ADVERTISEMENT

ಹುಬ್ಬಳ್ಳಿ: ರಾಯರ ಆರಾಧನೆ ಸರಳ ಆಚರಣೆ

ಮಾಸ್ಕ್‌ ಧರಿಸಿ ಪೂಜೆ ನೆರವೇರಿಸಿದ ಅರ್ಚಕರು, ಕಾಣದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 15:51 IST
Last Updated 4 ಆಗಸ್ಟ್ 2020, 15:51 IST
ಹುಬ್ಬಳ್ಳಿಯ ಪರಿಮಳ ಮಾರ್ಗದಲ್ಲಿರುವ ಮಠದಲ್ಲಿ ಮಂಗಳವಾರ ರಾಯರ ವೃಂದಾವನಕ್ಕೆ ಪೂಜೆ ನಡೆಯಿತು
ಹುಬ್ಬಳ್ಳಿಯ ಪರಿಮಳ ಮಾರ್ಗದಲ್ಲಿರುವ ಮಠದಲ್ಲಿ ಮಂಗಳವಾರ ರಾಯರ ವೃಂದಾವನಕ್ಕೆ ಪೂಜೆ ನಡೆಯಿತು   

ಹುಬ್ಬಳ್ಳಿ: ರಾಘವೇಂದ್ರ ಸ್ವಾಮಿಗಳ 349ನೇ ಆರಾಧನಾ ಮಹೋತ್ಸವದಲ್ಲಿ ನಗರದ ರಾಯರ ಮಠಗಳಲ್ಲಿ ಪ್ರತಿವರ್ಷ ಕಂಡು ಬರುತ್ತಿದ್ದ ಸಂಭ್ರಮ ಹಾಗೂ ಸಡಗರ ಈ ಬಾರಿ ಕಾಣಲಿಲ್ಲ. ಕೊರೊನಾ ಸೋಂಕಿನ ಭೀತಿ ಮತ್ತು ದಿನಪೂರ್ತಿ ಸುರಿದ ಮಳೆಯಿಂದ ಬಹಳಷ್ಟು ಭಕ್ತರು ಮಠಗಳಿಗೆ ಬಾರದೆ ದೂರ ಉಳಿದರು.

ಭವಾನಿ ನಗರದಲ್ಲಿರುವ ನಂಜನಗೂಡಿನ ರಾಯರ ಮಠ, ಪರಿಮಳ ಮಾರ್ಗದ ಮಠ, ಕುಬೇರಪುರಂ, ನವನಗರದ ಮಠ, ಶ್ರೀಕೃಷ್ಣ ಕಲ್ಯಾಣ ಮಂಟಪದ ಮಠ ಮತ್ತು ತೊರವಿಗಲ್ಲಿ ಹೀಗೆ ನಗರದಲ್ಲಿ ಹತ್ತಕ್ಕೂ ಹೆಚ್ಚು ರಾಯರ ಮಠಗಳಿವೆ. ಪ್ರತಿ ವರ್ಷ ಭವಾನಿ ನಗರದ ಮಠವೊಂದರಲ್ಲಿಯೇ ಸಾವಿರಾರು ಜನ ದರ್ಶನಕ್ಕೆ ಹಾಗೂ ಪ್ರಸಾದ ಸ್ವೀಕರಿಸಲು ಬರುತ್ತಿದ್ದರು. ಈ ವರ್ಷ ತೀರ್ಥ ಹಾಗೂ ಅನ್ನ ಸಂತರ್ಪಣೆ ರದ್ದು ಮಾಡಲಾಗಿದೆ.

ಪ್ರತಿ ವರ್ಷ ಮಠಗಳನ್ನು ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗುತ್ತಿತ್ತು. ಆರಾಧನೆಯ ಮೂರೂ ದಿನ ಸಂಜೆ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಇರುತ್ತಿದ್ದವು. ಈ ವರ್ಷ ಯಾವ ಕಾರ್ಯಕ್ರಮಗಳು ಕೂಡ ಇಲ್ಲ. ವಿವಿಧ ರಾಯರ ಮಠಗಳಿಗೆ ಬೆಳಿಗ್ಗೆಯಿಂದ ಬಂದ ಕೆಲ ಭಕ್ತರನ್ನು ಥರ್ಮಲ್‌ ಸ್ರ್ಕೀನಿಂಗ್ ಪರೀಕ್ಷೆಗೆ ಒಳಪಡಿಸಲಾಯಿತು. ಮಾಸ್ಕ್‌ ಧರಿಸಿದ್ದವರಿಗಷ್ಟೇ ಸ್ಯಾನಿಟೈಸರ್‌ ಹಚ್ಚಿ ಬಳಿಕ ಮಠದೊಳಗೆ ಬಿಡಲಾಯಿತು. ಕೆಲ ಮಠಗಳಲ್ಲಿ ಅರ್ಚಕರು ಕೂಡ ಮಾಸ್ಕ್‌ ಧರಿಸಿಯೇ ಪೂಜೆ ನೆರವೇರಿಸಿದರು.

ADVERTISEMENT

ಎಲ್ಲ ಮಠಗಳ ವೃಂದಾವನಗಳಿಗೆ ಹೂವಿನಿಂದ ಸುಂದರವಾಗಿ ಅಲಂಕಾರ ಮಾಡಿ ಉತ್ಸವ ರಾಯರಿಗೆ ಪದಪೂಜೆ, ಪಂಚಾಮೃತ ಅಭಿಷೇಕ ಮತ್ತು ಮತ್ತು ಮಹಾಮಂಗಳಾರತಿ ಮಾಡಲಾಯಿತು. ಆರಾಧನೆ ಸಮಯದಲ್ಲಿ ದಿನಪೂರ್ತಿ ತೆರೆದಿರುತ್ತಿದ್ದ ಮಠಗಳು ಸೋಂಕಿನ ಅತಂಕವಿರುವ ಕಾರಣ ಸಮಯವನ್ನೂ ನಿಗದಿ ಮಾಡಿವೆ.

‘ಪ್ರತಿ ವರ್ಷ ಸಂಭ್ರಮದಿಂದ ನಡೆಯುತ್ತಿದ್ದ ಆರಾಧನೆ ಈ ಬಾರಿ ಸರಳವಾಗಿ ಆಚರಿಸಲಾಗುತ್ತಿದೆ. ಆದರೆ, ಭಕ್ತರ ಪ್ರವೇಶಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಸೋಂಕಿನ ಭೀತಿ ಮತ್ತು ದಿನಪೂರ್ತಿ ಸುರಿದ ಮಳೆಯಿಂದ ಪೂರ್ವಾರಾಧನೆ ದಿನದಂದು ಕಳೆದ ವರ್ಷಕ್ಕಿಂತಲೂ ಶೇ 50ರಷ್ಟು ಭಕ್ತರ ಸಂಖ್ಯೆ ಕಡಿಮೆಯಿತ್ತು’ ಎಂದು ಭವಾನಿನಗರ ಮಠದ ವ್ಯವಸ್ಥಾಪಕ ಶ್ಯಾಮಾಚಾರ್ಯ ರಾಯಸ್ಥ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.