ADVERTISEMENT

ಕರ್ನಾಟಕ ಬಜೆಟ್‌ 2022| ಕೈಗಾರಿಕೆಗಳ ಸ್ಥಾಪನೆಗೆ ಕೊನೆಗೂ ಸಿಕ್ಕ ಮಾನ್ಯತೆ

ಹಳೆಯ ಯೋಜನೆಗಳ ಮತ್ತೊಮ್ಮೆ ಘೋಷಣೆ: ಜಿಲ್ಲೆಗೆ ಸಿಗದ ಆದ್ಯತೆ

ಬಸವರಾಜ ಹವಾಲ್ದಾರ
Published 5 ಮಾರ್ಚ್ 2022, 4:38 IST
Last Updated 5 ಮಾರ್ಚ್ 2022, 4:38 IST
ಬೊಮ್ಮಾಯಿ
ಬೊಮ್ಮಾಯಿ    

ಹುಬ್ಬಳ್ಳಿ: ಬೃಹತ್‌ ಕೈಗಾರಿಕೆಗಳ ಪ್ರದೇಶ ಸ್ಥಾಪನೆ, ನಿರ್ವಹಣೆಗಾಗಿ ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮ ರಚಿಸಲಾಗುತ್ತಿದ್ದು, ಅದರಲ್ಲಿ ಧಾರವಾಡ ಜಿಲ್ಲೆಯನ್ನು ವಿಶೇಷ ಹೂಡಿಕೆ ಪ್ರದೇಶ ಎಂದು ಘೋಷಿಸಿರುವುದರಿಂದ ಬೆಂಗಳೂರು ಹೊರತುಪಡಿಸಿದ ಕೈಗಾರಿಕಾ ಅಭಿವೃದ್ಧಿಗೆ ನಾಂದಿಯಾಗಬಹುದು. ಆದರೆ, ಅದನ್ನು ಹೊರತುಪಡಿಸಿದರೆಜಿಲ್ಲೆಯ ಹಳೆಯ ಪ್ರಮೂಕ ಯೋಜನೆಗಳನ್ನು ಬಜೆಟ್‌ನಲ್ಲಿ ಮತ್ತೆ ಹೊಸದಾಗಿ ಎಂಬಂತೆ ಘೋಷಿಸಲಾಗಿದೆ.

ಕೌಶಲಾಭಿವೃದ್ಧಿ ಕೇಂದ್ರ, ವಿಮಾನ ನಿಲ್ದಾಣ ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸುವುದು, ಸೋಲಾರ್‌ ಪಾರ್ಕ್‌ ಸ್ಥಾಪನೆ, ಬೆಣ್ಣೆಹಳ್ಳ, ತುಪ್ಪರಿಹಳ್ಳಗಳ ಪ್ರವಾಹ ನಿಯಂತ್ರಣ ಕಾಮಗಾರಿ ಸೇರಿದಂತೆ ಹಲವು ಬೇಡಿಕೆಗಳು ಈಡೇರಿಲ್ಲ. ಕಳಸಾ ಬಂಡೂರಿ ನಾಲಾ ತಿರುವು ಯೋಜನೆಗೆ ₹1,000 ಕೋಟಿ ಅನುದಾನ ನೀಡಲಾಗಿದೆ. ಆದರೆ, ಕಳೆದ ವರ್ಷ ಬಿಡುಗಡೆಯಾಗಿದ್ದ ₹500 ಕೋಟಿ ಖರ್ಚಾಗಿಲ್ಲ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಂದ ಅನುಮತಿ ದೊರೆಯದ್ದರಿಂದ ಕಾಮಗಾರಿ ಆರಂಭವೇ ಆಗಿಲ್ಲ.

₹927 ಕೋಟಿ ವೆಚ್ಚದಲ್ಲಿ ಧಾರವಾಡ–ಬೆಳಗಾವಿ (ಕಿತ್ತೂರು ಮಾರ್ಗ) ರೈಲು ಮಾರ್ಗ ಎರಡು ವರ್ಷಗಳ ಹಳೆಯ ಯೋಜನೆ. ಇದಕ್ಕೆ ಬೇಕಾದ ಭೂಮಿ ವಶಪಡಿಸಿಕೊಳ್ಳುವ ಕೆಲಸ ಆಮೆಗತಿಯಲ್ಲಿ ಸಾಗಿದೆ. ಅದನ್ನು ತ್ವರಿತಗೊಳಿಸಲಾಗುವುದು ಎಂಬ ಉಲ್ಲೇಖಕ್ಕೆ ಸೀಮಿತಗೊಳಿಸಲಾಗಿದೆ.

ADVERTISEMENT

ಧಾರವಾಡದಲ್ಲಿ ಎಫ್‌ಎಂಸಿಜಿ ಕ್ಲಸ್ಟರ್‌ ಆರಂಭಿಸುವ ಒಪ್ಪಂದ ಹುಬ್ಬಳ್ಳಿಯಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿಯೇ ಮಾಡಿಕೊಳ್ಳಲಾಗಿತ್ತು. ಅವರಿಗೆ ವಿಶೇಷ ಪ್ರೋತ್ಸಾಹಕ ಪ್ಯಾಕೇಜ್‌ ನೀಡಲೂ ಒಪ್ಪಿಗೆ ಸೂಚಿಸಲಾಗಿತ್ತು. ಅದನ್ನು ಈಗ ಮತ್ತೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.ಚನ್ನೈ–ಬೆಂಗಳೂರು–ಮುಂಬಯಿ ಕಾರಿಡಾರ್‌ನ ಧಾರವಾಡ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡುವುದು ಸಹ ಹಳೆಯ ಯೋಜನೆಯೇ ಆಗಿದೆ.

ಜವಳಿ ಸಚಿವರಾಗಿರುವ ಶಂಕರಪಾಟೀಲ ಮುನೇನಕೊಪ್ಪ ಅವರು, ನವಲಗುಂದದಲ್ಲಿ ಜವಳಿ ಪಾರ್ಕ್‌ ಮಂಜೂರು ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಅದು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಆರಂಭವಾಗಬೇಕಿದೆ. ಧಾರವಾಡ ವಿದ್ಯಾಕಾಶಿ ಎನಿಸಿಕೊಂಡಿರುವುದರಿಂದ ವಿವಿಧ ಜಿಲ್ಲೆಗಳಿಂದ ಓದಲು ವಿದ್ಯಾರ್ಥಿಗಳು ಬರುತ್ತಾರೆ. ವಸತಿ ನಿಲಯದ ಬೇಡಿಕೆ ಇತ್ತು. ಅದು ಈ ಬಾರಿ ಈಡೇರಿರುವುದರಿಂದ ಹೊರ ಜಿಲ್ಲೆಗಳಿಂದ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಹುಬ್ಬಳ್ಳಿಯ ಇಎಸ್‌ಐ ಆಸ್ಪತ್ರೆಯ ಹಾಸಿಗೆಗಳ ಸಾಮರ್ಥ್ಯ 50 ರಿಂದ 100ಕ್ಕೆ ಹೆಚ್ಚಿಸಲಾಗುವುದು.ಕರ್ನಾಟಕ ಡಿಜಿಟಲ್‌ ಎಕಾನಾಮಿ ಮಿಷನ್ ವತಿಯಿಂದ ಸ್ಟಾರ್ಟ್‌ ಅಪ್‌ಗಳ ಪ್ರೋತ್ಸಾಹಕ್ಕೆ ಬಿಯಾಂಡ್‌ ಬೆಂಗಳೂರು ಕ್ಲಸ್ಟರ್ ಸೀಡ್‌ ಫಂಡ್‌ ಫಾರ್‌ ಸ್ಟಾರ್ಟ್‌ಅಪ್ಸ್ ಸ್ಥಾಪನೆಗೆ ₹20 ಕೋಟಿಯಲ್ಲಿ ಈ ವರ್ಷ ₹ 12 ಕೋಟಿ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ.

ಮಹಿಳಾ ಉದ್ಯೋಗಿಗಳಿಗೆ ವಸತಿ ನಿಲಯ ನಿರ್ಮಾಣ ಮಾಡಲಾಗುತ್ತಿದ್ದು, ಅಲ್ಲಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಲ್ಪಸಂಖ್ಯಾತ ಮಹಿಳೆರಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಲಾಗಿದೆ.

‘ನೋಡಿ ಕಲಿ ಮಾಡಿ ತಿಳಿ’ ಪರಿಕಲ್ಪನೆಯಡಿ ರಾಜ್ಯದ 169 ಬಾಲಕಿಯರ ಪ್ರೌಢಶಾಲೆಗಳಿಗೆ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದಿಂದ ತಯಾರಿಸಲಾದ ಲ್ಯಾಬ್‌ ಇನ್‌ ಎ ಕಿಟ್‌ ವಿತರಣೆ,ಧಾರವಾಡದ ಕರ್ನಾಟಕ ಕ್ಯಾನ್ಸರ್‌ ಇನ್‌ಸ್ಟಿಟ್ಯೂಟ್‌ಗೆ ವಿಶೇಷ ನೆರವು,ಹುಬ್ಬಳ್ಳಿಯಲ್ಲಿ ಆರಂಭಿಸಿರುವ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮಾನವ ಸಂಪನ್ಮೂಲ ಒದಗಿಸುವುದು,ಕಾಳಿ ನದಿ ನೀರು ಬಳಸಿಕೊಂಡು ಉತ್ತರ ಕರ್ನಾಟಕದ ಐದು ಜಿಲ್ಲೆಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆ ರೂಪಿಸಲಾಗುವುದು ಎಂದು ಹೇಳಲಾಗಿದೆ. ಇದರಿಂದ ಅಳ್ನಾವರ ಸೇರಿದಂತೆ ವಿವಿಧೆಡೆ ಕುಡಿಯುವ ನೀರು ಲಭ್ಯವಾಗಲಿದೆ.

ಪ್ರಮುಖ ಅಂಶಗಳು

* ಕಳಸಾ ಬಂಡೂರಿ ನಾಲಾ ತಿರುವು ಯೋಜನೆಗೆ ₹1,000 ಕೋಟಿ

*1,000 ವಿದ್ಯಾರ್ಥಿಗಳಿಗೆ ದೀನದಯಾಳ್‌ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿನಿಲಯ ನಿರ್ಮಾಣ

* ಹುಬ್ಬಳ್ಳಿಯಲ್ಲಿ ಜಯದೇವ ಹೃದ್ರೋಗ ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ ₹250 ಕೋಟಿ

* ಬಿಯಾಂಡ್‌ ಬೆಂಗಳೂರು ಕ್ಲಸ್ಟರ್ ಸೀಡ್‌ ಫಂಡ್‌ ಫಾರ್‌ ಸ್ಟಾರ್ಟ್‌ಅಪ್ಸ್ ಸ್ಥಾಪನೆ

* ಮಹಿಳಾ ಉದ್ಯೋಗಿಗಳಿಗೆ ವಸತಿ ನಿಲಯ ನಿರ್ಮಾಣ

* ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಡಾ.ಎಸ್‌.ವಿ. ಪಾಟೀಲ ಕೃಷಿ ಸಂಶೋಧನೆ, ತರಬೇತಿ ಮತ್ತು ರೈತರ ಶ್ರೇಯೋಭಿವೃದ್ಧಿ ಪೀಠ

* ನವಲಗುಂದದಲ್ಲಿ ಜವಳಿ ಪಾರ್ಕ್‌

* ಧಾರವಾಡದಲ್ಲಿ ಕಸೂತಿ, ನವಲಗುಂದದಲ್ಲಿ ಜಮಖಾನಾ ಮೈಕ್ರೊ ಕ್ಲಸ್ಟರ್‌ ಅಭಿವೃದ್ಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.