ಧಾರವಾಡ: ‘ಶುದ್ಧ ಭಾಷೆ ಬಳಕೆ, ವೈವಿಧ್ಯಮಯ ಕಾರ್ಯಕ್ರಮಗಳೇ ಧಾರವಾಡ ಆಕಾಶವಾಣಿಯ ವೈಶಿಷ್ಟ್ಯ’ ಎಂದು ಕವಿ ಸತೀಶ್ ಕುಲಕರ್ಣಿ ಹೇಳಿದರು.
ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ಬುಧವಾರ ನಡೆದ ಅಮೃತ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಆಕಾಶವಾಣಿ ಎಂದರೆ ಮೌನ ಮತ್ತು ಧ್ಯಾನ ಕೇಂದ್ರ. ಅದರಲ್ಲಿ ಕನ್ನಡ ಬಳಕೆ ವಿಶಿಷ್ಟವಾಗಿರುತ್ತದೆ. ಧ್ವನಿಯಿಂದಲೇ ವ್ಯಕ್ತಿತ್ವ ಗುರುತಿಸಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.
ಹಿರಿಯ ಕಲಾವಿದ ಪಂಡಿತ ಎಂ.ವೆಂಕಟೇಶಕುಮಾರ ಮಾತನಾಡಿ, ‘ಶಾಸ್ತ್ರೀಯ ಸಂಗೀತಕ್ಕೆ ಹೆಚ್ಚು ಮಹತ್ವ ನೀಡಿದ ದೇಶ ನಾಲ್ಕು ಆಕಾಶವಾಣಿ ಕೇಂದ್ರಗಳಲ್ಲಿ ಧಾರವಾಡ ಆಕಾಶವಾಣಿಯೂ ಒಂದು. ಈ ಕೇಂದ್ರದಲ್ಲಿ ಪ್ರಸಾರವಾಗುವ ಹಿರಿಯ ಸಂಗೀತ ಕಲಾವಿದರ ಕಾರ್ಯಕ್ರಮಗಳನ್ನು ಕೇಳಿ ಎಷ್ಟೋ ಸಂಗೀತಗಾರರು ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಸುಧಾರಣೆಯಾಗಿದ್ದಾರೆ’ ಎಂದರು.
ಧಾರವಾಡ ಆಕಾಶವಾಣಿ ಮುಖ್ಯಸ್ಥ ಕೆ.ಅರುಣ್ ಪ್ರಭಾಕರ್, ಕಾರ್ಯಕ್ರಮ ಮುಖ್ಯಸ್ಥ ಶರಣ ಬಸವ ಚೋಳಿನ್, ಮಂಜುಳಾ ಪುರಾಣಿಕ್, ಮಾಯಾ ರಾಮನ್ ಇದ್ದರು.
‘ಸ್ಟುಡಿಯೊ ಅಭಿವೃದ್ಧಿ ಆಗಲಿ’
‘ಧಾರವಾಡ ಆಕಾಶವಾಣಿಗೆ ತನ್ನದೇ ಆದ ವರ್ಚಸ್ಸಿದೆ. ಅನೇಕರ ಬೆಳವಣಿಗೆಗೆ ಈ ಕೇಂದ್ರ ಪೂರಕವಾಗಿದೆ. ಸಂಗೀತ ಶಿಕ್ಷಣ ಸೇರಿದಮತೆ ವಿವಿಧ ಕ್ಷೇತ್ರಗಳ ಮಹಾನ್ ಸಾಧಕರು ಈ ಕೇಂದ್ರದ ಸಂಪರ್ಕದಲ್ಲಿದ್ದರು’ ಎಂದು ಮಕ್ಕಳ ವೈದ್ಯ ರಾಜನ್ ದೇಶಪಾಂಡೆ ಹೇಳಿದರು. ‘ಕೇಂದ್ರದ ಸ್ಟುಡಿಯೋಗಳನ್ನು ಅಭಿವೃದ್ಧಿ ಮಾಡಬೇಕು. ಸಾರ್ವಜನಿಕರ ಕೊಠಡಿಯನ್ನು ನವೀಕರಣಗೊಳಿಸಬೇಕು. ಹೊಸ ಸಂಗೀತ ಪರಿಕರಗಳನ್ನು ತರಬೇಕು. ಗ್ರಂಥಾಲಯವನ್ನು ಸಂಪೂರ್ಣ ಡಿಜಿಟಲೀಕರಣ ಮಾಡಬೇಕು’ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.