ADVERTISEMENT

ರಾಷ್ಟ್ರದ ಭದ್ರತೆ, ಪ್ರಗತಿಗೆ ಪೊಲೀಸ್ ಸೇವೆ ಅಗತ್ಯ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 5:38 IST
Last Updated 21 ಅಕ್ಟೋಬರ್ 2021, 5:38 IST
   

ಹುಬ್ಬಳ್ಳಿ: ರಾಷ್ಟ್ರದ ಆಂತರಿಕ ಭದ್ರತೆ ಹಾಗೂ‌ ಶಾಂತಿಪಾಲನೆಗೆ ತಮ್ಮ ಪ್ರಾಣ ನೀಡಿದ ಪೊಲೀಸರನ್ನು ಸ್ಮರಿಸುವ ದಿನ ಇದಾಗಿದ್ದು, ದೇಶ ಶಾಂತಿಯುತವಾಗಿ ನೆಲೆಸಲು ಹಾಗೂ ಪ್ರಗತಿ ಸಾಧಿಸಲು ಪೊಲೀಸರ ಅಪಾರ ಶ್ರಮ‌ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಂಸೆ ವ್ಯಕ್ತಪಡಿಸಿದರು.

ಇಲ್ಲಿನ ಹಳೇ ಸಿಎಆರ್ ಮೈದಾನದಲ್ಲಿ ಗುರುವಾರ ನಡೆದ ಪೊಲೀಸ್ ಸಂಸ್ಮರಣ‌ ದಿನದ ಕಾರ್ಯಕ್ರಮದಲ್ಲಿ ಮಾತನಾಡಿ,ವಿಶ್ವದ ಹಲವು ರಾಷ್ಟ್ರ ಗಳು ಆಂತರಿಕ ಕ್ಷೋಭೆ, ಭಯೋತ್ಪಾದಕರ ಕೈಗೆ ಸಿಲುಕಿದರ ಪರಿಣಾಮ ಅಲ್ಲಿನ ಜನರ ಬದುಕು ಶಾಂತಿಯುತವಾಗಿಲ್ಲ. ದೇಶದ ಎಲ್ಲಾ ಹಂತದ ಪೊಲೀಸರು ಜನರು ಭಯರಹಿತ ಜೀವನ ನಡೆಸಲು ಶ್ರಮ ಪಡುತ್ತಾರೆ. ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ, ವಿದೇಶದಿಂದ ಎದುರಾಗುವ ಆಂತರಿಕ ಭದ್ರತಾ ಸವಾಲುಗಳನ್ನು ಎದುರಿಸುತ್ತಾರೆ. ನಾಗರಿಕರು ಕಾನೂನು ಕಾಪಾಡುವಲ್ಲಿ ಪೊಲೀಸರಿಗೆ ಸಹರಿಸಬೇಕು. ಪೊಲೀಸರು ತಮ್ಮ ಕುಟುಂಬವನ್ನು ಮರೆತು ಹಗಲಿರುಳು ದುಡಿಯುತ್ತಾರೆ. ರಾಜ್ಯ ಸರ್ಕಾರ ಪೊಲೀಸರಿಗೆ ದೊರಕಬೇಕಾದ ಸವಲತ್ತುಗಳನ್ನು ನೀಡಲು ಸಿದ್ದವಿದೆ. ಇಲಾಖೆಯಲ್ಲಿ ಬಾಕಿ ಉಳಿದಿದ್ದ ಹಲವು ಯೋಜನೆಗಳನ್ನು ಪ್ರಾರಂಭಿಸಿದ್ದೇವೆ. ಪೊಲೀಸರ ಸೇವೆ ಉತ್ತಮಗೊಳಿಸಲು ಪ್ರಯತ್ನ ಮಾಡಲಾಗಿದೆ. ಹಿರಿಯ ಅಧಿಕಾರಿಗಳ ಹಂತದಲ್ಲಿ ಮಾತ್ರ ಪದೋನ್ನತಿ ಎಂಬ ಭಾವನೆ ಕೆಳ ಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಇತ್ತು. ಆದರೆ ಕೆಳ ಹಂತದ ಸಿಬ್ಬಂದಿಗೂ ಪದೋನ್ನತಿ ನೀಡಲಾಗಿದೆ ಎಂದರು.

16 ಸಾವಿರ ಪೊಲೀಸರ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆರೋಗ್ಯ ಭಾಗ್ಯ ಯೋಜನೆಯಡಿ ಪೊಲೀಸರು ಚಿಕಿತ್ಸೆ ಪಡೆಯಲು ಬಾಕಿ ಉಳಿದಿದ್ದ ಅನುದಾನ ಒದಗಿಸಲಾಗಿದೆ. ವೇತನ ಪರಿಷ್ಕರಣೆ ಸೇರಿದಂತೆ ಹಲವು ಸುಧಾರಣೆಗಳನ್ನು ತರಲಾಗಿದೆ.‌ ಪೊಲೀಸರ ‌ನೈತಿಕ ಶಕ್ತಿ ಹೆಚ್ಚಿಸಲು ಅವರಿಗೆ ಕಾನೂನಿನ ಬಲ ನೀಡಲಾಗುತ್ತಿದೆ. ಯುವಕರು ಆನ್ ಲೈನ್ ಕ್ರೀಡೆಗಳಲ್ಲಿ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಇದರ ತಡೆಗಾಗಿ ಕಾಯ್ದೆ ಜಾರಿಗೆ ತರಲಾಗಿದೆ. ಗ್ಯಾಬ್ಲಿಂಗ್ ಕ್ಲಬ್‌ಗಳನ್ನು ಕಟ್ಟಿ ಹಾಕಲು ಸಶಕ್ತ ಕಾನೂನು ತರಲಾಗಿದೆ. ಎಫ್.ಎಸ್.ಎಲ್ ಲ್ಯಾಬ್ ಗಳನ್ನು ಪ್ರಾದೇಶಿಕ ಹಂತದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಈಗಾಗಲೇ 10 ಸಾವಿರ ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಮುಂದಿನ ವರ್ಷ ಪೊಲೀಸರಿಗೆ 11 ಸಾವಿರ ಮನೆ ನಿರ್ಮಾಣಕ್ಕೆ ಯೋಜಿಸಲಾಗಿದೆ. ಪೊಲೀಸರು ಹೆಣ್ಣು ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು. ಪೊಲೀಸ್ ಠಾಣೆಗಳು ಜನಸ್ನೇಹಿ ಆಗಬೇಕು. ಕಾನೂನಿಗೆ ಬದ್ಧವಾಗಿ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು.

ವಿಧಾನ್ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಕ್ಕರೆ ಖಾತೆ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಹುಡಾ ಆಯುಕ್ತ ನಾಗೇಶ ಕಲಬುರ್ಗಿ, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಪ್ರತಾಪ್ ರೆಡ್ಡಿ, ಶಾಸಕ ಪ್ರಸಾದ ಅಬ್ಬಯ್ಯ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕುಮಾರ್, ಆರ್.ಪಿ.ಎಫ್ ಐಜಿಪಿ ಅಲೋಕ್ ಕುಮಾರ್, ಉಪ ಪೊಲೀಸ್ ಆಯುಕ್ತ ರಾಮರಾಜನ್, ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ್, ಸಂಚಾರ ಸಹಾಯಕ ಪೊಲೀಸ್ ಆಯುಕ್ತ ಎಂ.ಎಸ್.ಹೊಸಮನಿ, ಪೊಲೀಸ್ ಇನ್ಸ್‌ಪೆಕ್ಟರ್ ಶ್ಯಾಮರಾವ್, ಸಬ್ ಇನ್ಸ್ ಪೆಕ್ಟರ್ ಸಜ್ಜನ್, ಸಹಾಯಕ ಸಬ್ ಇನ್ಸ್‌ಪೆಕ್ಟರ್ ಮಹಾದೇವ್ ಅಥಣಿ, ನಿವೃತ್ತ ಡಿ.ಐ.ಜಿ ರವಿ ನಾಯಕ್, ಮಾಜಿ‌ಸಂಸದ ಐ.ಜಿ.ಸನದಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣಪತಿ‌ ಗಂಗೊಳ್ಳಿ ಸೇರಿದಂತೆ ಇತರೆ ಗಣ್ಯರು ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಸಮರ್ಪಿಸಿದರು.

ಪೊಲೀಸ್ ಆಯುಕ್ತ ಲಾಬೂರಾಮ್ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಸಮರ್ಪಿಸಿ ದೇಶದಾದ್ಯಂತ ಹುತಾತ್ಮರಾದ ಪೊಲೀಸರ ಹೆಸರುಗಳನ್ನು ಓದಿದರು.

ಅಕ್ಟೋಬರ್ 1 ರಿಂದ ಆಗಸ್ಟ್ 31 ರವರೆಗೆ ದೇಶದಲ್ಲಿ 377 ಹಾಗೂ ಕರ್ನಾಟಕದಲ್ಲಿ 16 ಪೊಲೀಸರು ಕರ್ತವ್ಯ ಸಮಯದಲ್ಲಿ ಹುತಾತ್ಮರಾಗಿದ್ದಾರೆ ಎಂದು ಲಾಬೂರಾಮ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.