ADVERTISEMENT

ನೇತಾಜಿ ಜಯಂತಿ 23ರಂದು

​ಪ್ರಜಾವಾಣಿ ವಾರ್ತೆ
Published 20 ಜನವರಿ 2025, 14:37 IST
Last Updated 20 ಜನವರಿ 2025, 14:37 IST
ಮಹಾದೇವ ಹೊರಟ್ಟಿ
ಮಹಾದೇವ ಹೊರಟ್ಟಿ   

ಧಾರವಾಡ: ‘ಭಾರತ ಏಕತಾ ಆಂದೋಲನ, ಬಸವ ಶಾಂತಿ ಮಿಷನ್‌ ಮತ್ತು ಸಾಯಿ ಪಿಯು ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ವತಿಯಿಂದ ನಗರದಲ್ಲಿ ಜ.23ರಂದು ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರ 128ನೇ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ’ ಎಂದು ಮಿಷನ್‌ ಅಧ್ಯಕ್ಷ ಮಹಾದೇವ ಹೊರಟ್ಟಿ ತಿಳಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ.ದೇಶಪಾಂಡೆ ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ರಂಜಾನ್ ದರ್ಗಾ, ಶಿವಾನಂದ ಶೆಟ್ಟರ, ವೀಣಾ ಬಿರಾದಾರ ಪಾಲ್ಗೊಳ್ಳುವರು. ಗಿರೀಶ‌ ಆಶ್ರಮದ ಗೋಪಾಲ ಸ್ವಾಮೀಜಿ, ಶಂಕರ ಕುಂಬಿ, ಮಹಮ್ಮದ್‌ ಅಲಿ ಗೂಡುಭಾಯಿ ಅವರನ್ನು ಸನ್ಮಾನಿಸಲಾಗುವುದು’ ಎಂದರು.

‘ನೇತಾಜಿ ಅವರು 1939 ಜುಲೈ 12ರಂದು ಧಾರವಾಡಕ್ಕೆ ಭೇಟಿ ನೀಡಿದ್ದಾಗ, ಅವರಿಗೆ ಸಲ್ಲಿಸಿದ್ದ ಮನವಿ ಪತ್ರ ಹಾಗೂ ಮುರುಗೋಡ ಮಹಾದೇವಪ್ಪ ಅವರ ಜತೆ ಚರ್ಚೆ ಸಂದರ್ಭದಲ್ಲಿ ನೇತಾಜಿ ಆಸೀನರಾಗಿದ್ದ ಕುರ್ಚಿ ಪ್ರದರ್ಶಿಸಲಾಗುವುದು. ನೇತಾಜಿ ಅವರ ಆಝಾದ್‌ ಹಿಂದ್ ಸೇನೆಯಲ್ಲಿ ಕಾರ್ಯನಿರ್ವಹಿಸಿದ ದಿವಂಗತ ಹುಸೇನಸಾಬ ಗೂಡುಭಾಯಿ ಅವರ ಕುರಿತ ಪುಸ್ತಕೆ ಬಿಡುಗಡೆಗೊಳಿಸಲಾಗುವುದು’ ಎಂದರು.

ADVERTISEMENT

‘ನೇತಾಜಿ ಅವರ ಜನ್ಮದಿನವನ್ನು ದೇಶ ಪ್ರೇಮ ದಿನವನ್ನಾಗಿ ಆಚರಿಸಬೇಕು. ಅವರ ಭಾವಚಿತ್ರವನ್ನು ಸರ್ಕಾರಿ ಕಚೇರಿ ಮತ್ತು ಶಾಲೆಗಳಲ್ಲಿ ಅಳವಡಿಸಬೇಕು ಹಾಗೂ ಪದವಿ, ಸ್ನಾತಕೋತ್ತರ ಪದವಿ ಪಠ್ಯದಲ್ಲಿ ನೇತಾಜಿ, ಗಾಂಧೀಜಿ ಮೊದಲಾದ ಸ್ವಾತಂತ್ರ್ಯ ವೀರರ ವಿವರವನ್ನು ಅಳವಡಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು’ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಲಿಂಗರಾಜ ಅಂಗಡಿ, ಮಹಮ್ಮದ್‌ ಅಲಿ ಗೂಡುಭಾಯಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.