ಧಾರವಾಡ: ‘ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅವರಿಗೆ 86 ವರ್ಷ ವಯಸ್ಸಾಗಿದೆ. ಅವರು ಸಂಘದ ಅಧ್ಯಕ್ಷ ಸ್ಥಾನಕ್ಕೆ ಮತ್ತೆ ಸ್ಪರ್ಧಿಸದೆ ಬೇರೆಯವರಿಗೆ ಅವಕಾಶ ನೀಡಬೇಕು’ ಎಂದು ಸಂಘದ ಅಧ್ಯಕ್ಷ ಸ್ಥಾನದ ಸ್ಪರ್ಧಾಕಾಂಕ್ಷಿ ಮೋಹನ ಲಿಂಬಿಕಾಯಿ ವಿನಂತಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಚಂದ್ರಕಾಂತ ಬೆಲ್ಲದ ಅವರು ಸಂಘದ ಅಧ್ಯಕ್ಷರಾಗಿ ಶಕ್ತಿಯನುಸಾರ ಕಾರ್ಯನಿರ್ವಹಿಸಿದ್ದಾರೆ. ಅವರು ಇನ್ನು ವಿಶ್ರಾಂತಿ ಪಡೆಯಬೇಕು. ಬದಲಾವಣೆಗೆ ಇದು ಪರ್ವಕಾಲ. ಹಳೆಯ ನೀರು ಹೋಗಿ, ಹೊಸ ನೀರು ಬರಲು ಅವಕಾಶ ನೀಡಬೇಕು’ ಎಂದು ಕೋರಿದರು.
‘ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ನಾವು ನಿರ್ಧರಿಸಿದ್ದೇವೆ. ಈಗಾಗಲೇ ನಾವು (ತಂಡ) ಸಂಘದ ಬಹಳಷ್ಟು ಸದಸ್ಯರು, ಪ್ರಮುಖರನ್ನು ಭೇಟಿಯಾಗಿದ್ದೇವೆ. ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಧಾರವಾಡ, ಬೆಳಗಾವಿ, ಹಾವೇರಿ, ಗದಗ ಸಹಿತ ವಿವಿಧೆಡೆಗಳಲ್ಲಿ ಸಂಘದ ಸದಸ್ಯರು ಇದ್ದಾರೆ’ ಎಂದರು.
‘ಪಾಟೀಲ ಪುಟ್ಟಪ್ಪ ಅವರು ಅಗಲಿದ ನಂತರ ವಿದ್ಯಾವರ್ಧಕ ಸಂಘ ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆಯಾಗಿಲ್ಲ. ಸರ್ಕಾರದಿಂದ ಅನುದಾನ ಪಡೆದು ಸಂಘ ಅಭಿವೃದ್ಧಿ ಮಾಡುವಲ್ಲಿ ಎಡವಿದ್ದಾರೆ’ ಎಂದು ದೂರಿದರು.
‘ಸಾಹಿತಿಗಳು, ಸಾಧಕರನ್ನು ಸನ್ಮಾನಿಸುವ, ಹೊಸ ಸಾಹಿತಿಗಳು ರಚಿಸಿದ ಕೃತಿಗಳನ್ನು ಸಂಘದಿಂದ ಪ್ರಕಟಿಸುವ, ಸಂಘವನ್ನು ಆರ್ಥಿಕವಾಗಿ ಸಬಲವಾಗಿಸುವ ಕೆಲಸ ಆಗಬೇಕಿದೆ. ನಾವು ಆಯ್ಕೆಯಾದರೆ ಉದ್ಯಮಗಳ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿ ನೆರವು, ಸರ್ಕಾರದಿಂದ ಅನುದಾನ ತಂದು ಸಂಘದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇವೆ’ ಎಂದು ಭರವಸೆ ನೀಡಿದರು.
ಶರಣಪ್ಪ ಕೊಟಗಿ, ಮನೋಜ ಪಾಟೀಲ, ಮಾರ್ತಾಂಡಪ್ಪ ಕತ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.