
ಅಣ್ಣಿಗೇರಿ: ಗದಗ-ಹುಬ್ಬಳ್ಳಿ ನಗರಗಳ ಮಧ್ಯೆದಲ್ಲಿರುವ ಅಣ್ಣಿಗೇರಿಯಿಂದ ರೈಲುಗಳಲ್ಲಿ ಸಂಚರಿಸುವ ಪ್ರಯಾಣಿಕರು ಸಾಕಷ್ಟಿದ್ದಾರೆ. ದಿನಕಳೆದಂತೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಅಣ್ಣಿಗೇರಿ ರೈಲ್ವೆ ನಿಲ್ದಾಣದಲ್ಲಿ ನಿರ್ಮಿಸಿರುವ ಶೌಚಾಲಯಗಳು ಇದುವರೆಗೂ ಬಳಕೆಗೆ ತೆರೆದುಕೊಳ್ಳದಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.
ಪ್ರತಿನಿತ್ಯ ಇಲ್ಲಿಂದ ಸಾವಿರಾರು ಕೂಲಿ ಕಾರ್ಮಿಕರು ಹಾಗೂ ಇನ್ನಿತರೆ ಪ್ರಯಾಣಿಕರು ಗದಗ-ಹುಬ್ಬಳ್ಳಿ ಕಡೆಗೆ ಸಂಚರಿಸುವುದು ಸಾಮಾನ್ಯವಾಗಿದೆ. ಪ್ರಯಾಣಿಕರಿಗೆ ಒದಗಿಸಬೇಕಾಗಿದ್ದ ಅನುಕೂಲವನ್ನು ಮರೆಮಾಚಲಾಗಿದೆ. ಶೌಚಾಲಯಗಳಿಗೆ ಬೀಗ ಜಡಿಯಲಾಗಿದೆ.
ನಿತ್ಯ ಪ್ರಯಾಣಿಸುವ ಪ್ರಯಾಣಿಕರು ಶೌಚಕ್ಕೆ ಎಂದು ಹೋದಾಗ ಬೀಗ ಜಡಿದಿರುವದನ್ನು ಗಮನಿಸಿ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ‘ಕೆಲವೊಮ್ಮೆ ಬಹಳ ಹೊತ್ತು ರೈಲ್ವೆ ಬರುವಿಕೆಗಾಗಿ ಕಾಯುವ ಪರಿಸ್ಥಿತಿ ಉದ್ಭವಿಸುತ್ತಿದೆ. ಇಂತಹ ಸಂದರ್ಭದಲ್ಲಿ ಮಹಿಳಾ ಪ್ರಯಾಣಿಕರು ಸಾಕಷ್ಟು ತೊಂದರೆ ಎದುರಿಸುವಂತಾಗಿದೆ’ ಎಂದು ಅಂಗವಿಕಲ ಮಹಿಳೆ ಫಾತೀಮಾ ಗದಗ ಅವರು ಹೇಳಿದರು.
ಹೆಸರಿಗೆ ಮಾತ್ರ ಸೀಮಿತವಾದ ಶೌಚಾಲಯಗಳಿಗೆ ತೆರೆದುಕೊಳ್ಳುವ ಭಾಗ್ಯ ಯಾವಾಗ ದೊರಕುತ್ತದೆ ಎನ್ನುವುದು ಗೊತ್ತಾಗುತ್ತಿಲ್ಲ ಎಂದು ಬಳ್ಳಾರಿಯ ಮಹಿಳಾ ಪ್ರಯಾಣಿಕರೊಬ್ಬರು ಪ್ರಶ್ನಿಸಿದರು ?
‘ಅಣ್ಣಿಗೇರಿ ಹಾಗೂ ನವಲಗುಂದ ತಾಲ್ಲೂಕಿನ ಎಲ್ಲ ಪ್ರಯಾಣಿಕರಿಗೆ ದೂರದ ಊರುಗಳಿಗೆ ತೆರಳಲು ಇರುವ ಅತೀ ದೊಡ್ಡ ರೈಲು ನಿಲ್ದಾಣ ಇದಾಗಿದೆ. ಈ ನಿಲ್ದಾಣದಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಲು ರೈಲು ಅಧಿಕಾರಿಗಳು ಮುಂದಾಗಬೇಕು‘ ಎಂದು ಪ್ರಯಾಣಿಕ ಆರ್.ರಾಜು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.