ADVERTISEMENT

ಕೆಸಿಸಿಐನಿಂದ ಐವರು ಸಾಧಕರಿಗೆ 'ವಾಣಿಜ್ಯ ರತ್ನ' ಪ್ರಶಸ್ತಿ ಪ್ರದಾನ

‘ವಾಣಿಜ್ಯೋದ್ಯಮ ಬೆಳವಣಿಗೆಗೆ ಆದ್ಯತೆ ಸಿಗಲಿ’

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 16:40 IST
Last Updated 1 ಆಗಸ್ಟ್ 2021, 16:40 IST
ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆಯಲ್ಲಿ ಉದ್ಯಮಿಗಳಾದ (ಕುಳಿತಿರುವವರು) ವಿಜಯಕುಮಾರ ಗುಡ್ಡದ, ಜಯಪ್ರಕಾಶ ಟೆಂಗಿನಕಾಯಿ,  ಎಚ್.ಜಿ. ಚಂದ್ರಶೇಖರ, ರಮೇಶ ಶಹಾ ಹಾಗೂ ಸಂತೋಷ ನಾಗ ಪತ್ತಿಕೊಂಡ ಅವರಿಗೆ ‘ವಾಣಿಜ್ಯ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು
ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆಯಲ್ಲಿ ಉದ್ಯಮಿಗಳಾದ (ಕುಳಿತಿರುವವರು) ವಿಜಯಕುಮಾರ ಗುಡ್ಡದ, ಜಯಪ್ರಕಾಶ ಟೆಂಗಿನಕಾಯಿ,  ಎಚ್.ಜಿ. ಚಂದ್ರಶೇಖರ, ರಮೇಶ ಶಹಾ ಹಾಗೂ ಸಂತೋಷ ನಾಗ ಪತ್ತಿಕೊಂಡ ಅವರಿಗೆ ‘ವಾಣಿಜ್ಯ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಹುಬ್ಬಳ್ಳಿ: ‘ಉತ್ತರ ಕರ್ನಾಟಕದಲ್ಲಿ ವಾಣಿಜ್ಯೋದ್ಯಮದ ಬೆಳವಣಿಗೆಗೆ ಪ್ರಾಮುಖ್ಯತೆ ಸಿಗಬೇಕಿದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಈ ಭಾಗದವರೇ ಆಗಿರುವುದರಿಂದ ಅಭಿವೃದ್ಧಿ ಕಾರ್ಯಗಳು ಹೆಚ್ಚಾಗಬೇಕು’ ಎಂದುಬೆಂಗಳೂರಿನ ಮೆ. ಕುಶಾಗ್ರಮತಿ ಅನಾಲಿಟಿಕ್ಸ್ ವ್ಯವಸ್ಥಾಪಕ ನಿರ್ದೇಶಕ ಡಾ. ಅನಂತ ಆರ್. ಕೊಪ್ಪರ ಅಭಿಪ್ರಾಯಪಟ್ಟರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ(ಕೆಸಿಸಿಐ)ಯಲ್ಲಿ ಭಾನುವಾರ ನಡೆದ ಸಂಸ್ಥಾಪಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿಉ.ಕ.ದ ಹಲವು ಜಿಲ್ಲೆಗಳು ಹಿಂದುಳಿದಿದ್ದು, ಬೆಂಗಳೂರಿನಂತಹ ದೊಡ್ಡ ನಗರಗಳಿಂದ ಸ್ಫೂರ್ತಿ ಪಡೆದು ಮುಂದೆ ಬರಬೇಕಿದೆ’ ಎಂದರು.

‘ಕಾಲ ಬದಲಾದಂತೆ ಔದ್ಯೋಗಿಕ ಕ್ಷೇತ್ರವೂ ಏಳುಬೀಳುಗಳನ್ನು ಕಂಡಿದೆ. ವಿದೇಶಿ ಕಂಪನಿಗಳಲ್ಲಿ ಕೂಲಿಗಾರಿಕೆ ಕಡಿಮೆಯಾಗಿ ಪಾಲುದಾರಿಕೆಗೆ ಹೆಚ್ಚಾಗುತ್ತಿದೆ. ಸ್ಟಾರ್ಟ್‌ಅಪ್, ಇ ಕಾರ್ಮಸ್, ಐಟಿ, ಬಿಟಿ ಕ್ಷೇತ್ರಗಳು ತ್ವರಿತಗತಿಯ ಬೆಳವಣಿಗೆ ಕಂಡಿವೆ. ಅಭಿವೃದ್ಧಿಯ ದನಿಯನ್ನು ಅಧಿಕಾರದಲ್ಲಿರುವವರಿಗೆ ಮುಟ್ಟಿಸುವ ಕೆಲಸವನ್ನು ಕೆಸಿಸಿಐ ಮಾಡಬೇಕಿದೆ’ ಎಂದು ಸಲಹೆ ನೀಡಿದರು.

ADVERTISEMENT

ಸಾನ್ನಿಧ್ಯ ವಹಿಸಿದ್ದ ಹೊಸಹಳ್ಳಿ ಸಂಸ್ಥಾನಮಠದ ಜಗದ್ಗುರು ಅಭಿನವ ಬೂದೀಶ್ವರ ಸ್ವಾಮೀಜಿ, ‘ಹಣದ ಮಹತ್ವ ಹಾಗೂ ಅದನ್ನು ಹೇಗೆ ಬಳಸಬೇಕು ಎಂಬುದು ಗೊತ್ತಾದರೆ ಯಾರೂ ಬಡವರಾಗುವುದಿಲ್ಲ’ ಎಂದರು.

ವಾಣಿಜ್ಯ ರತ್ನ ಪ್ರಶಸ್ತಿ: ತುಮಕೂರಿನ ಸಿಒಪಿಪಿಆರ್‌ಆರ್‌ಒಡಿ ಇಂಡಸ್ಟ್ರಿಸ್ ಪ್ರೈವೇಟ್ ಲಿಮಿಟೆಡ್‌ನ ಎಚ್.ಜಿ. ಚಂದ್ರಶೇಖರ, ಹುಬ್ಬಳ್ಳಿಯ ಮೆ. ಮಾಣಿಕ್ ಬಾಗ್ ಆಟೊಮೊಬೈಲ್ ಪ್ರೈವೇಟ್ ಲಿಮಿಟೆಡ್‌ನ ರಮೇಶ ಶಹಾ, ಮೆ. ಅಲ್ಯು ಪ್ರಿಂಟ್ಸ್‌ನ ಜಯಪ್ರಕಾಶ ಟೆಂಗಿನಕಾಯಿ, ಮೆ. ವಿಜಯ ಎಲೆಕ್ಟ್ರಿಕಲ್ಸ್‌ನ ವಿಜಯಕುಮಾರ ಗುಡ್ಡದ ಹಾಗೂ ಹೊಸಪೇಟೆಯ ಮೆ. ಸಾಯಿ ಪೆಟ್ ಪ್ರಿಸಾರ್ಮ್ಸ್ ಇಂಡಸ್ಟ್ರಿಸ್‌ನ ಸಂತೋಷ ನಾಗ್ ಪತ್ತಿಕೊಂಡ ಅವರಿಗೆ ‘ವಾಣಿಜ್ಯ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಉದ್ಯಮಿ ಜಯಪ್ರಕಾಶ ಟೆಂಗಿನಕಾಯಿ, ‘ಯುವಜನರು ಹೊಸ ಉತ್ಪನ್ನದ ಆಲೋಚನೆಯೊಂದಿಗೆ ಸ್ವಂತ ಉದ್ಯಮ ಆರಂಭಿಸಬೇಕು. ಹೊಸ ಮಾರುಕಟ್ಟೆ ಹಾಗೂ ಗ್ರಾಹಕರನ್ನು ಸೃಷ್ಟಿಸಿಕೊಂಡು, ಪೈಪೋಟಿ ನೀಡುವವರೇ ಇಲ್ಲದಂತೆ ಬೆಳೆಯಬೇಕು’ ಎಂದರು.

ಸಂಸ್ಥೆಯ ಮಾಜಿ ಅಧ್ಯಕ್ಷರಾದ ಶಂಕರಣ್ಣ ಮುನವಳ್ಳಿ, ವಿ.ಪಿ. ಲಿಂಗನಗೌಡರ, ಸಿ.ಬಿ. ಪಾಟೀಲ, ಎಂ.ಸಿ. ಹಿರೇಮಠ, ವಸಂತ ಲದವಾ, ರಮೇಶ ಎ.‌ ಪಾಟೀಲ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮುರುಗಯ್ಯಸ್ವಾಮಿ ಜಂಗಿನ ಕುಟುಂಬದ ಸದಸ್ಯರನ್ನು ಹಾಗೂ ಹಿರಿಯ ಸದಸ್ಯ ಎಲ್.ಜಿ. ಮಗಜಿಕೊಂಡ ಅವರನ್ನು ಸನ್ಮಾನಿಸಲಾಯಿತು.

ಸಂಸ್ಥಾಪನಾ ದಿನಾಚರಣೆಯ ವಿಶೇಷ ಸಂಚಿಕೆಯನ್ನು ಗಣ್ಯರು ಬಿಡುಗಡೆ ಮಾಡಿದರು. ಸಂಸ್ಥೆ ಅಧ್ಯಕ್ಷ ಮಹೇಂದ್ರ ಲದ್ದಡ, ಉಪಾಧ್ಯಕ್ಷರಾದ ವಿನಯ ಜೆ.‌ ಜವಳಿ, ಸಿದ್ಧೇಶ್ವರ ಜಿ. ಕಮ್ಮಾರ, ಜಿ.ಜಿ. ಹೊಟ್ಟಿಗೌಡರ, ಗೌರವ ಕಾರ್ಯದರ್ಶಿ ಅಶೋಕ ಗಡಾದ, ಗೌರವ ಕಾರ್ಯದರ್ಶಿ ಉಮೇಶ ಗಡ್ಡದ,ಸಂಸ್ಥಾಪಕರ ದಿನಾಚರಣೆ ಸಮಿತಿ ಅಧ್ಯಕ್ಷ ಅಚ್ಯುತ ಲಿಮಯೆ, ಉಪಾಧ್ಯಕ್ಷರಾದ ನಾಗರಾಜ ಯಲಿಗಾರ ಹಾಗೂ ಸತೀಶ ಮುನವಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.