ADVERTISEMENT

ಹಿರಿಯ ನಾಗರಿಕರಿಗೆ ಮಾಸಿಕ ₹10 ಸಾವಿರ ಪಿಂಚಣಿ ನೀಡಲಿ: ಬಿ.ಎ.ಪಾಟೀಲ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 13:56 IST
Last Updated 20 ಜುಲೈ 2024, 13:56 IST
<div class="paragraphs"><p>ಬಿ.ಎ.ಪಾಟೀಲ</p></div>

ಬಿ.ಎ.ಪಾಟೀಲ

   

ಹುಬ್ಬಳ್ಳಿ: ‘ಆರ್ಥಿಕವಾಗಿ ದುರ್ಬಲರಾದ ಎಲ್ಲ ಹಿರಿಯ ನಾಗರಿಕರಿಗೆ ಮಾಸಿಕ ₹10 ಸಾವಿರ ಪಿಂಚಣಿ ನೀಡಬೇಕು ಹಾಗೂ   ಎಲ್ಲ ಹಿರಿಯ ನಾಗರಿಕರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ  ಆಗ್ರಹಿಸಿ ಕರ್ನಾಟಕ ರಾಜ್ಯ ಹಿರಿಯ ನಾಗರಿಕರು ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಹೋರಾಟ ಆರಂಭಿಸಲಾಗುವುದು’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಿ.ಎ.ಪಾಟೀಲ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಗಾಗಲೇ ರಾಷ್ಟ್ರೀಯ ಹಿರಿಯ ನಾಗರಿಕರ ಜೀವನ ಗೌರವ ಅಭಿಯಾನದ ಹೆಸರಲ್ಲಿ ಹಿರಿಯ ನಾಗರಿಕರ ಸಂಘಟನೆ, ಸೌಲಭ್ಯಗಳ ಹೋರಾಟಕ್ಕೆ ಚಿಂತನೆ ನಡೆಸಲಾಗಿದೆ. ಅಭಿಯಾನದ ಅಂಗವಾಗಿ ನೋಂದಣಿ ಕಾರ್ಯ ಆರಂಭಿಸಲಾಗಿದ್ದು, 1.50 ಲಕ್ಷಕ್ಕೂ ಹೆಚ್ಚಿನ ಹಿರಿಯ ನಾಗರಿಕರು ಹೆಸರು ನೋಂದಾಯಿಸಿಕೊಂಡಿದ್ದಾರೆ‘ ಎಂದರು.

ADVERTISEMENT

‘ಹುಬ್ಬಳ್ಳಿಯಲ್ಲಿ ನವೆಂಬರ್‌ ಅಥವಾ ಡಿಸೆಂಬರ್‌ನಲ್ಲಿ ಸಮಾವೇಶ ಮಾಡಲಾಗುವುದು. ಸಂಘದಿಂದ ಹಲವು ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದ್ದು, ಜುಲೈ 30 ರಂದು ಸಂಘದ ಕಚೇರಿಯಲ್ಲಿ ಹಿರಿಯ ನಾಗರಿಕರಿಗೆ ಆರೋಗ್ಯ ಉಚಿತ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ‘ ಎಂದು ತಿಳಿಸಿದರು.

ಅಂತರರಾಷ್ಟ್ರೀಯ ಹೆಲ್ಪೇಜ್ ಇಂಡಿಯಾ ಸಂಸ್ಥೆ ಸಲಹೆಗಾರ ಡಾ.ಕಮಲ ಮನೋಹರ ಮಾತನಾಡಿ, ’ದೇಶದಲ್ಲಿ 20ಕೋಟಿ ಹಾಗೂ ರಾಜ್ಯದಲ್ಲಿ 80ಲಕ್ಷ ಹಿರಿಯ ನಾಗರಿಕರಿದ್ದಾರೆ. ಹಿರಿಯ ನಾಗರಿಕರ ಸಂಘ ಗ್ರಾಮೀಣ ಪ್ರದೇಶದಲ್ಲಿರುವ ಹಿರಿಯ ನಾಗರಿಕರನ್ನು ಸಂಘಟಿಸಿ, ಅವರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ‘ ಎಂದರು.

‘ರಾಜ್ಯಸರ್ಕಾರ ಹಿರಿಯ ನಾಗರಿಕರಿಗೆ ಪ್ರತ್ಯೇಕ ವಿಭಾಗ ರಚಿಸಿ, ಉತ್ತರ ಕರ್ನಾಟಕ ಭಾಗದವರನ್ನು ಎಂಎಲ್‌ಸಿಯನ್ನಾಗಿ ನೇಮಿಸಬೇಕು. ಈ ಮೂಲಕ ಹಿರಿಯ ನಾಗರಿಕರಿಗೆ ಆರ್ಥಿಕ ನೆರವು ಹಾಗೂ ವೈದ್ಯಕೀಯ ಸೌಲಭ್ಯ ನೀಡಬಹುದು’ ಎಂದು ಹೇಳಿದರು.

ಸಂಘದ ಮಹಿಳಾ ರಾಜ್ಯ ಘಟಕದ ಅಧ್ಯಕ್ಷೆ ಸುನಂದಾ ಬೆನ್ನೂರು, ರೈತ ಮತ್ತು ವಾಣಿಜ್ಯ ಹಿರಿಯ ನಾಗರಿಕರ ಸಮಿತಿ ಅಧ್ಯಕ್ಷ ಡಿ.ಟಿ.ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.