ADVERTISEMENT

ಸೋಂಕಿತರನ್ನು ಶೂನ್ಯವಾಗಿಸಲು ಆದ್ಯತೆ: ಮುಲ್ಲೈ ಮುಗಿಲನ್

ನೆರೆಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 17:33 IST
Last Updated 10 ಜೂನ್ 2021, 17:33 IST
ಅಂಕೋಲಾ ತಾಲ್ಲೂಕಿನ ಶಿರೂರಿನ ನೆರೆ ಪೀಡಿತ ಪ್ರದೇಶ ವೀಕ್ಷಿಸಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಗುರುವಾರ ಅಧಿಕಾರಿಗಳೊಂದಿಗೆ ಸುಮಾರು ಒಂದು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಸಾಗಿದರು
ಅಂಕೋಲಾ ತಾಲ್ಲೂಕಿನ ಶಿರೂರಿನ ನೆರೆ ಪೀಡಿತ ಪ್ರದೇಶ ವೀಕ್ಷಿಸಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಗುರುವಾರ ಅಧಿಕಾರಿಗಳೊಂದಿಗೆ ಸುಮಾರು ಒಂದು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಸಾಗಿದರು   

ಅಂಕೋಲಾ: ನೆರೆ ಪೀಡಿತ ಪ್ರದೇಶಗಳಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಶೂನ್ಯವಾಗಿಸಲು ಆದ್ಯತೆ ನೀಡಲಾಗುವುದು. ಪ್ರವಾಹದಿಂದ ಉಂಟಾದ ಹಾನಿಗೆ ಪರಿಹಾರ ನೀಡಲು ಸಮರ್ಪಕ ಮಾನದಂಡಗಳನ್ನು ಪರಿಗಣಿಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.

ಗುರುವಾರ ತಾಲ್ಲೂಕಿನ ಗಂಗಾವಳಿ ನದಿ ತೀರದ ನೆರೆ ಪೀಡಿತ ಶಿರೂರು ಮತ್ತು ಕೊಡ್ಸಣಿಗೆ ಭೇಟಿ ನೀಡಿ ಅವರು ಮಾತನಾಡಿದರು.

‘ನೆರೆ ಸಂಬಂಧ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಿದ್ಧತೆ ನಡೆಸಲಾಗಿದೆ. ದೋಣಿ, ಗಂಜಿಕೇಂದ್ರ ಮತ್ತಿತರ ಅವಶ್ಯಕ ನೆರವು ನೀಡಲು ಜಿಲ್ಲಾಡಳಿತ ಸಿದ್ಧವಾಗಿದೆ. ಹಿಂದೆ ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಗೊಂದಲ ಉಂಟಾಗಿದ್ದು, ಅದಕ್ಕೆ ಕಾರಣಗಳನ್ನು ಅಧ್ಯಯನ ಮಾಡಲಾಗುವುದು. ನಂತರ ನೂತನ ಮಾನದಂಡಗಳನ್ನು ಅನುಸರಿಸಲಾಗುವುದು‘ ಎಂದರು.

ADVERTISEMENT

‘ಇತ್ತೀಚಿನ ವರ್ಷಗಳಲ್ಲಿ ಕೊಡ್ಸಣಿ ಪ್ರದೇಶವೊಂದರಲ್ಲಿಯೇ 9 ಕಡೆಗಳಲ್ಲಿ ಮರಳು ದಿಬ್ಬಗಳನ್ನು ಗುರುತಿಸಿ ಮರಳುಗಾರಿಕೆಗೆ ಅವಕಾಶ ಮಾಡಿಕೊಡಲಾಗಿದೆ. ಈ ಕಾರಣದಿಂದ ಎರಡು ವರ್ಷಗಳಿಂದ ನೆರೆಯ ಪ್ರಮಾಣ ಹೆಚ್ಚಾಗುತ್ತಿದೆ‘ ಎಂದು ಗ್ರಾಮ ಪಂಚಾಯಿತಿ ಸದಸ್ಯ ಸುಬ್ರಾಯ ಗೌಡ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಇದಕ್ಕೆ ತಕ್ಷಣವೇ ಜಿಲ್ಲಾಧಿಕಾರಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಸೂಚಿಸಿದರು.

ಬಳಿಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿ ಮಳೆಗಾಲದಲ್ಲಿ ಗುಡ್ಡ ಕುಸಿತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿ. ನಿರಂತರ ಮೇಲ್ವಿಚಾರಣೆ ನಡೆಸಿ ಎಂದು ಐಆರ್ ಬಿ ಅಧಿಕಾರಿಗಳಿಗೆ ಸೂಚಿಸಿದರು. ಸ್ಥಳೀಯ ರೈತರೊಂದಿಗೆ ಚರ್ಚಿಸಿದ ಅವರು ಬೆಳೆಗಳ ಕುರಿತು ಮಾಹಿತಿ ಪಡೆದರು.

ಕುಮಟಾ ಉಪವಿಭಾಗಾಧಿಕಾರಿ ಎಂ ಅಜಿತ್, ತಹಶೀಲ್ದಾರ್ ಉದಯ ಕುಂಬಾರ, ಇ. ಓ ಪರಶುರಾಮ ಸಾವಂತ, ಸಿಪಿಐ ಕೃಷ್ಣಾನಂದ ನಾಯಕ, ಗ್ರಾಮಲೆಕ್ಕಾಧಿಕಾರಿ ಐಶ್ವರ್ಯ ಮಹಾಲೆ, ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.