
ಧಾರವಾಡ: ನಗರದ ಬಹುತೇಕ ಸಾರ್ವಜನಿಕ ಮೂತ್ರಾಲಯಗಳು ನಿರ್ವಹಣೆ ಕೊರತೆ ಮತ್ತು ನೀರು ಇಲ್ಲದೆ ಕೊಳಕಿನ ಕೊಂಪೆಯಾಗಿ, ಬಳಸಲಾಗದ ದುಃಸ್ಥಿತಿಯಲ್ಲಿವೆ.
ಟಿಕಾರೆ ರಸ್ತೆ, ಮರಾಠಾ ಕಾಲೊನಿ ರಸ್ತೆ, ಕೋರ್ಟ್ ವೃತ್ತ, ರಂಗಾಯಣ ಪಕ್ಕದ ರಸ್ತೆ, ಲೈನ್ ಬಜಾರ ವೃತ್ತ, ಮಾಳಮಡ್ಡಿ, ಶಿವಾಜಿ ವೃತ್ತ, ರೈಲು ನಿಲ್ದಾಣ ರಸ್ತೆ ಪಕ್ಕದ ಇರುವ ಮೂತ್ರಾಲಯಗಳು ಸ್ವಚ್ಛತೆ ಇಲ್ಲದೆ ದುರ್ನಾತ ಬೀರುತ್ತಿವೆ. ಮೂಗು ಮುಚ್ಚಿಕೊಂಡು ಮೂತ್ರ ವಿಸರ್ಜನೆಗೆ ತೆರಳಬೇಕಾದ ಸ್ಥಿತಿ ಇದೆ.
ಕೆಲವು ಮೂತ್ರಾಲಯಗಳಲ್ಲಿ ಸಿಂಕ್‍ಗಳೇ ಇಲ್ಲ. ಕಟ್ಟಡ ಸುತ್ತ ಗಿಡಗಂಟಿಗಳು ಬೆಳೆದಿವೆ. ಪೈಪ್‌ಗಳು ಕಟ್ಟಿಕೊಂಡು (ಬ್ಲಾಕ್) ಕೊಠಡಿಯೊಳಗೇ ಮೂತ್ರ ಹರಿಯತ್ತಿದೆ. ಮದ್ಯದ ಖಾಲಿ ಬಾಟಲಿ, ಗುಟ್ಕಾ ಪೊಟ್ಟಣ, ಬೀಡಿ ಹಾಗೂ ಸಿಗರೇಟು ಮೋಟುಗಳು ಎಲ್ಲೆಂದರಲ್ಲಿ ಬಿದ್ದಿವೆ. ಕೆಲವರು ಗೋಡೆಗಳ ಮೇಲೆ ಗುಟ್ಕಾ ಉಗುಳಿದ್ದಾರೆ.
ಸುತ್ತಲಿನ ಹಳ್ಳಿಗಳಿಂದ ವಿವಿಧ ಕೆಲಸ ಕಾರ್ಯಗಳಿಗೆ ನಗರಕ್ಕೆ ಬರುವ ಜನರು ದುರ್ನಾತದಲ್ಲೇ ಮೂತ್ರಾಲಯಗಳಿಗೆ ಹೋಗುವ ಸ್ಥಿತಿ ಇದೆ. ಕೆಲವರು ಬಯಲಲ್ಲೇ ಮೂತ್ರ ವಿಸರ್ಜನೆ ಮಾಡುತ್ತಾರೆ.
‘ಸಾರ್ವಜನಿಕ ಮೂತ್ರಾಲಯಗಳನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಲ್ಲ. ನೀರಿನ ವ್ಯವಸ್ಥೆ ಇರಲ್ಲ. ಮೂತ್ರಾಲಯದ ಸುತ್ತ ಗಬ್ಬು ವಾಸನೆಯಿಂದ ವ್ಯಾಪಾರ ಮಾಡುವುದು ಕಷ್ಟವಾಗಿದೆ’ ಎಂದು ಟಿಕಾರೆ ರಸ್ತೆಯ ವ್ಯಾಪಾರಿಯೊಬ್ಬರು ‘ಪ್ರಜಾವಾಣಿ’ ಗೆ ತಿಳಿಸಿದರು.
‘ಕೋರ್ಟ್ ವೃತ್ತದ ಬಳಿಯ ಸಾರ್ವಜನಿಕ ಮೂತ್ರಾಲಯದ ಪೈಪ್ ಬ್ಲಾಕ್ ಆಗಿ ಕೊಳಕು ನೀರು ನೇರವಾಗಿ ತೆರೆದ ಚರಂಡಿಗೆ ಸೇರುತ್ತಿದೆ. ಈ ಭಾಗ ದುರ್ನಾತಮಯವಾಗಿದೆ. ಪೈಪ್ ಸರಿಪಡಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಕ್ರಮವಹಿಸಿಲ್ಲ. ಸೊಳ್ಳೆ ಕಾಟ ಹೆಚ್ಚಾಗಿದೆ’ ಎಂದು ಆಟೊ ಚಾಲಕರೊಬ್ಬರು ಅಳಲು ತೋಡಿಕೊಂಡರು.
ಡಿ.ಸಿ ಕಚೇರಿ: ಸಾರ್ವಜನಿಕ ಶೌಚಾಲಯದಲ್ಲಿ ನೀರಿಲ್ಲ! ಕೆಲಸದ ನಿಮಿತ್ತ ವಿವಿಧೆಡೆಯಿಂದ ಜನರು ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡುತ್ತಾರೆ. ಕಚೇರಿ ಆವರಣದಲ್ಲಿನ ಪುರುಷರ ಶೌಚಾಲಯದಲ್ಲಿ ಹಲವು ದಿನಗಳಿಂದ ನೀರಿನ ವ್ಯವಸ್ಥೆ ಇಲ್ಲ. ಮೂತ್ರಾಲಯದ ಸಿಂಕ್‌ನ ನೀರಿನ ಪೈಪ್ ಕಿತ್ತುಹೋಗಿದೆ. ಕೈ ತೊಳೆಯಲೂ ನೀರಿಲ್ಲ. ಶೌಚಾಲಯಕ್ಕೆ ಸಮರ್ಪಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.