
ಧಾರವಾಡ: ‘ಫಲಾನುಭವಿ ಆಧಾರಿತ ಯೋಜನೆಗಳ ಕುರಿತು ಸಾಮಾಜಿಕ– ಆರ್ಥಿಕ ಸೋಶಿಯೊ ಎಕನಾಮಿಕ್ ಅಧ್ಯಯನ ನಡೆಸಬೇಕು. ಯೋಜನೆಗಳ ಸುಧಾರಣೆ, ಬೇಡಿಕೆಗಳ ಕುರಿತು ವರದಿ ಸಲ್ಲಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ರಾಮ್‌ಪ್ರಸಾತ್ ಮನೋಹರ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಕೇಂದ್ರ, ರಾಜ್ಯ ಸರ್ಕಾರಗಳು ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಪಾಲನೆ, ಜಲ ಸಂಪನ್ಮೂಲ, ಕೃಷಿ ಉತ್ಪನ್ನ ಮಾರುಕಟ್ಟೆ ಮತ್ತು ಸಹಕಾರ ಇಲಾಖೆಯಿಂದ ಫಲಾನುಭವಿ ಆಧಾರಿತ ಅನೇಕ ಯೋಜನೆಗಳನ್ನು ಜಾರಿಗೊಳಿಸಿವೆ. ಶೈಕ್ಷಣಿಕ ಪರಿಣಿತರು, ಸಂಶೋಧಕರಿಂದ ಯೋಜನೆಗಳ ಕುರಿತು ಅಧ್ಯಯನ ನಡೆಸಬೇಕು. ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಬೇಕು. ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಕೃಷಿ ಇಲಾಖೆಯವರು ಈ ಕಾರ್ಯ ನಿರ್ವಹಿಸಬೇಕು’ ಎಂದು ಸೂಚಿಸಿದರು.
‘ಇಲಾಖೆಗಳಿಗೆ ಬಿಡುಗಡೆಯಾಗಿರುವ ಅನುದಾನ ಬಳಸದೆ ವಾಪಸಾಗದಂತೆ (ಲ್ಯಾಪ್ಸ್) ನಿಗಾ ವಹಿಸಬೇಕು. ಅನುದಾನ ಬಳಕೆ ಮಾಡದಿದ್ದರೆ ಸಂಬಂಧಪಟ್ಟ ಅಧಿಕಾರಿಯನ್ನು ಹೊಣೆ ಮಾಡಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
‘ಪಂಚಾಯತ್ ರಾಜ್ ಇಲಾಖೆಯವರು 143 ಕಾಮಗಾರಿಗಳಿಗೆ ಅನುಮೋದನೆ ಪಡೆದಿದ್ದಾರೆ. ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದು ತಿಳಿಸಿದರು.
‘ಹಲವು ರೈತರು ನಿರಂತರವಾಗಿ (ಪ್ರತಿ ವರ್ಷ) ಏಕಬೆಳೆ ಪದ್ಧತಿ ಅನುಸರಿಸುತ್ತಿದ್ದಾರೆ. ಪ್ರತಿ ವರ್ಷ ಬೆಳೆ ಬದಲಾವಣೆಯಿಂದ ಮತ್ತು ಮಿಶ್ರ ಬೆಳೆಯಿಂದ ಆಗುವ ಅನುಕೂಲದ ಬಗ್ಗೆ ರೈತರಿಗೆ ಕೃಷಿ ಇಲಾಖೆಯವರು ಮನವರಿಕೆ ಮಾಡಬೇಕು’ ಎಂದರು.
ವಿವಿಧ ಇಲಾಖೆಗಳು ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಕಾಮಗಾರಿಗಳನ್ನು ಪೂರ್ಣವಾಗಿ ಅನುಷ್ಠಾನ ಮಾಡಿಲ್ಲ. ಜನವರಿ ಅಂತ್ಯದೊಳಗೆ ಅನುಷ್ಠಾನಗೊಳಿಸಬೇಕು– ವಿ.ರಾಮ್‌ಪ್ರಸಾತ್ ಮನೋಹರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ
ಎಸ್‌ಎಸ್‌ಎಲ್‌ಸಿಯಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅಭ್ಯಾಸ ಹಾಳೆಗಳನ್ನು ನೀಡಿ ತರಬೇತುಗೊಳಿಸಿ ಪರೀಕ್ಷೆಗೆ ತಯಾರಿ ಮಾಡಬೇಕು. ಆತ್ಮವಿಶ್ವಾಸ ಹೆಚ್ಚಿಸಬೇಕು– ದಿವ್ಯಪ್ರಭು, ಜಿಲ್ಲಾಧಿಕಾರಿ
ರಾಜ್ಯ ಮತ್ತು ಜಿಲ್ಲಾ ವಲಯದಲ್ಲಿ ಇಲಾಖಾವಾರು ಬಿಡುಗಡೆಯಾಗಿರುವ ಅನುದಾನವನ್ನು ಕ್ರಿಯಾಯೋಜನೆ ಅನುಸಾರ ವೆಚ್ಚ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಜನವರಿಯೊಳಗೆ ನಿಗದಿತ ಗುರಿ ಸಾಧಿಸಲಾಗುವುದು– ಭುವನೇಶ ಪಾಟೀಲ, ಸಿಇಒ ಜಿಲ್ಲಾ ಪಂಚಾಯಿತಿ
’ಫಲಿತಾಂಶ ಸುಧಾರಣೆಗೆ ಶ್ರಮಿಸಿ‘
‘ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪಾಠಗಳನ್ನು ಚೆನ್ನಾಗಿ ಮನದಟ್ಟು ಮಾಡಿಸಬೇಕು. ಫಲಿತಾಂಶ ಸುಧಾರಣೆಗೆ ಶ್ರಮಿಸಬೇಕು’ ಎಂದು ರಾಮ್‌ಪ್ರಸಾತ್ ಹೇಳಿದರು. ‘ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಸಮಾಜಕಲ್ಯಾಣ ಇಲಾಖೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹಾಸ್ಟೆಲ್ ಹಾಗೂ ವಸತಿ ಶಾಲೆಗಳವರು ಶೇ 100 ಫಲಿತಾಂಶ ದಾಖಲಿಸಲು ಪ್ರಯತ್ನಿಸಬೇಕು. ಫಲಿತಾಂಶ ಸುಧಾರಣೆ ಆಗದಿದ್ದರೆ ನಿಲಯ ಪಾಲಕರು ತಾಲ್ಲೂಕುಮಟ್ಟದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.