ಹುಬ್ಬಳ್ಳಿ: ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಕುಟುಂಬಸ್ಥರ ವಿರುದ್ದ ಮಾತನಾಡುವ ಯೋಗ್ಯತೆ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಇಲ್ಲ ಎಂದು ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕರಾದ ಪ್ರಸಾದ ಅಬ್ಬಯ್ಯ ಕಿಡಿಕಾರಿದರು.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬೆಂಗಳೂರಿನ ಏರೋಸ್ಪೇಸ್ ಪಾರ್ಕ್‌ನಲ್ಲಿ 5 ಎಕರೆ ನಾಗರಿಕ ಸೌಕರ್ಯಗಳ (ಸಿ.ಎ) ನಿವೇಶನವನ್ನು ಕೆಐಎಡಿಬಿ ವತಿಯಿಂದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಕಾನೂನು ಹಾಗೂ ನಿಯಮದ ಪ್ರಕಾರ ಮಂಜೂರು ಮಾಡಲಾಗಿದೆ. ಆದಾಗ್ಯೂ ರಾಜ್ಯಪಾಲರಿಗೆ ದೂರು ನೀಡಲಾಗಿದೆ. ಖರ್ಗೆ ಕುಟುಂಬ ಏನೋ ತಪ್ಪು ಮಾಡಿದೆ ಎಂದು ಜನರಲ್ಲಿ ತಪ್ಪು ಭಾವನೆ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಅವರ ಈ ಕುತಂತ್ರ ಫಲಿಸದು ಎಂದು ಹೇಳಿದ್ದಾರೆ.
ಖರ್ಗೆ ಅವರು ಛಲವಾದಿ ಸಮುದಾಯದ ಆಲದ ಮರ ಎಂಬುದನ್ನು ಮರೆಯಬಾರದು. ನಾರಾಯಣಸ್ವಾಮಿ ಯಾರಿಂದ ಬೆಳೆದಿದ್ದಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ. ನಾರಾಯಣಸ್ವಾಮಿ 2006ರಲ್ಲಿ ಮೈಸೂರಿನ ಹೆಬ್ಬಾಳದಲ್ಲಿ 2 ಎಕರೆ ಜಾಗ ಪಡೆದುಕೊಂಡು 18 ವರ್ಷಗಳಾದರೂ ಅಲ್ಲಿ ಏನು ಮಾಡದೆ ಶೆಡ್ ಹಾಕಿಕೊಂಡು ಕುತಿರುವ ಆಸಾಮಿ. ಅವರೇನೂ ಸತ್ಯ ಹರಿಶ್ಚಂದ್ರ ಅಲ್ಲ ಎಂದು ಕಿಡಿಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.