ADVERTISEMENT

ಸಿದ್ಧಾರೂಢರ ಪರಮಭಕ್ತ ನಟ ಪುನೀತ್ ರಾಜಕುಮಾರ್

ಉತ್ತರ ಕರ್ನಾಟಕಕ್ಕೆ ಬಂದಾಗಲೆಲ್ಲಾ ಹುಬ್ಬಳ್ಳಿಯ ಮಠಕ್ಕೆ ಭೇಟಿ ನೀಡುತ್ತಿದ್ದ ‘ಅಪ್ಪು’

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2021, 14:48 IST
Last Updated 29 ಅಕ್ಟೋಬರ್ 2021, 14:48 IST
‘ಯುವರತ್ನ’ ಸಿನಿಮಾ ಚಿತ್ರೀಕರಣಕ್ಕಾಗಿ 2019ರಲ್ಲಿ ಧಾರವಾಡಕ್ಕೆ ಬಂದಿದ್ದ ನಟ ಪುನೀತ್‌ ರಾಜಕುಮಾರ್ ಅವರು, ಹುಬ್ಬಳ್ಳಿಯ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿ ಗದ್ದುಗೆಯ ದರ್ಶನ ಪಡೆದಿದ್ದರು
‘ಯುವರತ್ನ’ ಸಿನಿಮಾ ಚಿತ್ರೀಕರಣಕ್ಕಾಗಿ 2019ರಲ್ಲಿ ಧಾರವಾಡಕ್ಕೆ ಬಂದಿದ್ದ ನಟ ಪುನೀತ್‌ ರಾಜಕುಮಾರ್ ಅವರು, ಹುಬ್ಬಳ್ಳಿಯ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿ ಗದ್ದುಗೆಯ ದರ್ಶನ ಪಡೆದಿದ್ದರು   

ಹುಬ್ಬಳ್ಳಿ: ‘ನಮ್ಮ ಮನೆಗೂ ಸಿದ್ಧಾರೂಢ ಮಠಕ್ಕೂ ಅವಿನಾಭಾವ ಸಂಬಂಧವಿದೆ. ನಮ್ಮ ಕುಟುಂಬದವರು ಹುಬ್ಬಳ್ಳಿ ಕಡೆಗೆ ಹೋದರೆ, ತಪ್ಪದೆ ಮಠಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರುತ್ತೇವೆ. ನಮ್ಮ ಅಜ್ಜಿ ಕೂಡ ಮಠದಲ್ಲಿ ಕೆಲ ದಿನಗಳು ಇದ್ದರು ಎಂದು ಅಪ್ಪಾಜಿ (ರಾಜಕುಮಾರ್) ಹೇಳುತ್ತಿದ್ದರು...’

- ಬೆಂಗಳೂರಿನಲ್ಲಿ ಇತ್ತೀಚೆಗಷ್ಟೇ ನಡೆದ ಸಾಧುಕೋಕಿಲ ನಿರ್ದೇಶನದ ‘ಮಹಾಯೋಗಿ ಸಿದ್ದಾರೂಢ’ ಸಿನಿಮಾದ ಟ್ರೇಲರ್‌ ಬಿಡುಗಡೆ ಮಾಡಿದ್ದ ನಟ ಪುನೀತ್ ರಾಜಕುಮಾರ್ ಅವರು, ಉತ್ತರ ಕರ್ನಾಟಕದ ಆರಾಧ್ಯ ದೈವ ಸಿದ್ದಾರೂಢ ಮಠದೊಂದಿಗಿನ ನಂಟನ್ನು ಮೇಲಿನಂತೆ ನೆನಪಿಸಿಕೊಂಡಿದ್ದರು.

ರಾಜಕುಮಾರ್ ಅವರಿಂದ ಮಠದೊಂದಿಗೆ ಆರಂಭವಾದ ಈ ನಂಟನ್ನು, ಅವರ ಕುಟುಂಬದವರು ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ. ಸಿನಿಮಾ ಚಿತ್ರೀಕರಣಕ್ಕಾಗಿ ಉತ್ತರ ಕರ್ನಾಟಕ ಭಾಗಕ್ಕೆ ಬಂದಾಗಲೆಲ್ಲಾ ಮಠಕ್ಕೆ ಭೇಟಿ ನೀಡುವ ಪರಿಪಾಠವನ್ನು ಪುನೀತ್ ಬೆಳೆಸಿಕೊಂಡಿದ್ದರು. ಚಿಕ್ಕವರಿದ್ದಾಗ ತಂದೆ–ತಾಯಿಯೊಂದಿಗೆ ಹಲವು ಬಾರಿ ಬಂದಿದ್ದರು. ಕೊನೆಯದಾಗಿ ಅವರ ‘ಯುವರತ್ನ‘ ಸಿನಿಮಾ ಚಿತ್ರೀಕರಣಕ್ಕಾಗಿ 2019ರಲ್ಲಿ ಧಾರವಾಡಕ್ಕೆ ಬಂದಿದ್ದಾಗ ಮಠಕ್ಕೆ ಭೇಟಿ ನೀಡಿದ್ದರು.

ADVERTISEMENT

ಪುನೀತ್ ನಟನೆಯು ‘ದೊಡ್ಮನೆ ಹುಡ್ಗ’, ‘ಪವರ್’ ಚಿತ್ರಗಳ ಸಿನಿಮಾ ಶೂಟಿಂಗ್ ಹುಬ್ಬಳ್ಳಿಯಲ್ಲಿ ನಡೆದಿತ್ತು. ಈ ಪೈಕಿ, ‘ದೊಡ್ಮನೆ ಹುಡ್ಗ’ ಸಿನಿಮಾದ ‘ಅಭಿಮಾನಿಗಳೇ ನಮ್ಮನೆ ದೇವ್ರು’ ಹಾಡನ್ನು ಚನ್ನಮ್ಮ ವೃತ್ತದಲ್ಲಿ ಚಿತ್ರೀಕರಿಸಲಾಗಿತ್ತು. ಈ ಸಿನಿಮಾದಲ್ಲಿ ಉತ್ತರ ಕರ್ನಾಟಕದ ಭಾಷೆ ಜೊತೆಗೆ, ‘ಯಾಕ ಹುಡುಗ ಮೈಯಾಗ ಹೆಂಗೈತಿ’ ಹಾಡು ಕೂಡ ಇತ್ತು.

ಉತ್ತರ ಕರ್ನಾಟಕದಲ್ಲಿ ಪುನೀತ್ ಅವರಿಗೆ ಅಭಿಮಾನಿಗಳ ದೊಡ್ಡ ಬಳಗವೇ ಇತ್ತು. ಮಹದಾಯಿ ಹೋರಾಟದ ಸಂದರ್ಭದಲ್ಲೂ ಸಿನಿಮಾ ಕಲಾವಿದರು ಹುಬ್ಬಳ್ಳಿಗೆ ಭೇಟಿ ನೀಡಿದ್ದಾಗ, ಪುನೀತ್ ಪ್ರಮುಖ ಆಕರ್ಷಣೆಯಾಗಿದ್ದರು.

‘ಯುವರತ್ನ’ ಸಿನಿಮಾ ಚಿತ್ರೀಕರಣಕ್ಕಾಗಿ 2019ರಲ್ಲಿ ಧಾರವಾಡಕ್ಕೆ ಬಂದಿದ್ದ ನಟಪುನೀತ್‌ ರಾಜಕುಮಾರ್ ಅವರು, ಹುಬ್ಬಳ್ಳಿಯ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿದ್ದ ಕ್ಷಣ

ಸಾಮಾನ್ಯರಂತೆ ಭೇಟಿ:‘ಪುನೀತ್ ಅವರು ಮಠಕ್ಕೆ ಭೇಟಿ ನೀಡುವ ವಿಷಯ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಮಠದ ಸಿಬ್ಬಂದಿ ಕಚೇರಿಗೆ ಬಂದು ಹೇಳಿದಾಗಲೇ ಎಲ್ಲರಿಗೂ ಗೊತ್ತಾಗುತ್ತಿತ್ತು. ಸಾಮಾನ್ಯರಂತೆ ಬಂದು ಸಿದ್ಧಾರೂಢರು, ಗುರುನಾಥರೂಢರು ಹಾಗೂ ಮಠದ ಗೋಪುರದ ಬಳಿ ಇರುವ ಗೋವಿಂದ ಸ್ವಾಮೀಜಿ ಅವರ ಗದ್ದುಗೆಯ ದರ್ಶನ ಪಡೆಯುತ್ತಿದ್ದರು. ಪೂಜೆ ಸಲ್ಲಿಸಿ ಪ್ರಸಾದವನ್ನು ಮನೆಗೆ ಕೊಂಡೊಯ್ಯುತ್ತಿದ್ದರು’ ಎಂದು ಮಠದ ವ್ಯವಸ್ಥಾಪಕ ಈರಣ್ಣ ತುಪ್ಪದ ‘ಪ್ರಜಾವಾಣಿ’ಯೊಂದಿಗೆ ನೆನಪುಗಳನ್ನು ಹಂಚಿಕೊಂಡರು.

‘ರಾಜಕುಮಾರ್ ಕುಟುಂಬದ ಒಡೆತನದ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಯ ಕಚೇರಿ ಕೆಲ ವರ್ಷಗಳಿಂದ ಹುಬ್ಬಳ್ಳಿಯಲ್ಲಿತ್ತು. ಶಿವರಾತ್ರಿ ಸಂದರ್ಭದಲ್ಲಿ ಸಂಸ್ಥೆಯು ಮಠದಲ್ಲಿ ಒಂದು ದಿನ ಅನ್ನ ಸಂತರ್ಪಣೆ ಏರ್ಪಾಡು ಮಾಡುತ್ತಿತ್ತು’ ಎಂದು ಹೇಳಿದರು.

ಮಠದೊಂದಿಗೆ ರಾಜ್‌ ನಂಟು:‘ಗುಬ್ಬಿ ವೀರಣ್ಣ ಅವರ ನಾಟಕ ಕಂಪನಿಯಲ್ಲಿ ರಾಜಕುಮಾರ್ ಅವರು ಕೆಲಸ ಮಾಡುತ್ತಿದ್ದರು. ಕಂಪನಿ ಹುಬ್ಬಳ್ಳಿಗೆ ಬಂದಿದ್ದಾಗ ರಾಜಕುಮಾರ್ ಅವರು ಕುಟುಂಬ ಸಮೇತ ಸಿದ್ಧಾರೂಢ ಮಠ ಹಾಗೂ ಮಠದ ಪ್ರವೇಶ ಗೋಪುರದ ಬಳಿಯ ಗೋವಿಂದ ಸ್ವಾಮೀಜಿ ಮಠಕ್ಕೂ (ಸಿದ್ದಾರೂಢರ ಶಿಷ್ಯ)ಭೇಟಿ ನೀಡುತ್ತಿದ್ದರು. ಇದೇ ಸಂದರ್ಭದಲ್ಲಿ ಅವರಿಗೆ ‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ನಟಿಸಲು ಕರೆ ಬಂದಿತ್ತು. ನಾಟಕಕ್ಕೂ ಸಿನಿಮಾಗೂ ಅಜಗಜಾಂತರ ವ್ಯತ್ಯಾಸವಿದೆ ಅಂದುಕೊಂಡು ರಾಜಕುಮಾರ್ ಅವರು ನಟಿಸಲು ಹಿಂದೇಟು ಹಾಕಿದ್ದರು.

ಈ ವಿಷಯವನ್ನು ಗೋವಿಂದ ಸ್ವಾಮೀಜಿ ಅವರ ಬಳಿಯೂ ಹೇಳಿಕೊಂಡಿದ್ದರು. ಆಗ ಸ್ವಾಮೀಜಿ, ‘ನಿಮಗೆ ಸಿದ್ದಾರೂಢರ ಆಶೀರ್ವಾದವಿದೆ. ಬೇಡರ ಕಣ್ಣಪ್ಪ ಚಿತ್ರದಲ್ಲಿ ನಟಿಸಿ. ನಿಮಗೆ ಒಳ್ಳೆಯದಾಗಲಿದೆ’ ಎಂದು ಸಲಹೆ ನೀಡಿದ್ದರು. ಅದರಂತೆ, ರಾಜಕುಮಾರ್ ನಟಿಸಿದ್ದರು. ಸ್ವಾಮೀಜಿ ಮಾತಿನಂತೆಸಿದ್ದಾರೂಢರ ಆಶೀರ್ವಾದದಿಂದ ಸಿನಿಮಾ ಯಶಸ್ಸು ಕಂಡಿತು. ಅಲ್ಲಿಂದ ರಾಜಕುಮಾರ್ ಅವರು ಚಿತ್ರರಂಗದಲ್ಲಿ ಅಮೋಘವಾಗಿ ಬೆಳೆದರು. ಈ ವಿಷಯವನ್ನು ರಾಜಕುಮಾರ್ ಅವರು ಹಿಂದೆ ಮಠಕ್ಕೆ ಭೇಟಿ ನೀಡಿದ್ದಾಗ ಹೇಳಿಕೊಂಡಿದ್ದರು. ಅಂದಿನಿಂದ, ತಮ್ಮ ಕುಟುಂಬದವರು ಯಾರೇ ಹುಬ್ಬಳ್ಳಿ ಕಡೆಗೆ ಹೋದರೆ, ತಪ್ಪದೆ ಮಠಕ್ಕೆ ಭೇಟಿ ನೀಡಬೇಕು ಎಂದು ಸೂಚಿಸಿದ್ದರಂತೆ’ ಎಂದು ನೆನೆದರು.

ನಟ ರಾಜಕುಮಾರ್ –ಪಾರ್ವತಮ್ಮ ದಂಪತಿ 1980ರಲ್ಲಿಬಾಲಕಪುನೀತ್ರಾಜಕುಮಾರ್ (ಎಡಭಾಗದಲ್ಲಿ ಕುರ್ಚಿಯಲ್ಲಿ ಕುಳಿತಿರು ಎರಡನೇಯವರು) ಅವರೊಂದಿಗೆ ಹುಬ್ಬಳ್ಳಿಯ ಸಿದ್ದಾರೂಢ ಮಠದ ಬಳಿಯ ಗೋವಿಂದಸ್ವಾಮೀಜಿ ಮಠಕ್ಕೆ ಭೇಟಿ ನೀಡಿದ್ದಾಗ ತೆಗೆಸಿದ್ದ ಭಾವಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.