ADVERTISEMENT

ಮುಸ್ಲಿಮರ ಮನೆಗೆ ಸಿಎಎ ವಿರೋಧಿ ಸ್ಟಿಕ್ಕರ್‌ ಅಂಟಿಸುವ ಅಭಿಯಾನಕ್ಕೆ ಪೊಲೀಸ್ ತಡೆ

ಸಿಎಎ, ಎನ್‌ಆರ್‌ಸಿ ವಿರೋಧಿ ಅಭಿಯಾನಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 19:45 IST
Last Updated 16 ಜನವರಿ 2020, 19:45 IST
‘ನೋ ಸಿಎಎ, ನೋ ಎನ್‌ಆರ್‌ಸಿ’ ಸ್ಟಿಕ್ಕರ್‌ಗಳನ್ನು ಮುಸ್ಲಿಮರ ಮನೆ ಬಾಗಿಲಿಗೆ ಅಂಟಿಸುವ ಅಭಿಯಾನಕ್ಕೆ ಪೊಲೀಸರು ತಡೆಯೊಡಿದ್ದ ಕಾರಣ ಕಾಂಗ್ರೆಸ್‌ ಅಲ್ಪಸಂಖ್ಯಾತ ಮುಖಂಡರು ಹುಬ್ಬಳ್ಳಿ ಗಣೇಶಪೇಟೆಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು
‘ನೋ ಸಿಎಎ, ನೋ ಎನ್‌ಆರ್‌ಸಿ’ ಸ್ಟಿಕ್ಕರ್‌ಗಳನ್ನು ಮುಸ್ಲಿಮರ ಮನೆ ಬಾಗಿಲಿಗೆ ಅಂಟಿಸುವ ಅಭಿಯಾನಕ್ಕೆ ಪೊಲೀಸರು ತಡೆಯೊಡಿದ್ದ ಕಾರಣ ಕಾಂಗ್ರೆಸ್‌ ಅಲ್ಪಸಂಖ್ಯಾತ ಮುಖಂಡರು ಹುಬ್ಬಳ್ಳಿ ಗಣೇಶಪೇಟೆಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು   

ಹುಬ್ಬಳ್ಳಿ: ಪೌರತ್ವ (ತಿದ್ದಪಡಿ) ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿ ಸ್ಟಿಕ್ಕರ್‌ಗಳನ್ನು ಮನೆಮನೆಗೆ ಅಂಟಿಸುವ ಅಭಿಯಾನಕ್ಕೆ ಮುಂದಾದ ಕಾಂಗ್ರೆಸ್‌ ಅಲ್ಪಸಂಖ್ಯಾತ ಮುಖಂಡರಿಗೆ ಪೊಲೀಸರು ಗುರುವಾರ ತಡೆಯೊಡ್ಡಿದರು.

ಇಲ್ಲಿನ ಗಣೇಶಪೇಟೆಯ ದೊಡ್ಡ ಮಸೀದಿ ಬಳಿ ‘ನೋ ಸಿಎಎ, ನೋ ಎನ್‌ಆರ್‌ಸಿ’ ಸ್ಟಿಕ್ಕರ್‌ಗಳನ್ನು ಮನೆ ಬಾಗಿಲಿಗೆ ಅಂಟಿಸಲು ಮುಂದಾದಾಗ ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು.

‘ಕೇಂದ್ರ ಗೃಹ ಸಚಿವ ಅಮಿತ್ ಶಾ ನಗರಕ್ಕೆ ಬರುತ್ತಿರುವುದರಿಂದ ಶಾಂತಿ, ಸುವ್ಯವಸ್ಥೆ ಕಾಪಾಡಲು ಮುಖಂಡರು ಸಹಕರಿಸಬೇಕು. ಜ.19ರ ಬಳಿಕ ಸ್ಟಿಕ್ಟರ್‌ ಅಂಟಿಸುವ ಅಭಿಯಾನ ನಡೆಸಬಹುದು’ ಎಂದು ಪೊಲೀಸರು ಮನವಿ ಮಾಡಿದರು.

ADVERTISEMENT

ಇದರಿಂದ ಅಸಮಾಧಾನಗೊಂಡ ಮುಖಂಡರು, ರಸ್ತೆಯಲ್ಲೇ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ವಿರುದ್ಧ ಧಿಕ್ಕಾರ ಕೂಗಿದರು.

ಮುಖಂಡ ಅಶ್ಪಾಕ್‌ ಕುಮಟಾಕರ ಮಾತನಾಡಿ, ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಹುಬ್ಬಳ್ಳಿಗೆ ಶಾ ಬಂದು ಹೋದ ಬಳಿಕ ಅಭಿಯಾನ ಆರಂಭಿಸುತ್ತೇವೆ ಎಂದು ಹೇಳಿದರು.

ಮುಸ್ಲಿಂ ಧಾರ್ಮಿಕ ಮುಖಂಡರಾದ ಮೌಲಾನಾ ತಾಜುದ್ದೀನ್‌ ಪೀರಾ, ಮೌಲಾನಾ ಶಂಶುದ್ದೀನ್‌ ಖಾದ್ರಿ, ಅಬ್ದುಲ್‌ ಹಮೀದ್‌ ಖೈರಾತಿ, ಮಹಮ್ಮದ್‌ ಅಲಿ ಖಾಜಿ, ಮೌಲಾನಾ ನಹೀಂ ಶೇಖ್‌, ಮೌಲಾನಾ ನಿಯಾಜ್‌ ಆಲಂ, ಕಾಂಗ್ರೆಸ್‌ ಮುಖಂಡರಾದ ಶಫಿ ಮುದ್ದೇಬಿಹಾಳ, ಬಾಬಾಜಾನ್‌ ಮುಧೋಳ, ಮೆಹಬೂಬ್ ಬೊಲೊಬಾಯಿ, ಝಾಕೀರ್‌ ಮಿಶ್ರಿಕೋಟಿ, ಮುನ್ನಾ ಐನಾಪುರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.