ADVERTISEMENT

ಧಾರವಾಡ: ಕಾರ್ಖಾನೆಗಳ ಸಮೀಕ್ಷೆ ತಂಡಕ್ಕೆ ಒತ್ತಡ?

ಸಮೀಕ್ಷೆಗೆ ಹೆಚ್ಚುವರಿ ಕಾಲಾವಕಾಶ; 1 ಸಾವಿರಕ್ಕೂ ಹೆಚ್ಚು ಕಾರ್ಖಾನೆಗಳ ತಪಾಸಣೆ

ನಾಗರಾಜ್ ಬಿ.ಎನ್‌.
Published 30 ಜುಲೈ 2022, 19:30 IST
Last Updated 30 ಜುಲೈ 2022, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಹುಬ್ಬಳ್ಳಿ: ಅನುಮತಿ ಪಡೆಯದೆ ಹಾಗೂ ಕಾನೂನು ನಿಯಮಾವಳಿಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ಕಾರ್ಖಾನೆಗಳ ಸಮೀಕ್ಷೆಗೆ ಜಿಲ್ಲಾಡಳಿತ ನೀಡಿದ್ದ ಕಾಲಾವಕಾಶದ ಅವಧಿಯಲ್ಲಿ ಸಮೀಕ್ಷೆ ಪೂರ್ಣಗೊಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಮತ್ತೆ ಮೂರು–ನಾಲ್ಕು ದಿನಗಳ ಅವಕಾಶ ವಿಸ್ತರಿಸಲಾಗಿದೆ. ಅಲ್ಲದೆ, ವಸ್ತುನಿಷ್ಠ ಸಮೀಕ್ಷೆ ನಡೆದರೆ ನಿಯಮಾವಳಿ ಉಲ್ಲಂಘನೆ ಪತ್ತೆಯಾಗುತ್ತದೆ ಎಂದು ಕೆಲವು ಕಾರ್ಖಾನೆ ಮಾಲೀಕರು ಅಧಿಕಾರಿಗಳಿಗೆ ರಾಜಕೀಯ ಒತ್ತಡ ಹೇರುತ್ತಿದ್ದಾರೆ ಎನ್ನುವ ಆರೋಪ ಸಹ ಕೇಳಿಬಂದಿದೆ.

ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ಸ್ಪಾರ್ಕಲ್‌ ಕ್ಯಾಂಡಲ್‌ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಕಾರ್ಮಿಕರು ಮೃತಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌ ಕಾರ್ಖಾನೆಗಳ ಸಮೀಕ್ಷೆಗೆ ಸೂಚಿಸಿದ್ದರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಜುಲೈ 25ರಂದು ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡು 10 ತಂಡ ರಚಿಸಿ, ಜು. 29ರ ಒಳಗೆ ಸಮೀಕ್ಷಾ ವರದಿ ಸಲ್ಲಿಸುವಂತೆ ಗಡುವು ನೀಡಿದ್ದರು. ಆದರೆ, ಸಮೀಕ್ಷೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಮತ್ತಷ್ಟು ಕಾಲಾವಕಾಶ ನೀಡಲಾಗಿದೆ.

ಜು. 26ರಿಂದ ಸಮೀಕ್ಷೆ ಆರಂಭಿಸಿರುವ ತಂಡ, ಜಿಲ್ಲೆಯಲ್ಲಿರುವ ಎಂಟು ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿ ಶುಕ್ರವಾರದ ಒಳಗೆ ಶೇ 60ರಷ್ಟು ಸಮೀಕ್ಷೆ ಪೂರ್ಣಗೊಳಿಸಿದೆ.

ADVERTISEMENT

‘ಜಿಲ್ಲೆಯಲ್ಲಿರುವ ಎಂಟು ಕೈಗಾರಿಕಾ ಪ್ರದೇಶಗಳಲ್ಲಿ ಅಂದಾಜು 2 ಸಾವಿರಕ್ಕೂ ಹೆಚ್ಚು ಕಾರ್ಖಾನೆಗಳು ಇವೆ. ಅವುಗಳಲ್ಲಿ ಬಹುತೇಕ ಕಾರ್ಖಾನೆಗಳು ಕಾರ್ಮಿಕರಿಗೆ ಅಗತ್ಯವಾದ ಪ್ರಥಮ ಚಿಕಿತ್ಸಾ ಪರಿಕರಗಳನ್ನೇ ಇಟ್ಟಿಲ್ಲ. ಅಗ್ನಿ ಶಾಮಕ ಠಾಣೆಯಿಂದ ಪಡೆಯಬೇಕಾದ ನಿರಪೇಕ್ಷಣಾ ಪತ್ರ ಸಹ ಪಡೆದಿಲ್ಲ. ಕಾರ್ಮಿಕರಿಗೆ ಭವಿಷ್ಯ ನಿಧಿ ಸೌಲಭ್ಯ ಕಲ್ಪಿಸಬೇಕಾಗುತ್ತದೆ ಎಂದು, ಕೆಲವು ಕಾರ್ಖಾನೆಗಳು ಅವರ ಸಂಖ್ಯೆಯನ್ನೇ ಕಡಿಮೆ ತೋರಿಸಿವೆ. ಮತ್ತೆ ಕೆಲವು ಕಾರ್ಖಾನೆಗಳಿಗೆ ಹೆಸರು ಇವೆ, ಬಾಗಿಲು ತೆರೆಯದೆ ವರ್ಷಗಳೇ ಕಳೆದಿವೆ’ ಎಂದು ಸಮೀಕ್ಷೆಯಲ್ಲಿದ್ದ ಅಧಿಕಾರಿಯೊಬ್ಬರು ತಿಳಿಸಿದರು.

‘ನಾಲ್ಕು ದಿನಗಳಲ್ಲಿ 1,200 ರಷ್ಟು ಕಾರ್ಖಾನೆಗಳ ಮಾಹಿತಿ ಸಂಗ್ರಹಿಸಲಾಗಿದೆ. ಪ್ರತಿದಿನ ಸಂಗ್ರಹಿಸಿದ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ಚಿತ್ರ ಹಾಗೂ ದಾಖಲೆ ಸಮೇತ ವರದಿ ಒಪ್ಪಿಸುತ್ತಿದ್ದೇವೆ. ಉದ್ದೇಶ ಪೂರ್ವಕವಾಗಿ ಕೆಲವು ಕಾರ್ಖಾನೆಗಳ ಬಾಗಿಲನ್ನು ತೆರೆಯದೆ, ಕಾರ್ಮಿಕರಿಗೆ ರಜೆ ನೀಡಲಾಗಿದೆ. ಕೆಲವು ಕಾರ್ಖಾನೆಗಳಲ್ಲಿ ದಾಖಲೆ ಪತ್ರಗಳು ಇಲ್ಲ, ಮಾಹಿತಿ ಸಂಗ್ರಹಕ್ಕೆ ಮಾಲೀಕರು ಸಹ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದರಿಂದ ನಿಗದಿತ ದಿನದೊಳಗೆ ಸಮೀಕ್ಷೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಜಿಲ್ಲಾಡಳಿತ ವಸ್ತುನಿಷ್ಠ ವರದಿ ಕೇಳಿದ್ದು, ಅದಕ್ಕಾಗಿ ನಾವು ಹೆಚ್ಚುವರಿ ಕಾಲಾವಕಾಶವನ್ನು ಪಡೆದಿದ್ದೇವೆ’ ಎಂದು ಸಮೀಕ್ಷೆ ನೋಡಲ್‌ ಅಧಿಕಾರಿ ಟಿ. ಸಿದ್ದಣ್ಣ ಹೇಳಿದರು.

ಸಂಪರ್ಕಕ್ಕೆ ಸಿಗದ ಮಾಲೀಕರು...

‘ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆ ನಡೆಸಲಷ್ಟೇ ನಿವೇಶನ ನೀಡಲಾಗುತ್ತದೆ. ಆದರೆ, ಕೈಗಾರಿಕೆ ಹೆಸರಲ್ಲಿ ಪಡೆದ ನಿವೇಶನದಲ್ಲಿ ಗೋದಾಮು ತೆರೆದು ಅಪಾಯಕಾರಿ ರಾಸಾಯನಿಕ ಸಂಗ್ರಹಿಸಿರುವುದು ಸಮೀಕ್ಷಾ ತಂಡ ಪತ್ತೆ ಹಚ್ಚಿದೆ. ಸಂಬಂಧಿಸಿದ ಮಾಲೀಕರನ್ನು ಸಂಪರ್ಕಿಸಲು ಮುಂದಾದಾಗ, ಅವರ ದೂರವಾಣಿ ಸಂಖ್ಯೆಗಳು ಸ್ವಿಚ್ಡ್‌ ಆಫ್‌ ಆಗಿವೆ. ಅನುಮತಿ ಪಡೆದಿರುವ ಕೈಗಾರಿಕೆ ಹೆಸರು ಒಂದಾದರೆ, ಅಲ್ಲಿ ನಿರ್ವಹಿಸುತ್ತಿರುವ ಕಾರ್ಯವೇ ಮತ್ತೊಂದು. ಯಾರದ್ದೋ ಕಾರ್ಖಾನೆಯಲ್ಲಿ, ಇನ್ಯಾರದ್ದೋ ಕಾರ್ಖಾನೆಯ ವಸ್ತುಗಳು ದಾಸ್ತಾನಾಗಿವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.