
ಹುಬ್ಬಳ್ಳಿ: ಇಲ್ಲಿನ ಸವಾಯಿ ಗಂಧರ್ವ ಸಭಾಂಗಣದಲ್ಲಿ ಬುಧವಾರ ನಡೆದ ‘ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಶಿಪ್’ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆ ಬ್ರಹ್ಮಾವರದ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್‌ನ ಸೃಜನ್ ನವೀನ್ ಯಾಪಲಪರ್ವಿ ಹಾಗೂ ತಕ್ಷಕ್ ಶೆಟ್ಟಿ 111 ಅಂಕ ಗಳಿಸಿ, ಜಯ ಗಳಿಸಿದರು. ₹ 5 ಸಾವಿರ ಬಹುಮಾನ ಗಳಿಸಿದ ಅವರು, ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾದರು.
ಮೊದಲ ರನ್ನರ್ ಅಪ್ ಆದ ಅದೇ ಶಾಲೆಯ ಸ್ಕಂದ ಜೆ. ಶೆಟ್ಟಿ ಹಾಗೂ ಓಜಸ್ ದಿನೇಶ್ (40 ಅಂಕ) ಅವರಿಗೆ ₹3 ಸಾವಿರ, ಎರಡನೇ ರನ್ನರ್ ಅಪ್ ಆದ ಹುಬ್ಬಳ್ಳಿಯ ಚಿನ್ಮಯ ವಿದ್ಯಾಲಯದ ಕೌಸ್ತುಬ್ ಕುಲಕರ್ಣಿ ಹಾಗೂ ಸಾಕ್ಷಿ ಕುಲಕರ್ಣಿ (30 ಅಂಕ) ಅವರಿಗೆ ₹2 ಸಾವಿರ ನಗದು ಬಹುಮಾನ ವಿತರಿಸಲಾಯಿತು.
ಧಾರವಾಡದ ಸರ್ಕಾರಿ ಆದರ್ಶ ವಿದ್ಯಾಲಯದ ಸಮರ್ಥ ಪತ್ತಾರ ಹಾಗೂ ಶ್ರೀಧರ ಸೂರ್ಯವಂಶಿ, ಉತ್ತರ ಕನ್ನಡ ಜಿಲ್ಲೆ ಕುಮಟಾದ ಸಿವಿಎಸ್‌ಕೆ ಪ್ರೌಢಶಾಲೆಯ ಅಮೋಘ ಹೆಗ್ಡೆ ಹಾಗೂ ನಿತೇಶ ಪಟಗಾರ, ಉತ್ತರ ಕನ್ನಡದ ಪಿಎಂಶ್ರೀ ಶಾಲೆಯ ಮನೋಜ್ ಎಂ.ಎಸ್. ಹಾಗೂ ತೇಜಸ್ ಜಿ.ಜಿ. ಅವರು ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾಗಿ, ಎರಡನೇ ಹಂತದಲ್ಲಿ ಸ್ಪರ್ಧಿಸಿದರು.
ಇದಕ್ಕೂ ಮುನ್ನ ಕಾರ್ಯಕ್ರಮಕ್ಕೆ ಉದ್ಘಾಟಿಸಿದ ಶಾಲಾ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಈಶ್ವರ ಉಳ್ಳಾಗಡ್ಡಿ ಮಾತನಾಡಿ, ‘ಪ್ರಜಾವಾಣಿ ದಿನಪತ್ರಿಕೆ ಆಯೋಜಿಸಿರುವ ಈ ಸ್ಪರ್ಧೆ ವಿಶೇಷವಾಗಿದೆ. ಉತ್ತರ ಕರ್ನಾಟಕ ವಿದ್ಯಾರ್ಥಿಗಳಿಗೆ ಇದು ಉತ್ತಮ ವೇದಿಕೆಯಾಗಿದ್ದು, ಪ್ರತಿಭಾ ಪ್ರದರ್ಶನಕ್ಕೆ ಸಹಕಾರಿ. ಪ್ರತಿದಿನ ಪಠ್ಯಕ್ರಮ ಅಧ್ಯಯನ ಮಾಡುವುದರ ಜೊತೆಗೆ ಇಂತಹ ಪಠ್ಯೇತರ ಚಟುವಟಕೆಗಳ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು. ಇದರಿಂದ ವ್ಯಕ್ತಿತ್ವ ವಿಕಸನ, ಸರ್ವಾಂಗೀಣ ಅಭಿವೃದ್ದಿ ಸಾಧ್ಯ’ ಎಂದರು.
ಸ್ಪರ್ಧೆಯಲ್ಲಿ ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಬೆಳಗಾವಿ, ಬಳ್ಳಾರಿ, ಕೊಪ್ಪಳ, ಉಡುಪಿ, ವಿಜಯನಗರ, ಬಳ್ಳಾರಿ ಜಿಲ್ಲೆಯ 7 ರಿಂದ 10ನೇ ತರಗತಿಯ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕ್ವಿಜ್ ಮಾಸ್ಟರ್ ಮೇಘವಿ ಮಂಜುನಾಥ ಸ್ಪರ್ಧೆ ನಿರ್ವಹಿಸಿದರು.
ಹುಬ್ಬಳ್ಳಿಯ ವಲಯದ ಅಂತಿಮ ಹಂತಕ್ಕೆ 6 ತಂಡಗಳನ್ನು ಆಯ್ಕೆ ಮಾಡಲು ಲಿಖಿತ ರೂಪದಲ್ಲಿ ಮುಕ್ತ ರಸಪ್ರಶ್ನೆ ಸ್ಪರ್ಧೆ ನಡೆಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು 20 ಪ್ರಶ್ನೆಗಳಿಗೆ ಉತ್ತರಿಸಿದರು. ಅತ್ಯಧಿಕ ಸರಿ ಉತ್ತರಗಳನ್ನು ನೀಡಿದ ಶಾಲಾ ತಂಡಗಳನ್ನು ಆಯ್ಕೆ ಮಾಡಿ, ಅಂತಿಮ ಹಂತಕ್ಕೆ ಆಯ್ಕೆ ಮಾಡಲಾಯಿತು.
ಕ್ವಿಜ್ ಸ್ಪರ್ಧೆಯಲ್ಲಿ ವಿಜೇತರಿಗೆ ಶಹರ ತಹಶೀಲ್ದಾರ್ ಮಹೇಶ ಗಸ್ತೆ ಬಹುಮಾನ ವಿತರಿಸಿದರು. ಉತ್ತಮ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ‘ಪ್ರಜಾವಾಣಿ’ಗೆ ಅಭಿನಂದಿಸಿದರು.
ರಸಪ್ರಶ್ನೆ ಸ್ಪರ್ಧೆಯನ್ನು ಆರ್ಕಿಡ್ಸ್ ಇಂಟರ್‌ನ್ಯಾಷನಲ್ ಸ್ಕೂಲ್ ಪ್ರಸ್ತುತಪಡಿಸಿದೆ. ಎಸ್‌ಬಿಐ–ಬ್ಯಾಂಕಿಂಗ್ ಪಾರ್ಟನರ್, ಮೊಗು ಮೊಗು–ರಿಫ್ರೆಶಮೆಂಟ್ ಪಾರ್ಟನರ್, ಭೀಮಾ–ಸ್ಪೆಷಲ್ ಪಾರ್ಟನರ್, ನಂದಿನಿ–ನ್ಯೂಟ್ರಿಷನ್ ಪಾರ್ಟನರ್, ಏಷ್ಯಾನೆಟ್ ಸುವರ್ಣ ನ್ಯೂಸ್–ಟಿವಿ ಪಾರ್ಟನರ್ ಜೊತೆಗೆ ಪೂರ್ವಿಕಾ, ವಿಐಪಿಎಸ್, ಸ್ಪ್ರಿಂಟ್, ಐಸಿಎಸ್ ಮಹೇಶ್ ಪಿಯು ಕಾಲೇಜು, ಸೂಪರ್ ಬ್ರೇನ್, ಮಾರ್ಗದರ್ಶಿ, ದಿ ಟೀಮ್ ಅಕಾಡೆಮಿ, ಐಬಿಎಂಆರ್, ಮಂಗಳೂರು ಪಿಯು ಕಾಲೇಜು ಮತ್ತು ಶಾರದಾ ವಿದ್ಯಾಮಂದಿರದ ಸಹಯೋಗವಿದೆ.