ADVERTISEMENT

ಹುಬ್ಬಳ್ಳಿ: ಕೊರೊನಾ; ಗೋದಾಮು, ಮಳಿಗೆಗಳಾಗಿ ಬದಲಾದ ಚಿಣ್ಣರ ಕಲಿಕಾ ತಾಣಗಳು

ಕೋವಿಡ್‌ 3ನೇ ಅಲೆಯ ಆತಂಕ; ಮುಚ್ಚಿದ ನರ್ಸರಿ ಶಾಲೆ

ಕೃಷ್ಣಿ ಶಿರೂರ
Published 11 ಅಕ್ಟೋಬರ್ 2021, 19:30 IST
Last Updated 11 ಅಕ್ಟೋಬರ್ 2021, 19:30 IST
ಹುಬ್ಬಳ್ಳಿಯ ವಿದ್ಯಾನಗರದ ಜಯನಗರ ಕಾಲೊನಿಯ ಲಿಟ್ಲಸ್ಟಾರ್‌ ನರ್ಸರಿ ಶಾಲೆ ಮಳಿಗೆಯಾಗಿ ಪರಿವರ್ತನೆಯಾಗಿದೆ
ಹುಬ್ಬಳ್ಳಿಯ ವಿದ್ಯಾನಗರದ ಜಯನಗರ ಕಾಲೊನಿಯ ಲಿಟ್ಲಸ್ಟಾರ್‌ ನರ್ಸರಿ ಶಾಲೆ ಮಳಿಗೆಯಾಗಿ ಪರಿವರ್ತನೆಯಾಗಿದೆ   

ಹುಬ್ಬಳ್ಳಿ: ಕೊರೊನಾದ ಸಂಭವನೀಯ 3ನೇ ಅಲೆಯ ಆತಂಕದ ನಡುವೆಯೇ ಶಾಲಾ–ಕಾಲೇಜುಗಳು ಆರಂಭವಾದರೂ, ಮಹಾನಗರದ ಅದೆಷ್ಟೋ ಪೂರ್ವ ಪ್ರಾಥಮಿಕ ಶಾಲೆಗಳು ಬಂದ್ ಆಗಿವೆ.

ಹುಬ್ಬಳ್ಳಿ–ಧಾರವಾಡ ಮಹಾನಗರದಲ್ಲಿ ಅಂದಾಜು 150 ಪೂರ್ವ ಪ್ರಾಥಮಿಕ ಶಾಲೆ, ನರ್ಸರಿ ಸ್ಕೂಲ್‌ಗಳನ್ನು ನಡೆಸುತ್ತ ಸ್ವ ಉದ್ಯೋಗ ಕಂಡುಕೊಂಡವರಿದ್ದಾರೆ. ಒಂದಷ್ಟು ಮಂದಿಗೆ ಉದ್ಯೋಗ ನೀಡಿ ಉದ್ಯೋಗದಾತರು ಆಗಿದ್ದವರು, ಈಗ ತಮ್ಮ ಶಾಲೆಗಳಿಗೆ ಬೀಗ ಜಡಿದಿದ್ದಾರೆ. ಎ ಫಾರ್‌ ಆ್ಯಪಲ್‌, ಬಿ ಫಾರ್‌ ಬಾಲ್‌... ಎಂಬ ಶಿಕ್ಷಕಿಯರ ಏರು ದನಿಯ ಕಲಿಕೆ ಜತೆಗೆ ಪುಟ್ಟ ಮಕ್ಕಳ ತೊದಲು ಮಾತು ಅಲ್ಲೀಗ ಕೇಳದಾಗಿದೆ. ಬದಲಿಗೆ ಬೇರೆ ಬೇರೆ ಉದ್ಯಮಗಳಿಗೆ ನೆಲೆಯಾಗಿವೆ. ಕೆಲವು ಗೋದಾಮುಗಳಾಗಿ ಪರಿವರ್ತನೆಗೊಂಡಿವೆ.

ಪೂರ್ವ ಪ್ರಾಥಮಿಕ ಶಾಲೆಗಳಲ್ಲೇ ಹೆಚ್ಚಿನವರು ಡೇ ಕೇರ್‌ ಜೊತೆಗೆ ನೃತ್ಯ, ಸಂಗೀತ, ಕರಾಟೆ, ಚಿತ್ರಕಲೆ ತರಗತಿಗಳನ್ನೂ ನಡೆಸಲು ಅವಕಾಶ ನೀಡುವ ಕಲಾವಿದರಿಗೂ ಪಾರ್ಟ್‌ಟೈಂ ಕೆಲಸಕ್ಕೆ ದಾರಿ ಮಾಡಿಕೊಟ್ಟಿದ್ದರು. ಇದು ಇಬ್ಬರಿಗೂ ಆದಾಯದ ಮೂಲವಾಗಿತ್ತು. ಆದರೀಗಪೂರ್ವ ಪ್ರಾಥಮಿಕ ಶಾಲೆಗಳೇ ಬಂದ್‌ ಆಗಿರುವುದರಿಂದ ಶಾಲಾ ಸಿಬ್ಬಂದಿ ಜೊತೆಗೆ ಕಲಾವಿದರಿಗೂ ಕೆಲಸವಿಲ್ಲದಂತಾಗಿದೆ.

ADVERTISEMENT

‘ಪುಟ್ಟ ಮಕ್ಕಳಿಗೆ ಆನ್‌ಲೈನ್‌ ಮೂಲಕ ತರಗತಿ ನಡೆಸುವುದು ಅಷ್ಟು ಸುಲಭದ ಮಾತಲ್ಲ. ಶಾಲೆಗಳಲ್ಲೇ ಅವರನ್ನು ಒಂದು ಕಡೆ ಕೂಡಿಸುವುದು ಸವಾಲೆನಿಸುವಾಗ ಆನ್‌ಲೈನ್‌ ತರಗತಿಯಲ್ಲಿ ಅಸಾಧ್ಯದ ಮಾತೇ ಸರಿ’ ಎನ್ನುತ್ತಾರೆ ಹುಬ್ಬಳ್ಳಿಯ ಜಯನಗರದಲ್ಲಿ ಲಿಟ್ಲ್‌ಸ್ಟಾರ್‌ ನರ್ಸರಿ ಮತ್ತು ಪ್ಲೇ ಹೋಂ, ಡೇಕೇರ್‌ ನಡೆಸುತ್ತಿದ್ದ ಸುಮನ್‌ ಹುಲಕೋಟಿ.‌

‘ನಾಲ್ಕು ವರ್ಷಗಳ ಹಿಂದಷ್ಟೇ ಆರಂಭವಾಗಿದ್ದ ಆರಂಭ ಸ್ಕೂಲ್‌ನಲ್ಲಿ ಪ್ಲೇ ಹೋಂ, ನರ್ಸರಿ, ಎಲ್‌ಕೆಜಿ, ಯುಕೆಜಿ ತರಗತಿಗಳಿವೆ. ವಾಹನದ ಚಾಲಕ ಸೇರಿ ಆರು ಮಂದಿ ಸಿಬ್ಬಂದಿ ಇದ್ದಾರೆ. ಕೊರೊನಾ ಆರಂಭವಾದಾಗಿನಿಂದ ಶಾಲೆ ಬಂದ್‌ ಇದ್ದು, ಸಿಬ್ಬಂದಿಗೆ ಕೆಲಸವಿಲ್ಲದಂತಾಗಿದೆ. ಸಾಲ ಮಾಡಿ ಶಾಲಾ ವಾಹನ ಖರೀದಿಸಿದ್ದು, ಅದು ಕೂಡ ಹೊರೆಯಾಗಿದೆ’ ಎನ್ನುತ್ತಾರೆ ಹುಬ್ಬಳ್ಳಿಯ ಆರಂಭ ಸ್ಕೂಲ್‌ ಕಾರ್ಯದರ್ಶಿ ಗಿರೀಶ ಸಂಶಿ.

ನೌಕರಿಯಲ್ಲಿರುವ ಪಾಲಕರಿಬ್ಬರೂ ತಮ್ಮ ಪುಟ್ಟ ಮಕ್ಕಳನ್ನು ಪ್ಲೇಂ ಹೋಂ, ಡೇಕೇರ್‌ಗಳಲ್ಲಿ ಬಿಟ್ಟು ನಿರಾತಂಕವಾಗಿರುತ್ತಿದ್ದರು. ಆದರೆ ಈಗ ಅವೆಲ್ಲ ಮುಚ್ಚಿರುವುದರಿಂದ ನೌಕರಿ ಮಾಡುವ ಪಾಲಕರಿಗೆ ಮಕ್ಕಳನ್ನು ಬಿಟ್ಟಿರುವುದೇ ಸವಾಲೆನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.