
ಸುಜಾತಾ ಹಂಡಿ ಮನೆಗೆ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯರ ಭೇಟಿ
ಹುಬ್ಬಳ್ಳಿ: ‘ಸುಜಾತಾ ಹಂಡಿ ಅವರ ಮೇಲೆ ನಡೆದ ಪೊಲೀಸ್ ದೌರ್ಜನ್ಯ, ಕಾಂಗ್ರೆಸ್ ಪ್ರಾಯೋಜಿತ ಗುಂಡಾಗಿರಿಯಾಗಿದೆ. ಘಟನೆ ಕುರಿತು ನ್ಯಾಯಾಧೀಶರಿಂದ ತನಿಖೆ ನಡೆಸಬೇಕು’ ಎಂದು ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ.ಮಂಜುಳಾ ಹೇಳಿದರು.
ಇಲ್ಲಿನ ಚಾಲುಕ್ಯ ನಗರದಲ್ಲಿರುವ ಸುಜಾತಾ ಹಂಡಿ ಅವರ ಮನೆಗೆ ಗುರುವಾರ ಭೇಟಿ ನೀಡಿ, ಘಟನೆ ಕುರಿತು ಅವರ ಕುಟುಂಬ ಸದಸ್ಯರಿಂದ ಮಾಹಿತಿ ಪಡೆದು ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಪುಡಾರಿಗಳು ಮಾಡುವ ಕೆಲಸವನ್ನು ಇನ್‌ಸ್ಪೆಕ್ಟರ್ ಕೆ.ಎಸ್.ಹಟ್ಟಿ ಅವರು ಪೊಲೀಸ್ ಸಮವಸ್ತ್ರ ಧರಿಸಿ ಮಾಡಿದ್ದಾರೆ. ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರು ಹಟ್ಟಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರನ್ನು ಸೇವೆಯಿಂದ ವಜಾಗೊಳಿಸಬೇಕು’ ಎಂದು ಹೇಳಿದರು.
‘ರಾಜ್ಯ ಮಹಿಳಾ ಆಯೋಗವು ನಿಷ್ಪಕ್ಷಪಾತವಾಗಿ ನಡೆದುಕೊಳ್ಳುತ್ತಿಲ್ಲ. ಹೀಗಾಗಿ ರಾಷ್ಟ್ರೀಯ ಮಹಿಳಾ ಆಯೋಗವು ಇಲ್ಲಿಗೆ ಭೇಟಿ ತನಿಖೆ ನಡೆಸಬೇಕು. ಘಟನೆ ಕುರಿತು ಅವರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ’ ಎಂದರು.
‘ಮಹಿಳೆಯೇ ವಿವಸ್ತ್ರಗೊಂಡಿದ್ದಾಳೆ ಎಂದು ಮಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಗುರವಾಗಿ ಹೇಳಿಕೆ ನೀಡಿರುವುದು ಖಂಡನೀಯ. ಅವರಿಗೆ ರಾಜ್ಯದ ಮಹಿಳೆಯರ ಬಗ್ಗೆ ಗೌರವ ಇದ್ದರೆ, ಕೂಡಲೇ ಈ ಕುರಿತು ತನಿಖೆಗೆ ಆದೇಶಿಸಬೇಕು. ಮಹಾನಗರ ಪಾಲಿಕೆ ಸದಸ್ಯೆ ಸುವರ್ಣಾ ಕಲ್ಲಕುಂಟ್ಲ ಅವರ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದ್ದು, ಅವರನ್ನು ಕೂಡಲೇ ಬಂಧಿಸಬೇಕು. ಸುಜಾತಾ ಅವರ ಮನೆಗೆ ಭದ್ರತೆ ಒದಗಿಸಬೇಕು’ ಎಂದು ಹೇಳಿದರು.
‘40 ಪೊಲೀಸರು ಒಬ್ಬ ಮಹಿಳೆ ವಿವಸ್ತ್ರವಾಗುವುದನ್ನು ತಡೆಯಲು ಸಾಧ್ಯವಾಗಲಿಲ್ಲವೇ ಎಂದು ಪ್ರಶ್ನಿಸಿದ ಅವರು, ಇದು ಲಜ್ಜೆಗೆಟ್ಟ, ಮಾನಗೇಡಿ ಸರ್ಕಾರ. ಪುಂಡ ಪೋಕರಿಗಳ ಕೈಯಲ್ಲಿ ಕಾನೂನು ಸುವ್ಯವಸ್ಥೆ ಕೊಟ್ಟು ಅವರ ಮುಂದೆ ನಡುಬಗ್ಗಿಸಿದೆ’ ಎಂದರು.
‘ಮಹಾನಗರ ಪಾಲಿಕೆ ಸದಸ್ಯೆ ಸುವರ್ಣಾ ಕಲ್ಲಕುಂಟ್ಲ ಬಡವರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಅವರನ್ನು ಕಾಂಗ್ರೆಸ್ ಪಕ್ಷದಿಂದ ಹೊರಹಾಕಬೇಕು’ ಎಂದು ಆಗ್ರಹಿಸಿದರು.
‘ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಪ್ರಧಾನಿ ಬಗ್ಗೆ ಮಾತನಾಡುತ್ತಾರೆ. ಆದರೆ, ಅವರ ಜಿಲ್ಲೆಯಲ್ಲಿ ನೇಹಾ, ಅಂಜಲಿ ಅವರ ಕೊಲೆಗಳಾಗಿವೆ. ಈಗ ಮಹಿಳೆಯನ್ನು ವಿವಸ್ತ್ರಗೊಳಿಸಿ, ದೌರ್ಜನ್ಯ ಎಸಗಲಾಗಿದೆ. ಕಾಂಗ್ರೆಸ್‌ನವರು ದುರ್ಯೋಧನ, ದುಶ್ಯಾನರಂತೆ ಆಗಿದ್ದಾರೆ’ ಎಂದರು.
‘ಸುಜಾತಾ ಹಂಡಿ ಮಹಿಳಾ ಪೊಲೀಸರ ಮೇಲೆ ಹಲ್ಲೆ ಮಾಡಿದ್ದರೆ ತನಿಖೆ ನಡೆಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ. ಘಟನೆ ಕುರಿತು ಪೊಲೀಸ್ ಇಲಾಖೆ ಐದು ವಿಡಿಯೊಗಳನ್ನು ಮಾಡಿದೆ. ಅದರಲ್ಲಿ ಆಕೆ ಪೊಲೀಸರಿಗೆ ಕಚ್ಚಿದ ದೃಶ್ಯಗಳಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.