ADVERTISEMENT

ಸ್ವಪ್ರತಿಷ್ಠೆಗೆ ಶಾಲೆ, ಶಿಕ್ಷಕರು, ಮಕ್ಕಳು ಬಲಿ

ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಹೊರಟ್ಟಿ ಆರೋಪ: ನಿರಾಕರಿಸಿದ ಎಸ್‌ಪಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 11:36 IST
Last Updated 2 ಜುಲೈ 2019, 11:36 IST

ಧಾರವಾಡ: ‘ಎನ್‌.ಎ.ಮುತ್ತಣ್ಣ ಸ್ಮಾರಕ ಪೊಲೀಸ್ ವಸತಿ ಶಾಲೆಯ ಮೇಲಿನ ಹಿಡಿತ ಕೈತಪ್ಪಿದ್ದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ಅವರು ಶಾಲೆ ಮುಚ್ಚಿಸುವ ಹುನ್ನಾರ ನಡೆಸಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಂಗಳವಾರ ನೇರ ಆರೋಪ ಮಾಡಿದರು.

‘1997ರಲ್ಲಿ ಸ್ಥಾಪನೆಯಾದ ವಸತಿ ಶಾಲೆಯ ಆಡಳಿತ ಮಂಡಳಿಯ ಜವಾಬ್ದಾರಿಯನ್ನು ಎರಡು ವರ್ಷಗಳ ಹಿಂದೆ ಉತ್ತರ ವಲಯ ಐಜಿಪಿಗೆ ನೀಡಲಾಗಿದೆ. ಶಾಲೆ ಮೇಲಿನ ಹಿಡಿತ ಕೈತಪ್ಪಿದ್ದಕ್ಕೆ ಶಾಲೆಯ ಶಿಕ್ಷಕರ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಹೀಗಾಗಿ 2019ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 77ರಷ್ಟು ಫಲಿತಾಂಶ ಬಂದಿದ್ದನ್ನು ನೆಪವಾಗಿಟ್ಟುಕೊಂಡು ಶಿಕ್ಷಕರನ್ನು ಹೊರಹಾಕಲಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಎರಡು ವರ್ಷಗಳ ಹಿಂದೆ ಶಾಲೆಯಲ್ಲಿ ವಸ್ತು ಖರೀದಿಯಲ್ಲಿ ಕೆಲ ಅಕ್ರಮಗಳು ನಡೆದಿದ್ದವು. ಇದನ್ನು ಪ್ರಶ್ನಿಸಿದ್ದೂ ಅಲ್ಲದೆ, ಈ ವಿಷಯವನ್ನು ಸಧನದಲ್ಲೂ ಪ್ರಸ್ತಾಪಿಸಿದ್ದೆ. ಇದರ ಬೆನ್ನಲ್ಲೇ ಶಾಲೆಯ ಅಧಿಕಾರಎಸ್‌ಪಿಯಿಂದ ಐಜಿಗೆ ವರ್ಗಾವಣೆಯಾಯಿತು. ಇದಕ್ಕೆ ಪ್ರತೀಕಾರವಾಗಿ ಶಾಲೆ ಮುಚ್ಚುವ ಹುನ್ನಾರ ನಡೆಸಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘148 ವಿದ್ಯಾರ್ಥಿಗಳಿದ್ದ ಶಾಲೆಯಲ್ಲಿ ಈಗ 3 ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಉಳಿದವರಿಗೆ ವೈರ್‌ಲೆಸ್ ಮೂಲಕ ಆಯಾ ಜಿಲ್ಲೆಗೆ ಸಂದೇಶ ಕಳುಹಿಸಿ, ಪಾಲಕರನ್ನು ಕರೆಯಿಸಿ ವರ್ಗಾವಣೆ ಪತ್ರವನ್ನು ಬಲವಂತವಾಗಿ ನೀಡಿದ್ದಾರೆ. ಹಾಗೆಯೇ 9 ಶಿಕ್ಷಕರನ್ನು ಹೊರದಬ್ಬಿ, ಅಳಿದುಳಿದ ವಿದ್ಯಾರ್ಥಿಗಳಿಗೆ ಕಾನ್‌ಸ್ಟೆಬಲ್‌ಗಳಿಂದ ಪಾಠ ಮಾಡಿಸಲಾಗುತ್ತಿದೆ. 22 ವರ್ಷ ದುಡಿದ ಶಿಕ್ಷಕರನ್ನು ತೀರಾ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ’ ಎಂದು ಹೊರಟ್ಟಿ ಆರೋಪ ಮಾಡಿದರು.

‘ಪೊಲೀಸ್ ಇಲಾಖೆಯಲ್ಲಿ ಕೆಳ ಹಂತದ ಸಿಬ್ಬಂದಿ ಮಕ್ಕಳಿಗಾಗಿ ಇರುವ ಏಕೈಕ ವಸತಿ ಶಾಲೆ ಇದಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಸ್ಥಾಪನೆಯಾಗಿರುವ ಈ ಶಾಲೆ ಉಳಿಸುವುದು ನಮ್ಮೆಲ್ಲರ ಕರ್ತವ್ಯ. ಹೀಗಾಗಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಜತೆಗೆ ನ್ಯಾಯಾಲಯದಲ್ಲೂ ಅಧಿಕಾರಿಗಳ ಈ ಕ್ರಮವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ. ಜತೆಗೆ ಹಲವಾರು ಶಿಕ್ಷಕರ ಸಂಘಗಳು ಪೊಲೀಸ್ ವಸತಿ ಶಾಲೆ ಉಳಿಸಲು ಹೋರಾಟ ನಡೆಸಲು ಸಜ್ಜಾಗಿವೆ’ ಎಂದರು.

ಸರ್ಕಾರವೇ ನಿಮ್ಮದಿರುವಾಗ ಶಾಲೆ ಉಳಿಸಿಕೊಳ್ಳಲು ಕಷ್ಟವೇನಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಹೊರಟ್ಟಿ, ‘ಶಿಕ್ಷಕರ ಕ್ಷೇತ್ರವನ್ನು ನಾನು ಪ್ರತಿನಿಧಿಸುತ್ತಿದ್ದೇನೆ. ಇಲ್ಲಿ 22 ವರ್ಷಗಳಿಂದ ದುಡಿದ ಶಿಕ್ಷಕರನ್ನು ಕಾರಣವಿಲ್ಲದೆ ಹೊರಕ್ಕೆ ಹಾಕಲಾಗಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳೂ ತಾವು ಕಲಿತ ಶಾಲೆ ಮತ್ತು ಶಿಕ್ಷಕರನ್ನು ಉಳಿಸಿಕೊಳ್ಳಲು ಕೋರಿದರು. ಹೀಗಾಗಿ ಇದು ನನ್ನ ಕರ್ತವ್ಯ ಎಂದು ಭಾವಿಸಿ ಹೋರಾಟಕ್ಕೆ ಮುಂದಾಗಿದ್ದೇನೆ’ ಎಂದು ಹೊರಟ್ಟಿ ಹೇಳಿದರು.

ಹೊರಟ್ಟಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಂಗೀತಾ, ‘ಶಾಲೆಯ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ಉತ್ತರ ವಲಯ ಐಜಿಪಿ ಅವರೇ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಇದರಲ್ಲಿ ನನ್ನ ಪಾತ್ರವೇನೂ ಇಲ್ಲ. ಅವರ ಆರೋಪ ಸತ್ಯಕ್ಕೆ ದೂರವಾದದ್ದು. ಜತೆಗೆ ಗ್ರಾಮೀಣದ ವೈರ್‌ಲೆಸ್‌ ಹುಬ್ಬಳ್ಳಿ ಧಾವರಡ ನಗರ ವ್ಯಾಪ್ತಿಗೆ ಹೋಗದು. ಹೀಗಿರುವಾಗ ಇತರ ಜಿಲ್ಲೆಗಳಿಗೆ ಸಂದೇಶ ಕಳುಹಿಸಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.