ಹುಬ್ಬಳ್ಳಿ: ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಡಿ ವಿವರಣೆ ಕೇಳಲು ಸಮೀಕ್ಷೆದಾರರು ಬಂದರೆ, ನಾನು, ಕುಟುಂಬದವರು ಮಾಹಿತಿ ನೀಡುವುದಿಲ್ಲ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
‘ಸಿದ್ದರಾಮಯ್ಯ ಅವರು ತಮ್ಮ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಮತ್ತು ಸೋನಿಯಾ ಗಾಂಧಿ ಕುಟುಂಬದವರ ಅನುಕಂಪ ಗಿಟ್ಟಿಸಲು ಸಮೀಕ್ಷೆಯ ಷಡ್ಯಂತ್ರ ನಡೆಸಿದ್ದಾರೆ’ ಎಂದು ಅವರು ಭಾನುವಾರ ಸುದ್ದಿಗಾರರಿಗೆ ಮಾತನಾಡುತ್ತಾ ಆರೋಪಿಸಿದರು.
‘ಎಷ್ಟು ಆದಾಯವಿದೆ? ಎಷ್ಟು ಆದಾಯ ತೆರಿಗೆ ತುಂಬುತ್ತೀರಿ? ಮನೆಯಲ್ಲಿ ವಿಧವೆಯರು ಇದ್ದಾರೆಯೇ, ಜಾತಿ ತಾರತಮ್ಯ ಆಗಿದೆಯೇ ಎಂಬ ಮಾಹಿತಿ ಎಲ್ಲವನ್ನೂ ಸಮೀಕ್ಷೆಯಲ್ಲಿ ಪಡೆದು ಸರ್ಕಾರ ಏನು ಮಾಡಲಿದೆ’ ಎಂದು ಪ್ರಶ್ನಿಸಿದರು.
‘ಮಾಹಿತಿ ಗೋಪ್ಯವಾಗಿರಬೇಕು. ಹಿಂದಿನ ಸಮೀಕ್ಷೆ ಮಾಹಿತಿ ಸೋರಿಕೆಯಾಗಿದೆ. ಕೆಲ ಜಾತಿ ಕೈಬಿಡಲಾಗಿದೆ ಎಂದಿದ್ದಾರೆ. ಮುಜಾವರ್ ಬ್ರಾಹ್ಮಣ, ಲಿಂಗಾಯತ ಮುಸ್ಲಿಂ ಎಂಬ ಜಾತಿಗಳನ್ನು ಇನ್ನೂ ಕೈಬಿಟ್ಟಿಲ್ಲ. ಜನರನ್ನುತಪ್ಪು ದಾರಿಗೆ ಎಳೆಯಲಾಗುತ್ತಿದೆ’ ಎಂದರು.
ಬಿಜೆಪಿ ಬಿಹಾರದಲ್ಲಿ ಮಹಿಳೆಯರಿಗೆ ಗ್ಯಾರಂಟಿ ಯೋಜನೆ ಘೋಷಿಸಿದ ಕುರಿತ ಪ್ರಶ್ನೆಗೆ, ‘ಆದಾಯದ ಮಿತಿ ಅರಿತು ಘೋಷಿಸಲಾಗಿದೆ. ಇಲ್ಲಿನಂತೆ ಬೇಕಾಬಿಟ್ಟಿಯಾಗಿ ಅಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.