ADVERTISEMENT

ಕ್ರಿಸ್‌ಮಸ್‌ಗಾಗಿ 100 ಕೆಜಿ ಪ್ಲಮ್ ಕೇಕ್‌, ಚಾಕೊಲೇಟ್‌ ಕೇಕ್‌ ತಯಾರಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2018, 16:53 IST
Last Updated 23 ಡಿಸೆಂಬರ್ 2018, 16:53 IST
ಕೇಕ್‌ ತಯಾರಿ
ಕೇಕ್‌ ತಯಾರಿ   

ಕೇಕ್ ಇಲ್ಲದೇ ಕ್ರಿಸ್‌ಮಸ್‌ ಇಲ್ಲ. ಕೇಕ್ ಇಲ್ಲದೇ ಜನ್ಮ ದಿನಾಚರಣೆ ಇಲ್ಲ ಎನ್ನುವಷ್ಟು ಜನ ಜೀವನದಲ್ಲಿ ಕೇಕ್ ಹಾಸುಹೊಕ್ಕಾಗಿದೆ. ಹೊಸ ವರ್ಷದ ಸಂಭ್ರಮಕ್ಕೆ ಕಾರಣವಾಗುವಲ್ಲಿ ಕೇಕ್‌ ಪಾತ್ರ ಗಮನಾರ್ಹ.

ಈ ಸಂದರ್ಭದಲ್ಲಿ ವಿಶೇಷ ಕೇಕ್‌ಗಳಿಗೆ ಹೆಚ್ಚು ಬೇಡಿಕೆ ಹಾಗೂ ಆದ್ಯತೆ. ಅಂದ ಹಾಗೆ ಪ್ರತಿವರ್ಷವೂ ಹುಬ್ಬಳ್ಳಿಯ ಕ್ಲರ್ಕ್ಸ್ ಇನ್ ಹೋಟೆಲ್‌ನಲ್ಲಿ ತಪ್ಪದೆ ಕ್ರಿಸ್‌ಮಸ್‌ ಹಬ್ಬಕ್ಕೆ ಮುಂಚಿತವಾಗಿ ಹೋಟೆಲ್ ಮಾಲೀಕರು ಮತ್ತು ಅಲ್ಲಿ ಕಾರ್ಯ ನಿರ್ವಹಿಸುವ ಕೆಲಸಗಾರರು ಅತ್ಯಂತ ಉತ್ಸುಕರಾಗಿ ಶುಭ್ರ ವಸ್ತ್ರ ಧರಿಸಿ ವರ್ಷದ ಅತಿಥಿಯನ್ನು ಕರೆಸಿ ಅವರ ಸಮುಖದಲ್ಲಿ ಕೇಕ್‌ ತಯಾರಿಗೆ ಚಾಲನೆ ನೀಡಲಾಗುತ್ತದೆ.

ಕಳೆದ ವರ್ಷ 60 ಕೆಜಿಯಷ್ಟು ತೂಕವಿರುವ ಕೇಕ್ ಮಾಡಲಾಗಿತ್ತು. ಆದರೆ ಈ ಬಾರಿ ಹೆಚ್ಚು ಬೇಡಿಕೆ ಇರುವುದರಿಂದ 100 ಕೆಜಿ ಕೇಕ್ ಈಗಾಗಲೆ ತಯಾರಿಸಲಾಗಿದೆ.

ADVERTISEMENT

ಗೋಡಂಬಿ, ಬಾದಾಮಿ, ದ್ರಾಕ್ಷಿ, ಕಿಷ್ಮಿಸ್, ವಾಲ್‌ನಟ್, ಪಿಸ್ತಾ, ಗೇರುಬೀಜ ಹಾಗೂ ಕೆಂಪುಚೆರ್ರಿ ಸೇರಿದಂತೆ ಒಟ್ಟು ಒಟ್ಟು 50 ಕೆಜಿಗಳಷ್ಟು ಒಣಹಣ್ಣುಗಳನ್ನು ದೊಡ್ಡದಾದ ಟ್ರೇದಲ್ಲಿ ಹಾಕಿ ಬೇರೆ ಬೇರೆ ರೀತಿಯ ವಿಸ್ಕಿ, ಬ್ರ್ಯಾಂಡಿ, ಜಿನ್ ಸುಮಾರು 14-15 ತರಹದ ವೈನ್‌ಗಳನ್ನು ಬಳಸಿ 45 ದಿನಗಳ ಕಾಲ ಗಾಳಿ ನಿಯಂತ್ರಿಸುವ ಕಂಟೇನರ್‌ನಲ್ಲಿ ಕಲಸಿ ಇಡಲಾಗುತ್ತದೆ.

45 ದಿನಗಳ ನಂತರ ಕಲಿಸಿಟ್ಟ ಡ್ರೈಫ್ರುಟ್ಸ್ ಹೊರತೆಗೆದು ಎರಡು ಬಗೆಯ ಕೇಕ್‌ಗಳನ್ನು ತಯಾರಿಸಲಾಗುತ್ತದೆ. ಒಂದು ಪ್ಲಮ್ ಕೇಕ್ ಮತ್ತೊಂದು ಚಾಕೋಲೆಟ್‌ ಕೇಕ್‌. ಪ್ಲಮ್ ಕೇಕ್‌ಗೆ ಮೊಟ್ಟೆ ಬಳಸಿದರೆ, ಚಾಕೋಲೆಟ್‌ ಕೇಕ್‌ ಮೊಟ್ಟೆ ರಹಿತವಾಗಿ ತಯಾರಿಸಲಾಗುತ್ತದೆ. ಈ ಕೇಕ್ ಸ್ವಾದ ಮತ್ತು ರುಚಿಗಾಗಿ ದಾಲ್ಚಿನ್ನಿ, ಜಾಯಿಕಾಯಿ ಪೌಡರ್, ಸಕ್ಕರೆ, ಕಿತ್ತಳೆ ಹಣ್ಣಿನ ಸಿಪ್ಪೆ, ಮಿಶ್ರಣದೊಂದಿಗೆ ತಯಾರಿಸಲಾಗುತ್ತದೆ.

ಬೇಕರಿಯಲ್ಲಿ ತಯಾರಿಸುವ ಕೇಕ್‌ಗಳಿಗಿಂತ ಇಲ್ಲಿನ ಕೇಕ್ ತುಂಬ ಸ್ವಾದಿಷ್ಟ ಮತ್ತು ರುಚಿಯಾಗಿರುತ್ತದೆ. ಈ ರುಚಿಕರ ಕೇಕ್ ಸವಿಯಲು ಇಗಾಗಲೆ ಗ್ರಾಹಕರು ಕ್ಲರ್ಕ್ಸ್ ಇನ್ ಹೋಟೇಲ್‌ಗೆ ಲಗ್ಗೆ ಇಟ್ಟಿದ್ದಾರೆ. 1.kg ಕೇಕ್ ಬೆಲೆ ₹850 + ಶೇ 5 ಜಿಎಸ್‌ಟಿ, ½ kg ಕೇಕ್ ಬೆಲೆ ₹ 500 + ಶೇ 5 ಜಿಎಸ್‌ಟಿ, 300 ಗ್ರಾಂ ಕೇಕ್ ಬೆಲೆ ₹ 300 + ಶೇ 5ರಷ್ಟು ಜಿಎಸ್‌ಟಿ ಸೇರಿದೆ ಎಂದು ಕ್ಲರ್ಕ್ಸ್‌ ಇನ್ ಹೋಟೆಲ್‌ನ ಜನರಲ್‌ ಮ್ಯಾನೇಜರ್‌ ಆರ್.ಕೆ. ಮಹಾರಾಣಾ ‘ಮೆಟ್ರೊ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.