೃಹ ರಕ್ಷಕಿಯರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ, ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಹಾಗಾಗಿ, ಸಿಬ್ಬಂದಿ ಠಾಣೆ ಹೊರಗೆ ಕುಳಿತು ಕಾರ್ಯನಿರ್ವಹಿಸುತ್ತಿದ್ದ ಚಿತ್ರಣ ಕಂಡುಬಂತು
ಬೆಂಡಿಗೇರಿ ಪೊಲೀಸ್ ಠಾಣೆಯ ಇಬ್ಬರು ಮಹಿಳಾ ಗೃಹ ರಕ್ಷಕಿಯರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ, ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಹಾಗಾಗಿ, ಸಿಬ್ಬಂದಿ ಠಾಣೆ ಹೊರಗೆ ಕುಳಿತು ಕಾರ್ಯನಿರ್ವಹಿಸುತ್ತಿದ್ದ ಚಿತ್ರಣ ಕಂಡುಬಂತು   

ಹುಬ್ಬಳ್ಳಿ: ಪೊಲೀಸರ ಕಣ್ತಪ್ಪಿಸಿ ಸಾಂಸ್ಥಿಕ ಹೋಟೆಲ್ ಕ್ವಾರಂಟೈನ್‌ನಿಂದ ಪರಾರಿಯಾಗಿದ್ದ ಇಬ್ಬರು ಮೊಬೈಲ್ ಕಳ್ಳರನ್ನು ಎಪಿಎಂಸಿನವನಗರ ಠಾಣೆಪೊಲೀಸರು ಮತ್ತೆ ಬಂಧಿಸಿದ್ದಾರೆ.

ಮೊಬೈಲ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 14ರಂದು ಕೇಶ್ವಾಪುರದ ಪಾಟೀಲ ಚಾಳದ ಆಕಾಶ ಮೊದಲಿಯಾರ್ ಮತ್ತು ವಿದ್ಯಾನಗರ ಶೆಟ್ಟರ್ ಲೇಔಟ್‌ನ ಆಕಾಶ ಮೂಳೆಯನ್ನು ಬಂಧಿಸಿದ್ದ ಪೊಲೀಸರು, ಕೋರ್ಟ್‌ಗೆ ಹಾಜರುಪಡಿಸಿದ್ದರು.

ಕೊರೊನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ, ಆರೋಪಿಗಳ ಗಂಟಲು ದ್ರವ ಪರೀಕ್ಷೆಯ ವರದಿ ಬರುವವರೆಗೂ ಸಾಂಸ್ಥಿಕ ಕ್ವಾರಂಟೈನ್ ಮಾಡಬೇಕು ಎಂದು ಕೋರ್ಟ್ ಸೂಚಿಸಿತ್ತು.ಅದರಂತೆ ಆರೋಪಿಗಳನ್ನು ಲ್ಯಾಮಿಂಗ್ಟನ್ ರಸ್ತೆಯ ಅನ್ನಪೂರ್ಣ ವಸತಿ ಗೃಹದಲ್ಲಿ ಕ್ವಾರಂಟೈನ್ ಮಾಡಿ, ಪೊಲೀಸರನ್ನು ನಿಯೋಜಿಸಲಾಗಿತ್ತು.

ADVERTISEMENT

ಆದರೆ, ಆರೋಪಿಗಳು ಜೂನ್ 21ರಂದು ಬೆಳಗಿನ ಜಾವ ವಸತಿಗೃಹದ ಕಿಟಕಿ ಸರಳುಗಳನ್ನು ಮುರಿದು ಪರಾರಿಯಾಗಿದ್ದರು. ಈ ಕುರಿತು ಹೆಡ್ ಕಾನ್‌ಸ್ಟೆಬಲ್ ಅಬ್ದುಲ್ ಸೌದಾಗಾರ ದೂರು ಕೊಟ್ಟಿದ್ದರು.

ಕ್ವಾರಂಟೈನ್‌ನಿಂದ ಪರಾರಿಯಾಗಿದ್ದ ಆರೋಪಿಗಳು ಕಲಘಟಗಿಯಲ್ಲಿ ಬೈಕ್ ಕಳ್ಳತನ ಮಾಡಿದ್ದರು. ನಂತರ, ತನ್ನ ತಾಯಿಯೊಂದಿಗೆ ಚೆನ್ನೈಗೆ ಕಾರಿನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದ ಅವರನ್ನು ಗದಗ ರಸ್ತೆಯಲ್ಲಿ ಬಂಧಿಸಲಾಯಿತುಎಂದು ನವನಗರ ಠಾಣೆ ಇನ್‌ಸ್ಟೆಕ್ಟರ್‌ ಪ್ರಭು ಸೂರಿನ್ ಹೇಳಿದರು.

ದರೋಡೆ ಮತ್ತು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲಿಯಾರ್ ವಿರುದ್ಧ ಕೇಶ್ವಾಪುರ ಠಾಣೆಯಲ್ಲಿ 4, ನವನಗರ ಠಾಣೆಯಲ್ಲಿ 7 ಹಾಗೂ ಗ್ರಾಮೀಣ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಆರೋಪಿಗಳ ಗಂಟಲು ದ್ರವದ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ತಿಳಿಸಿದರು.

ಅಪಘಾತ– ಸಾವು: ನಗರದ ಹೊರವಲಯದ ಆರ್‌ಟಿಒ ಕಚೇರಿ ಬಳಿ ಬೈಕ್‌ಗಳ ಮಧ್ಯೆ ನಡೆದ ಅಪಘಾತದಲ್ಲಿ ಧಾರವಾಡದ ಶಿವಾನಂದನಗರ ನಿವಾಸಿ ರಾಜಪ್ಪ ದ್ಯಾಮಪ್ಪ ಸಾಂಬ್ರಾಣಿ (54) ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಹಿಂಬದಿ ಸವಾರ ಸಾಯಿನಾಥ ಕರಿಯಪ್ಪ ಬೆಳಗಾಂವಕರ ಅವರಿಗೆ ಗಾಯವಾಗಿದೆ. ಧಾರವಾಡದಿಂದ ಹುಬ್ಬಳ್ಳಿಗೆ ಬರುವಾಗ ಅಪಘಾತ ನಡೆದಿದೆ. ಹುಬ್ಬಳ್ಳಿ ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು: ನಗರದ ಹೊಸೂರಿನ ಪ್ರಾದೇಶಿಕ ಬಸ್ ನಿಲ್ದಾಣದ ಸಬ್ ವೇಯಲ್ಲಿ ವಾಟರ್ ಪೈಪ್‌ಲೈನ್‌ಗಳಿಗೆ ಅಳವಡಿಸಿದ್ದ 8 ಹಿತ್ತಾಳೆಯ ಕನೆಕ್ಟರ್‌ಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಕನೆಕ್ಟರ್‌ಗಳ ಮೌಲ್ಯ ₹40 ಸಾವಿರ ಆಗಿದ್ದು, ಘಟನೆ ಬಗ್ಗೆ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.