ಹುಬ್ಬಳ್ಳಿ: ಕಿಡ್ನಿ (ಮೂತ್ರಪಿಂಡ) ಸಮಸ್ಯೆಗೆ ಕಾರಣವೇನು? ಇದನ್ನು ತಡೆಯುವುದು ಹೇಗೆ? ಕಾಲುಗಳಲ್ಲಿ ಬಾವು ಬರುವುದಕ್ಕೂ ಕಿಡ್ನಿ ವೈಫಲ್ಯಕ್ಕೂ ನಂಟಿದೆಯೇ? ಬಿಗಿಯಾಗಿ ಬೆಲ್ಟ್ ಧರಿಸಿದರೆ ಕಿಡ್ನಿಗೆ ತೊಂದರೆಯಾಗುವುದೇ? ಬಿಯರ್ ಕುಡಿದರೆ ಕಿಡ್ನಿ ಹರಳುಗಳು ಕರಗುವುದೇ.. ಇಂತಹ ಹಲವು ಪ್ರಶ್ನೆಗಳು ಓದುಗರು ವೈದ್ಯರನ್ನು ಕೇಳಿದರು.
ವಿಶ್ವ ಕಿಡ್ನಿ ದಿನಾಚರಣೆ ಪ್ರಯುಕ್ತ ‘ಪ್ರಜಾವಾಣಿ’ ಬುಧವಾರ ಆಯೋಜಿಸಿದ್ದ ‘ವೈದ್ಯರ ಜತೆ ಫೋನ್–ಇನ್’ ಕಾರ್ಯಕ್ರಮದಲ್ಲಿ ಹಲವರು ಕೇಳಿದ ಪ್ರಶ್ನೆಗಳಿಗೆ ಹುಬ್ಬಳ್ಳಿಯ ಎಚ್‌ಸಿಜಿ ಸುಚಿರಾಯು ಆಸ್ಪತ್ರೆಯ ಮೂತ್ರಶಾಸ್ತ್ರಜ್ಞ, ಕಿಡ್ನಿ ಕಸಿ ಶಸ್ತ್ರಚಿಕಿತ್ಸಕರಾದ ಡಾ.ಭುವನೇಶ ಆರಾಧ್ಯ ಹಾಗೂ ಡಾ.ಸೀತಾ ಮುತಾಲಿಕ್ ಉತ್ತರಿಸಿದರು. ಮೂತ್ರಪಿಂಡ ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದರ ಜೊತೆಗೆ ಅವರ ಸಂದೇಹಗಳನ್ನು ನಿವಾರಿಸಿದರು.
‘ದೇಹ ಆರೋಗ್ಯವಾಗಿರಬೇಕೆಂದರೆ ಹೃದಯ, ಶ್ವಾಸಕೋಶ, ಮೂತ್ರಪಿಂಡ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು. ಇವುಗಳ ಆರೋಗ್ಯವನ್ನು ಕಾಪಾಡಿದರೆ, ಅವು ಇಡೀ ದೇಹದ ಆರೋಗ್ಯವನ್ನು ಕಾಪಾಡುತ್ತವೆ’ ಎಂದರು.
‘ಕಿಡ್ನಿ ವೈಫಲ್ಯವಾದರೆ ಹೆದರುವ ಅಗತ್ಯ ಇಲ್ಲ. ಕಸಿ ಮಾಡಿಸಿದರೆ ವ್ಯಕ್ತಿ ಎಲ್ಲರಂತೆ ಸಹಜವಾಗಿ ಜೀವನ ನಡೆಸಬಹುದು. ಸಮಸ್ಯೆ ನಿವಾರಣೆಗೆ ಕಿಡ್ನಿ ಕಸಿ ಮುಖ್ಯ ಪರಿಹಾರ’ ಎಂದು ಡಾ.ಭುವನೇಶ ಆರಾಧ್ಯ ಹೇಳಿದರು.
ಡಾ.ಸೀತಾ ಮುತಾಲಿಕ್, ‘ಉತ್ತಮ ಜೀವನಶೈಲಿ, ನಿಯಮಿತ ವ್ಯಾಯಾಮದಿಂದ ಕಿಡ್ನಿ ಆರೋಗ್ಯ ಕಾಪಾಡಬಹುದು. ಕಿಡ್ನಿ ಕಸಿಗೆ ರೋಗಿಯ ಸ್ಥಿತಿ ಆಧರಿಸಿ ₹5 ಲಕ್ಷದಿಂದ ₹8 ಲಕ್ಷ ಖರ್ಚಾಗುತ್ತದೆ. ರೋಗಿ ಸಂಬಂಧಿಕರು ಕಿಡ್ನಿ ದಾನ ಮಾಡಿದರೆ ವೆಚ್ಚ ಕಡಿಮೆ ಆಗುತ್ತದೆ. ಎಲ್ಲರೂ ಸಾವಿನ ನಂತರ ಅಂಗಾಂಗ ದಾನ ಮಾಡುವ ಪ್ರತಿಜ್ಞೆ ಮಾಡಬೇಕು’ ಎಂದರು.
ಫೋನ್–ಇನ್ ಕಾರ್ಯಕ್ರಮದ ಸಂಕ್ಷಿಪ್ತ ಸ್ವರೂಪ ಇಲ್ಲಿದೆ;
* ಆನಂದಗೌಡ, ಹುಬ್ಬಳ್ಳಿ: ಕಿಡ್ನಿ ಹರಳುಗಳಿಂದ ಕಿಡ್ನಿ ವೈಫಲ್ಯ ಆಗುವುದೇ? ಪದೇ ಪದೇ ಸ್ಕ್ಯಾನ್ ಮಾಡುವುದರಿಂದ ಏನೂ ಪರಿಣಾಮ ಆಗುವುದಿಲ್ಲವೇ?
– ಕಿಡ್ನಿ ಹರಳುಗಳಿಂದ ಕಿಡ್ನಿ ವೈಫಲ್ಯವಾಗಲ್ಲ. ಮೂತ್ರ ನಾಳದಲ್ಲಿ ಹರಳುಗಳು ಬಂದು, ಬ್ಲಾಕ್ ಮಾಡಿ ಪ್ರೆಶರ್ ಹಾಕಿದರೆ ಕಿಡ್ನಿ ವೈಫಲ್ಯವಾಗುವ ಸಾಧ್ಯತೆ ಇದೆ. ದೊಡ್ಡ ಹರಳು ಬಹಳ ದಿನಗಳಿಂದ ಇದ್ದರೆ ಕಿಡ್ನಿ ಡ್ಯಾಮೇಜ್ ಆಗುತ್ತದೆ. ಶಸ್ತ್ರಚಿಕಿತ್ಸೆ ಮೂಲಕ ದೊಡ್ಡ ಹರಳುಗಳನ್ನು ತೆಗೆಯಬೇಕಾಗುತ್ತದೆ. ಹೊಟ್ಟೆ ನೋವು, ಬೆನ್ನು ನೋವು ವಿಪರೀತ ಬರುತ್ತಿದ್ದರೆ ಸ್ಕ್ಯಾನ್ ಮಾಡಿಸಿಕೊಳ್ಳಬೇಕು. ಸ್ಕ್ಯಾನ್ ಮಾಡಿಸುವ ಮೂಲಕ ಮೂತ್ರಪಿಂಡದಲ್ಲಿ ಹರಳುಗಳು ಇವೆಯೋ, ಇಲ್ಲವೋ ಎನ್ನುವುದನ್ನು ಪರೀಕ್ಷಿಸಿಕೊಳ್ಳಬಹುದು. ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿಸಿದರೆ ಏನೂ ಹಾನಿಯಾಗಲ್ಲ.
* ಹರೀಶ, ಹುಬ್ಬಳ್ಳಿ: ನಮ್ಮ ತಂದೆಯವರ ಕಾಲುಗಳಿಗೆ ಆಗಾಗ ಬಾವು ಬರುತ್ತದೆ. ಇದಕ್ಕೆ ಕಿಡ್ನಿ ವೈಫಲ್ಯ ಕಾರಣವೇ?
– ಮಧುಮೇಹ ರೋಗಿಗಳಲ್ಲಿ ಮೂತ್ರದಲ್ಲಿ ಪ್ರೋಟೀನ್ ಹೋಗುವ ಸಾಧ್ಯತೆ ಇರುತ್ತದೆ. ಇದರಿಂದ ಕಾಲು, ಕಣ್ಣು ಸುತ್ತ ಊತ ಬರುವ ಸಾಧ್ಯತೆ ಇರುತ್ತದೆ. ಪ್ರತಿ 6 ತಿಂಗಳಿಗೊಮ್ಮೆ ಮೂತ್ರ ಪರೀಕ್ಷೆ, ಕಿಡ್ನಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದರಲ್ಲಿ ಪಾಸಿಟಿವ್ ಬಂದರೆ ವೈದ್ಯರನ್ನು ಭೇಟಿಯಾಗಿ, ಚಿಕಿತ್ಸೆ ಪಡೆಯಬೇಕು.
ಮಧುಮೇಹ ಬಾರದಂತೆ ತಡೆಗಟ್ಟಲು ಸಕ್ಕರೆ ಅಂಶ ಹೆಚ್ಚಾಗಿರುವ ಪದಾರ್ಥ, ಕಾರ್ಬೋನೇಟೆಡ್ ಅಂಶದ ಪಾನೀಯಗಳು, ಬೇಕರಿ ಆಹಾರ, ಸಿದ್ಧ ಹಣ್ಣಿನ ರಸ, ಎಣ್ಣೆ ಪದಾರ್ಥ, ಕುರುಕುಲು ತಿಂಡಿಗಳನ್ನು ಸೇವಿಸುವುದನ್ನು ಬಿಡಬೇಕು. ಪ್ರತಿದಿನ ಅರ್ಧಗಂಟೆ ವ್ಯಾಯಾಮ ಮಾಡಬೇಕು. ವಾಕಿಂಗ್, ಜಾಗಿಂಗ್, ಸ್ವಿಮ್ಮಿಂಗ್ ಮಾಡಬಹುದು. ಯೋಗ– ಧ್ಯಾನ ಮಾಡಬಹುದು. ಸಕ್ಕರೆ ಕಾಯಿಲೆ ಹಾಗೂ ಬಿ.ಪಿ ಬರುವುದನ್ನು ತಡೆಗಟ್ಟಬಹುದು.
* ಸಂದೀಪ, ಹುಬ್ಬಳ್ಳಿ: ನನಗೆ 48 ವರ್ಷ ವಯಸ್ಸಾಗಿದೆ. ಬಿ.ಪಿ/ ಶುಗರ್ ಇದೆ. ಕಚೇರಿಯಲ್ಲಿ ಕುಳಿತು ಕೆಲಸ ಮಾಡುತ್ತೇನೆ. ಆಗಾಗ ಕಾಲಿಗೆ ಬಾವು ಬರುತ್ತಿದೆ.
– ಉಪ್ಪು ಕಡಿಮೆ ತೆಗೆದುಕೊಳ್ಳಿ, ಬಿಪಿ/ ಶುಗರ್ ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಪ್ರತಿದಿನ ವಾಕಿಂಗ್ ಮಾಡಿ. ನೀರು ಚೆನ್ನಾಗಿ ಕುಡಿಯಿರಿ ಇಷ್ಟು ಸಾಕು. ಓಡಾಡಲು ತೊಂದರೆ ಇಲ್ಲದಿದ್ದರೆ ತಲೆಕೆಡಿಸಿಕೊಳ್ಳಬೇಡಿ. ಮೂರು ತಿಂಗಳಿಗೊಮ್ಮೆ ಬಿಪಿ/ ಶುಗರ್ ಪರೀಕ್ಷೆ ಮಾಡಿಸಿಕೊಳ್ಳಿ
* ಬಸವರಾಜ ಪಾಟೀಲ, ಗರಗ: ತಂದೆಯವರಿಗೆ ಹೈಪರ್ ಶುಗರ್ ಇದೆ. ಮಧುಮೇಹಕ್ಕೆ ಸಂಬಂಧಿಸಿದ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರು. ಕಾಲು ಬಾವು ಬಂದಿದೆ.
– ಕಿಡ್ನಿ ಎಫೆಕ್ಟ್ ಆಗಿರುವುದರಿಂದ ಅವರ ಕಾಲುಗಳಿಗೆ ಬಾವು ಬರುತ್ತಿದೆ. ಶುಗರ್ ನಿಯಂತ್ರಣಕ್ಕೆ ಬಾರದಿದ್ದರೆ ಇನ್‌ಸುಲಿನ್ ಕೊಡಬೇಕು. ಕಿಡ್ನಿ ಸಮಸ್ಯೆಯಿಂದ ಕ್ಯಾಲ್ಸಿಯಂ, ಹಿಮೋಗ್ಲೋಬಿನ್ ಕಡಿಮೆಯಾಗುತ್ತದೆ. ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳಿ. ರೋಗಿಯ ಸ್ಥಿತಿಗತಿ ನೋಡಿ, ಡಯಾಲಿಸಿಸ್ ಮಾಡಲಾಗುತ್ತದೆ.
* ಕಲ್ಪನಾ: ನನಗೆ ಕಿಡ್ನಿ ತೊಂದರೆಯಾಗಿತ್ತು. ವೈದ್ಯರಿಗೆ ತೋರಿಸಿ, ಹರಳನ್ನು ತೆಗೆಸಿದ್ದೇನೆ. ಈಗ ನನ್ನ ತೂಕ 4ರಿಂದ5 ಕೆ.ಜಿ ಕಡಿಮೆಯಾಗಿದೆ. ಯಾಕೆ ತೂಕ ಕಡಿಮೆಯಾಗಿದೆ?
– ಹಿಮೋಗ್ಲೋಬಿನ್ ಪ್ರಮಾಣ ಪರೀಕ್ಷೆ ಮಾಡಬೇಕಾಗುತ್ತದೆ. ಮತ್ತೊಮ್ಮೆ ವೈದ್ಯರನ್ನು ಭೇಟಿಯಾಗಿ, ತೋರಿಸಿಕೊಳ್ಳಿ. ಹಿಮೋಗ್ಲೋಬಿನ್ ಕಡಿಮೆಯಾಗಿದ್ದರೆ ಮಾತ್ರೆ ತೆಗೆದುಕೊಳ್ಳಬೇಕಾಗುತ್ತದೆ. ಯೂರಿನ್, ಕ್ರಿಯಾಟಿನ್ ಪರೀಕ್ಷೆ ಮಾಡಿಸಿಕೊಳ್ಳಿ.
* ಸಂಜು, ನವಲಗುಂದ: ಪ್ಯಾಂಟ್ ಬೆಲ್ಟ್ ಧರಿಸುವ ಜಾಗ ಕಪ್ಪಾಗುತ್ತಿದೆ. ಇದರಿಂದ ಕಿಡ್ನಿಗೆ ಏನಾದರೂ ತೊಂದರೆಯಾಗುತ್ತದೆಯೇ?
– ಬೆಲ್ಟ್ ಧರಿಸುವುದರಿಂದ ಚರ್ಮದ ಮೇಲೆ ಪ್ರೇಷರ್ ಬಿದ್ದು ಕಪ್ಪಾಗುತ್ತಿದೆ ಹೊರತು, ಕಿಡ್ನಿಗೆ ತೊಂದರೆ ಏನೂ ಇಲ್ಲ. ಬೆಲ್ಟ್ ಧರಿಸುವ ಜಾಗದಿಂದ ಮೇಲಿನ ಭಾಗದಲ್ಲಿ ಕಿಡ್ನಿ ಇರುತ್ತದೆ. ಬೆಲ್ಟ್ ಸಡಿಲಾಗಿ ಧರಿಸಿ.
* ಅರುಣ, ಕುಂದಗೋಳ: ನನಗೀಗ 31 ವರ್ಷ. ನನಗೆ ಕಿಡ್ನಿ ಹರಳುಗಳಾಗಿದ್ದವು. ಚಿಕಿತ್ಸೆ ಮೂಲಕ ತೆಗೆಸಿದ್ದೇನೆ. ಪುನಃ ಹರಳುಗಳು ನಿರ್ಮಾಣವಾಗುವ ಸಾಧ್ಯತೆ ಇದೆಯೇ, ಹೆಚ್ಚು ಹಾಲು ಕುಡಿದರೆ ಹರಳುಗಳು ಆಗುವ ಸಾಧ್ಯತೆ ಇದೆಯೇ
– ಬೇಸಿಗೆ ಕಾಲದಲ್ಲಿ ಹೆಚ್ಚು ಓಡಾಡುತ್ತಿರುವುದರಿಂದ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ, ಕಿಡ್ನಿ ಹರಳುಗಳು ಆಗುವ ಸಾಧ್ಯತೆ ಇದೆ. ನಿಮಗೆ ಪುನಃ ಹರಳಾಗುವ ಸಾಧ್ಯತೆ ಇದೆ. ನೀರು ಚೆನ್ನಾಗಿ ಕುಡಿಯಿರಿ, ಡ್ರೈಫ್ರುಟ್ಸ್ ಕಡಿಮೆ ತಿನ್ನಿರಿ. ಜೀವನ ಶೈಲಿ ಸುಧಾರಿಸಿಕೊಳ್ಳಿ. ಹಾಲು ಕುಡಿಯುವುದರಿಂದ ಹರಳು ಆಗುವ ಸಾಧ್ಯತೆ ಇಲ್ಲ.
* ಅಶ್ವಿನಿ, ಧಾರವಾಡ; ಬದರಿನಾರಾಯಣ, ಧಾರವಾಡ; ಮಧುಮೇಹ ಇರುವವರಿಗೆ ಕಿಡ್ನಿ ಸಮಸ್ಯೆ ಬರುವ ಸಾಧ್ಯತೆ ಇದೆಯೇ? ಮುನ್ನೆಚ್ಚರಿಕೆ ಕ್ರಮಗಳೇನು?
–ಮಧುಮೇಹದಿಂದ ಕಿಡ್ನಿ ಸಮಸ್ಯೆ ಬರುತ್ತದೆ. ಹೀಗಾಗಿ ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಕೆಲವರಿಗೆ ರಕ್ತದೊತ್ತಡದಿಂದ ಕಿಡ್ನಿ ತೊಂದರೆ ಆಗುತ್ತದೆ. ಇನ್ನೂ ಕೆಲವರಿಗೆ ಬಿಪಿ ಮತ್ತು ಕಿಡ್ನಿ ಸಮಸ್ಯೆ ಒಟ್ಟಿಗೆ ಶುರುವಾಗುತ್ತದೆ. ಇದನ್ನು ನಿಯಂತ್ರಿಸಲು ವೈದ್ಯರು ಸೂಚಿಸಿದ ಔಷಧ ಸೇವಿಸಬೇಕು.
ಪಪ್ಪಾಯ, ಮೂಸಂಬಿ, ಕಿತ್ತಳೆ, ಸಿರಿಧಾನ್ಯಗಳನ್ನು ಸೇವಿಸಬೇಕು. ಬಾಳೆಹಣ್ಣು, ಸಪೋಟಾ ತಿನ್ನಬಾರದು. ಅನ್ನ ಸೇವನೆ ಕಡಿಮೆ ಮಾಡಬೇಕು. ವೈದ್ಯರ ಸಲಹೆ ಇಲ್ಲದೆ ನೋವು ನಿವಾರಕಗಳನ್ನು ತೆಗೆದುಕೊಳ್ಳಬಾರದು. 35ಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಬಿಪಿ ಬಂದರೆ ಕಿಡ್ನಿ, ಯೂರಿನ್ ಟೆಸ್ಟ್ ಮಾಡಿಸಬೇಕು.
* ಪವನ್ ಪಾಟೀಲ, ಕುಂದಗೋಳ; ಫ್ಯಾಟಿ ಲಿವರ್ ಸಮಸ್ಯೆ ಇದೆ. ಇದರಿಂದ ಕಿಡ್ನಿ ಮೇಲೆ ಪರಣಾಮ ಬೀರುತ್ತದೆಯೇ?
–ಫ್ಯಾಟಿ ಲಿವರ್‌ನಿಂದ ನೇರವಾಗಿ ಕಿಡ್ನಿ ಸಮಸ್ಯೆ ಉಂಟಾಗುವುದಿಲ್ಲ. ಬೊಜ್ಜು, ಮಧುಮೇಹ ಇದ್ದರೆ ಫ್ಯಾಟಿ ಲಿವರ್ ಸಮಸ್ಯೆ ಬರುತ್ತದೆ. ಮಧುಮೇಹ, ಬೊಜ್ಜಿನಿಂದ ಕಿಡ್ನಿ ಸಮಸ್ಯೆ ಬರುತ್ತದೆ. ತೂಕ ಕಡಿಮೆ ಮಾಡಿಕೊಳ್ಳಬೇಕು. ಮಧುಮೇಹ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಮಧುಮೇಹ ರೋಗಿಳು ತೆಗೆದುಕೊಳ್ಳುವ ಇನ್ಸುಲಿನ್‌ನಿಂದ ಕಿಡ್ನಿ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ.
* ಶರಣಪ್ಪ, ಗದಗ; ಕಿಡ್ನಿ ಆರೋಗ್ಯ ರಕ್ಷಣೆ ಮಾಡಿಕೊಳ್ಳುವುದು ಹೇಗೆ?
–ಮೂತ್ರ ಬಂದರೆ ತಡೆದುಕೊಳ್ಳಬಾರದು. ಹಣ್ಣು, ತರಕಾರಿ ಹೆಚ್ಚು ಸೇವಿಸಬೇಕು. ಮಾಂಸಾಹಾರ ಸೇವನೆ ಕಡಿಮೆ ಮಾಡಬೇಕು. ಪ್ರತಿ ಆರು ತಿಂಗಳಿಗೊಮ್ಮೆ ಮೂತ್ರ, ರಕ್ತ ಪರೀಕ್ಷೆ ಮಾಡಿಸಬೇಕು.
* ಆನಂದ, ಐನಾಪುರ; ಕಿಡ್ನಿ ಕಸಿ ಒಮ್ಮೆ ಮಾಡಿಸಿದರೆ ಸಾಕಾ ಅಥವಾ ಮತ್ತೆ ಮತ್ತೆ ಮಾಡಿಸಬೇಕಾ?
–ಇದು ರೋಗಿಯ ವಯಸ್ಸಿನ ಮೇಲೆ ನಿರ್ಧಾರವಾಗುತ್ತದೆ. ಎಂಟರಿಂದ ಹತ್ತು ವರ್ಷದ ಮಕ್ಕಳಲ್ಲಿಯೂ ಕಿಡ್ನಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅವರಿಗೆ ಕಿಡ್ನಿ ಕಸಿ ಮಾಡಿಸಿದರೆ 20ರಿಂದ 30 ವರ್ಷದವರೆಗೆ ಯಾವುದೇ ಸಮಸ್ಯೆ ಇರುವುದರಿಲ್ಲ. ಅಗತ್ಯವಿದ್ದರೆ ಮತ್ತೆ ಎರಡನೇ ಕಸಿ ಮಾಡಬೇಕಾಗುತ್ತದೆ. ರೋಗಿ 40 ವರ್ಷದವರಿದ್ದರೆ ಸಕ್ಸಸ್ ರೇಟ್ ಶೇ 80ರಿಂದ 90ರಷ್ಟಿರುತ್ತದೆ.
ಕಿಡ್ನಿ ಕಸಿ ಮಾಡಿಸಿಕೊಂಡ ನಂತರ 40ಕ್ಕಿಂತ ಹೆಚ್ಚು ವರ್ಷ ಬದುಕಿದವರು ಇದ್ದಾರೆ. ಕಿಡ್ನಿ ಕಸಿ ಮಾಡಿಸಿಕೊಂಡ ಒಬ್ಬ ವ್ಯಕ್ತಿ 45 ವರ್ಷ ಆದ ನಂತರ ಅಪಘಾತದಲ್ಲಿ ಮೃತಪಟ್ಟಿದ್ದು, ಕಿಡ್ನಿ ಸಮಸ್ಯೆಯಿಂದಲ್ಲ.
ಲೇಸರ್ ಮೂಲಕ ಕಿಡ್ನಿ ಹರಳು ತೆಗೆಯಬಹುದು
ಇಂದಿನ ಆಧುನಿಕ ತಂತ್ರಜ್ಞಾನ ಬಳಸಿ ಲೇಸರ್ ಮೂಲಕ ಕಿಡ್ನಿ ಹರಳುಗಳನ್ನು ತೆಗೆಯಬಹುದು. ಎಲ್ಲ ಹರಳುಗಳಿಗೆ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇರುವುದಿಲ್ಲ. 4ಎಂಎಂ– 5ಎಂಎಂ ಹರಳುಗಳನ್ನು ಮಾತ್ರೆ ಮೂಲಕ ಹೊರತೆಗೆಯಬಹುದು. ಈ ಹರಳುಗಳು ಮೂತ್ರನಾಳ ಬ್ಲಾಕ್ ಮಾಡಿದ್ದರೆ ಮಾತ್ರ ಚಿಕಿತ್ಸೆ ನೀಡಬೇಕಾಗುತ್ತದೆ. ಲಕ್ಷಣಗಳು; ಆಗಾಗ್ಗೆ ಬೆನ್ನು ನೋವು ಬರುವುದು ವಾಂತಿ ಪದೆ ಪದೆ ಮೂತ್ರ ಮಾಡಬೇಕು ಅನಿಸುವುದು ಮೂತ್ರದಲ್ಲಿ ರಕ್ತ ಬರುವುದು ಉರಿಯಾಗುವುದು ಮೂತ್ರ ಮಾಡಿದರೂ ಮೂತ್ರ ಬಾರದಿರುವುದು ಕಿಡ್ನಿ ಕಲ್ಲಿನ ಲಕ್ಷಣಗಳಾಗಿವೆ.
ಡ್ರೈಫ್ರುಟ್ಸ್ ಎಚ್ಚರಿಕೆಯಿಂದ ತಿನ್ನಿ
ಡ್ರೈಫ್ರುಟ್ಸ್ ಪಾಲಕ್ ಶೇಂಗಾ ಹರ್ಬಲ್ ಟೀ ಚಾಕೊಲೇಟ್ ಪದಾರ್ಥಗಳಲ್ಲಿ ಓಕ್ಸಲೇಟ್ ಅಂಶ ಹೆಚ್ಚಿರುತ್ತದೆ. ಓಕ್ಸಲೇಟ್ ಅಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಕಿಡ್ನಿಯಲ್ಲಿ ಹರಳಾಗುವ ಸಾಧ್ಯತೆ ಇರುತ್ತದೆ. ಓಕ್ಸಲೇಟ್ ಎನ್ನುವ ಅಂಶ ಕ್ಯಾಲ್ಸಿಯಂ ಜೊತೆ ಸೇರಿ ಓಕ್ಸಲೇಟ್ ಕ್ಯಾಲಿಯಂ ಎನ್ನುವ ಅಂಶ ತಯಾರಾಗುತ್ತದೆ. ನೂರರಲ್ಲಿ 75ರಿಂದ80ರಷ್ಟು ಜನರಿಗೆ ಕ್ಯಾಲ್ಸಿಯಂ ಓಕ್ಸಲೇಟ್‌ನಿಂದಲೇ ಕಿಡ್ನಿ ಹರಳಾಗುತ್ತವೆ. ಅದಕ್ಕಾಗಿ ಇವುಗಳನ್ನು ಹೆಚ್ಚು ಸೇವಿಸಬಾರದು.
ದೀರ್ಘಕಾಲ ಔಷಧಿ ಸೇವಿಸುವುದರ ಪರಿಣಾಮ
ಕೆಲವು ಔಷಧಿಗಳ ಸೇವನೆಯಿಂದ ಕಿಡ್ನಿಯ ಮೇಲೆ ಪರಿಣಾಮ ಉಂಟಾಗುತ್ತದೆ. ಉದಾಹರಣೆಗೆ ನೋವು ನಿವಾರಕ ಮಾತ್ರೆಗಳು ಆ್ಯಂಟಿಬಯೋಟಿಕ್ಸ್ ಹರ್ಬಲ್ ಔಷಧಿಗಳಿಂದಲೂ ತೊಂದರೆ ಆಗುತ್ತದೆ. ಕೆಲವರು ಹಲ್ಲು ನೋವು ಬಂದಾಗ ವೈದ್ಯರನ್ನು ಭೇಟಿಯಾಗದೆ ನೇರವಾಗಿ ಔಷಧಿ ಅಂಗಡಿಗೆ ಹೋಗಿ ಮಾತ್ರೆ ತೆಗೆದುಕೊಂಡು ಬಿಡುತ್ತಾರೆ. ಇದು ಕಿಡ್ನಿಯ ಮೇಲೆ ಪರಿಣಾಮ ಬೀರುತ್ತದೆ. ಯಾವುದೇ ನೋವು ನಿವಾರಕ ಮಾತ್ರೆಗಳನ್ನು ವೈದ್ಯರ ಸಲಹೆ ಇಲ್ಲದೇ ತೆಗೆದುಕೊಳ್ಳಬಾರದು. ಬಿಯರ್ ಸೇವನೆ; ಮಿಥ್ಯ ಬಿಯರ್ ಸೇವಿಸಿದರೆ ಕಿಡ್ನಿ ಹರಳುಗಳು ಕರಗಿಹೋಗುತ್ತವೆ ಎನ್ನುವುದು ಮಿಥ್ಯ. ಬಿಯರ್‌ನಲ್ಲಿ ಫಾಸಫರಿಕ್ ಆ್ಯಸಿಡ್ ಇದ್ದು ಇದರಿಂದ ಕಿಡ್ನಿ ಸ್ಟೋನ್ ಆಗುವ ಸಾಧ್ಯತೆ ಇರುತ್ತದೆ. ಬಿಯರ್ ಕುಡಿಯುವುದು ಒಳ್ಳೆಯದಲ್ಲ. ಇದರ ಬದಲಿ ನೀರು ಕುಡಿಯುವುದೇ ವಾಸಿ.
ಸರ್ಕಾರಿ ಯೋಜನೆಗಳ ಪ್ರಯೋಜನ
ಎಲ್ಲ ಜಿಲ್ಲಾ ತಾಲ್ಲೂಕು ಮಟ್ಟದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರಗಳಿವೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಕಿಡ್ನಿ ಕಸಿ ಕೂಡ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಮಾಡಲಾಗುತ್ತಿದೆ. ನಮ್ಮ ಸುಚಿರಾಯ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡಿದ್ದೆವೆ. 10ರಲ್ಲಿ 4 ಜನ ಅಪಘಾತದಲ್ಲಿ ಸಾವಿಗೀಡಾದವರ ಕಿಡ್ನಿ ತೆಗೆದು ಬೇರೆಯವರಿಗೆ ಹಾಕಿದ್ದೇವೆ. ಸಂಸದರು/ ಶಾಸಕರ ನಿಧಿಯಿಂದ ಬಡರೋಗಿಗಳಿಗೆ ನೆರವು ಒದಗಿಸಲಾಗಿದೆ. ಪೊಲೀಸ್ ಯೋಜನೆ ಬಿಪಿಎಲ್ ಯೋಜನೆಯಡಿ ಕಿಡ್ನಿ ಕಸಿ ಮಾಡಿಸಬಹುದು. ಇದಲ್ಲದೇ ಇತ್ತೀಚೆಗೆ ಆರೋಗ್ಯ ಸಚಿವರು ಕಿಡ್ನಿ ಕಸಿಗೆ ಹೆಚ್ಚಿನ ಆರ್ಥಿಕ ನೆರವು ಒದಗಿಸುವುದಾಗಿ ಭರವಸೆ ನೀಡಿದ್ದಾರೆ.
ಡಯಾಲಿಸಿಸ್ ಕಿಡ್ನಿ ಕಸಿ
ಇನ್‌ಫೆಕ್ಷನ್ ಅಪಘಾತದದಿಂದ ತೀವ್ರ ರಕ್ತಸ್ರಾವವಾಗಿ ಕಿಡ್ನಿಗೆ ರಕ್ತ ಸಂಚಲನ ಆಗದಿರುವುದು ವಾಂತಿ ಭೇದಿ ರಕ್ತದೊತ್ತಡ ಕಡಿಮೆಯಾಗಿ ಕಿಡ್ನಿಗೆ ಸಮಸ್ಯೆಯಾಗುವುದನ್ನು ತಾತ್ಕಾಲಿಕ ಕಿಡ್ನಿ ಸಮಸ್ಯೆ ಎಂದು ಗುರುತಿಸಲಾಗುತ್ತದೆ. ಸಮಸ್ಯೆ ಪತ್ತೆ ಮಾಡಿ ತಕ್ಷಣ ಚಿಕಿತ್ಸೆ ನೀಡಿದರೆ ಕಿಡ್ನಿಗಳು ಮತ್ತೆ ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಈ ಹಂತದಲ್ಲಿ ಎರಡು ಮೂರು ಬಾರು ಡಯಾಲಿಸಿಸ್ ಮಾಡಿದರೆ ಸಾಕಾಗುತ್ತದೆ.
ದೀರ್ಘಕಾಲಿಕ ಕಿಡ್ನಿ ಸಮಸ್ಯೆ; ಮೂರು ತಿಂಗಳಿಗಿಂತ ಹೆಚ್ಚು ಸಮಸ್ಯೆ ಕಾಣಿಸಿಕೊಂಡರೆ ಇದನ್ನು ದೀರ್ಘಕಾಲಿಕ ಕಿಡ್ನಿ ತೊಂದರೆ ಎನ್ನಲಾಗುತ್ತದೆ. ಇದರಲ್ಲಿ ಐದು ಹಂತಗಳಿದ್ದು ನಾಲ್ಕು ಹಂತದವರೆಗೆ ಡಯಾಲಿಸಿಸ್ ಕಿಡ್ನಿ ಕಸಿ ಅಗತ್ಯ ಇರುವುದಿಲ್ಲ. ಐದನೇ ಹಂತದಲ್ಲಿ ವ್ಯಕ್ತಿ ಬದುಕುಳಿಯಬೇಕಾದರೆ ಕಿಡ್ನಿ ಕಸಿ ಮಾಡಬೇಕಾಗುತ್ತದೆ. ದೇಹದಲ್ಲಿ ವಿಷಕಾರಿ ಪದಾರ್ಥಗಳನ್ನು ಹೊರ ಹಾಕುವುದು ರಕ್ತದೊತ್ತಡ ನಿಯಂತ್ರಣ ಲವಣಾಂಶ ನಿಯಂತ್ರಣ ಮಾಡುವುದು ಕಿಡ್ನಿ ಕೆಲಸ.
ದೇಹದಲ್ಲಿನ ವಿಷಕಾರಿ ಪದಾರ್ಥಗಳನ್ನು ಮಾತ್ರ ಹೊರಹಾಕುವ ಕೆಲಸವನ್ನು ಡಯಾಲಿಸಿಸ್ ಮಾಡುತ್ತದೆ. ಉಳಿದ ಕೆಲಸಗಳು ಆಗಬೇಕಾದೆ ಕಿಡ್ನಿ ಕಸಿ ಮಾಡಬೇಕು. ಆಗ ಮಾತ್ರ ವ್ಯಕ್ತಿ ಸಹಜವಾಗಿ ಜೀವನ ನಡೆಸಬಹುದು. ಡಯಾಲಿಸಿಸ್ ಹಂತಕ್ಕೆ ಹೋದರೆ ಕಿಡ್ನಿ ಕಸಿ ಮಾಡಿಸುವುದು ಉತ್ತಮ. ರೋಗಿಯ ಸ್ಥಿತಿ ಆಧರಿಸಿ ವಾರಕ್ಕೆ ಎರಡು ಅಥವಾ 3 ಬಾರಿ 15 ದಿನಗಳಿಗ ಒಮ್ಮೆ ಡಯಾಲಿಸಿಸ್ ಮಾಡಬೇಕಾಗುತ್ತದೆ.
ತಂಬಾಕು ಸೇವನೆ ಬಿಡಿ
ಯುವಕರಲ್ಲಿ ತಂಬಾಕು ಸೇವನೆ ಧೂಮಪಾನ ಮಾಡುವುದು ಹೆಚ್ಚಾಗಿದೆ. ಇದರಿಂದ ಕ್ಯಾನ್ಸರ್ ಪಾರ್ಶ್ವವಾಯು ಹೃದಯಾಘಾತ ಆಗುವ ಸಾಧ್ಯತೆ ಹೆಚ್ಚು ಇರುತ್ತದೆ. ತಂಬಾಕು ಸೇವನೆಯಿಂದ ದೇಹದ ಎಲ್ಲ ಅಂಗಾಂಗಗಳ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಈ ವ್ಯಸನವನ್ನು ಬಿಡಬೇಕು. ಕಿಡ್ನಿಯ ರಕ್ತನಾಳ ಬ್ಲಾಕ್ ಆದರೆ ರಕ್ತದೊತ್ತಡ ಪಾರ್ಶ್ವವಾಯು ಆಗುತ್ತದೆ. ಕಿಡ್ನಿ ತನ್ನ ಶಕ್ತಿ ಕಳೆದುಕೊಳ್ಳುತ್ತದೆ. ಧೂಮಪಾನದಿಂದ ನರವ್ಯೂಹದ ಮೇಲೆ ಪರಿಣಾಮ ಉಂಟಾಗುತ್ತದೆ. ರಕ್ತದೊತ್ತಡ ಮಧುಮೇಹದ ಸಮತೋಲನ ವ್ಯವಸ್ಥೆ ಹಾಳಾಗುತ್ತದೆ.
ವಿಶ್ವ ಕಿಡ್ನಿ ದಿನಾಚರಣೆ
ವಿಶ್ವ ಕಿಡ್ನಿ ದಿನವನ್ನು ಪ್ರತಿ ವರ್ಷ ಮಾರ್ಚ್ ತಿಂಗಳ ಎರಡನೇ ಗುರುವಾರ ಆಚರಿಸಲಾಗುತ್ತದೆ. ಜನಸಾಮಾನ್ಯರಲ್ಲಿ ಕಿಡ್ನಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಈ ದಿನದ ಉದ್ದೇಶ. ಕಿಡ್ನಿಗಳ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಪ್ರಾರಂಭಿಕ ಹಂತದಲ್ಲೇ ರೋಗವನ್ನು ಪತ್ತೆ ಮಾಡಿ ಚಿಕಿತ್ಸೆ ನೀಡಬಹುದು.
ಕಿಡ್ನಿ ಸಮಸ್ಯೆಯ ಲಕ್ಷಣಗಳು ತುಂಬಾ ಕಡಿಮೆ. ಬಹುತೇಕರು ಇದನ್ನು ನಿರ್ಲಕ್ಷ್ಯ ಮಾಡುತ್ತಾರೆ. ಹಾಗೆ ಮಾಡದೆ ಪ್ರತಿ 6 ತಿಂಗಳಿಗೊಮ್ಮೆ ಕಿಡ್ನಿ ಮೂತ್ರ ಹೃದ್ರೋಗ ತಪಾಸಣೆ ಮಾಡಿಸಬೇಕು. ಇದರಿಂದ ಕಿಡ್ನಿ ಸಮಸ್ಯೆ ಬೇಗ ಪತ್ತೆ ಮಾಡಿ ಗುಣಪಡಿಸಬಹುದು. ಐದನೇ ಹಂತದಲ್ಲಿ ಕೆಲವು ರೋಗಿಗಳು ಬರುತ್ತಾರೆ. ಆಗ ಬೇರೆ ದಾರಿ ಇಲ್ಲದೆ ಡಯಾಲಿಸಿಸ್ ಮಾಡಬೇಕಾಗುತ್ತದೆ. ಕಿಡ್ನಿ ಸಮಸ್ಯೆಗೆ ಡಯಾಲಿಸಿಸ್ ಒಂದೇ ಪರಿಹಾರ ಅಲ್ಲ ಕಿಡ್ನಿ ಕಸಿ ಸಹ ಮಾಡಿಸಬಹುದು. ರೋಗಿಯ ಕುಟುಂಬದವರು ಕಿಡ್ನಿ ದಾನ ಮಾಡಲು ಮುಂದೆ ಬರಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.