ಹುಬ್ಬಳ್ಳಿ: ‘ಮೂಕ ಪ್ರಾಣಿಗಳ ಕೆಚ್ಚಲು ಕತ್ತರಿಸಿ, ಹಿಂಸೆ ನೀಡಿದರೂ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಲ್ಲ. ಇಂಥ ಕೃತ್ಯಗಳು ರಾಜ್ಯದಲ್ಲಿ ಹೆಚ್ಚಾಗಲು ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯವೇ ಕಾರಣ. ಅಪರಾಧಿಗಳಿಗೆ ರಾಜ್ಯವು ಸ್ವರ್ಗವಾಗಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
ಬೆಂಗಳೂರಿನಲ್ಲಿ ಮೂರು ಹಸುಗಳ ಕೆಚ್ಚಲು ಕೊಯ್ದ ಪ್ರಕರಣ ಕುರಿತು ಸೋಮವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು,‘ಈ ಪ್ರಕರಣದ ವಿರುದ್ಧ ಹೋರಾಡಿದರೆ, ರಾಜಕೀಯ ಪ್ರೇರಿತ ಎಂದು ಮುಖ್ಯಮಂತ್ರಿ ಅಸಡ್ಡೆಯಿಂದ ಮಾತನಾಡುತ್ತಾರೆ. ಕಾಂಗ್ರೆಸ್ ಸರ್ಕಾರ ತಮ್ಮನ್ನು ರಕ್ಷಿಸುತ್ತದೆ ಎಂಬ ಧೈರ್ಯ ಸಮಾಜ ವಿದ್ರೋಹಿ ಶಕ್ತಿಗಳಿಗೆ ಬಂದಿದೆ. ಸರ್ಕಾರ ಗಟ್ಟಿಯಾಗಿದ್ದರೆ ಈ ರೀತಿ ನಡೆಯುವುದಿಲ್ಲ’ ಎಂದರು.
‘ಕಿಡಿಗೇಡಿಗಳು ಹಸುಗಳಿಗೆ ಹಿಂಸೆ ನೀಡಿ, ನರಳುವಂತೆ ಮಾಡಿದ್ದಾರೆ. ಆರೋಪಿಗಳು ಕುಡಿದ ಮತ್ತಿನಲ್ಲಿ ಏನನ್ನಾದರೂ ಮಾಡಬಹುದಾ? ಹಸುಗಳ ಮಾಲೀಕರಿಗೆ ಹೊಸ ಹಸುಗಳನ್ನು ಕೊಡಿಸುತ್ತೇವೆ ಎನ್ನುವ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಬುದ್ಧಿ ಇದೆಯೇ’ ಎಂದು ಅವರು ಪ್ರಶ್ನಿಸಿದರು.
ಬೂದಿ ಮುಚ್ಚಿದ ಕೆಂಡ:
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಷಯ ಕುರಿತು ಪ್ರತಿಕ್ರಿಯಿಸಿ ಜೋಶಿ, ‘ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಈ ವಿಷಯ ಬೂದಿ ಮುಚ್ಚಿದ ಕೆಂಡದಂತಿದೆ. ಈಗ ದೊಡ್ಡದಾಗಿ ಹೊರ ಬರುತ್ತಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸಿರ್ಜೇವಾಲಾ ಅವರು ರಾಜ್ಯಕ್ಕೆ ಬಂದು ಎಷ್ಟೇ ಸಭೆಗಳನ್ನು ಮಾಡಿದರೂ ಏನೂ ಆಗದು’ ಎಂದರು.
ಕಂದಾಯ ಇಲಾಖೆಯ ದಾಖಲೆಗಳ ಡಿಜಿಟಲೀಕರಣ ಕಾರ್ಯಕ್ರಮದ ಪ್ರಚಾರ ಪತ್ರಗಳಲ್ಲಿ ‘ಹಸ್ತ’ದ ಚಿಹ್ನೆ ಹಾಕಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ‘ಹಸ್ತ ಭಸ್ಮಾಸುರ ಎಂಬುದು ಜನರಿಗೆ ಗೊತ್ತು. ಕಾಂಗ್ರೆಸ್ ಅಧಿಕಾರದಲ್ಲಿರುವ ಹಿಮಾಚಲ ಪ್ರದೇಶ, ತೆಲಂಗಾಣ, ಕರ್ನಾಟಕದಲ್ಲಿ ಒಳಜಗಳ ಆರಂಭವಾಗಿದೆ. ಕಾಂಗ್ರೆಸ್ ಎಲ್ಲಿಯೂ ಉಳಿಯಲ್ಲ. ಅದು ಎಲ್ಲರಿಗೂ ಭಾರವಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.