ADVERTISEMENT

ಕಲಘಟಗಿಯಲ್ಲಿ ಮಳೆ ಆವಾಂತರ: ಕುಸಿದ ಕೆರೆ ಕಟ್ಟೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 15:07 IST
Last Updated 23 ಜುಲೈ 2021, 15:07 IST
ಕಲಘಟಗಿ ತಾಲ್ಲೂಕಿನ ತಾವರಗೇರಿ ಗ್ರಾಮದ ಹೊನ್ನಿಹಳ್ಳಿ ಕೆರೆ ಒಡೆದು ಗ್ರಾಮದ ರೈತ ಕಲ್ಲಪ್ಪ ಪುಟ್ಟಪ್ಪನವರ ಬಾಳೆ ಹಣ್ಣಿನ ತೋಟಕ್ಕೆ ನೀರು ನುಗ್ಗಿರುವುದು
ಕಲಘಟಗಿ ತಾಲ್ಲೂಕಿನ ತಾವರಗೇರಿ ಗ್ರಾಮದ ಹೊನ್ನಿಹಳ್ಳಿ ಕೆರೆ ಒಡೆದು ಗ್ರಾಮದ ರೈತ ಕಲ್ಲಪ್ಪ ಪುಟ್ಟಪ್ಪನವರ ಬಾಳೆ ಹಣ್ಣಿನ ತೋಟಕ್ಕೆ ನೀರು ನುಗ್ಗಿರುವುದು   

ಕಲಘಟಗಿ: ತಾಲ್ಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆ ಸಾಕಷ್ಟು ಅನಾಹುತ ತಂದೊಡ್ಡಿದೆ. ಮನೆಗಳ ಗೋಡೆಗಳು ಕುಸಿದು ಜನಜೀವನ ಅಸ್ತವ್ಯಸ್ತಗೊಂಡಿದೆ. ಕೆರೆಗಳ ‌ಕಟ್ಟೆ ಒಡೆದು, ರೈತರ ಬೆಳೆ ಹಾನಿಯಾಗಿ ಕೆಲವೆಡೆ ರಸ್ತೆ ಸಂಪರ್ಕ ಕಡಿತವಾಗಿದೆ.

ಧಾರಾಕಾರ ಮಳೆಗೆ ಹಟಕಿನಾಳ ಗ್ರಾಮದಲ್ಲಿ ಒಂದು ತಿಂಗಳ ಹಿಂದೆ ಜಿಗಳಿಕೆರೆ ಒಡ್ದು ಒಡೆದು ರೈತರ ಬೆಳೆ ಹಾಳಾಗಿದ್ದವು. ಆಗ ತಾತ್ಕಾಲಿಕವಾಗಿ ಒಡ್ಡು ಸರಿಪಡಿಸಲಾಗಿತ್ತು. ಈಗ ಮತ್ತೆ ಕೆರೆ ಒಡ್ದು ಕೊಚ್ಚಿಕೊಂಡು ಹೋಗಿದ್ದು, ಬೆಳೆ ನೀರಿನಲ್ಲಿ ನಿಂತಿವೆ.

ಬೆಂಡಲಗಟ್ಟಿ ಗ್ರಾಮದ ಆಸ್ತಾನಾರಕಟ್ಟಿ ಕೆರೆ ಕಟ್ಟೆ ಒಡೆದು ಸೋಯಾಬಿನ್, ಗೋವಿನ ಜೋಳ ಹಾಗೂ ಭತ್ತದ ಬೆಳೆ ನೀರು ಪಾಲಾಗಿದೆ. ತಾವರಗೇರಿ ಗ್ರಾಮದ ಹೊನ್ನಿಹಳ್ಳಿ ಕೆರೆ ಕಟ್ಟೆ ಒಡೆದು ಬಾಳೆ ತೋಟ, ಸೋಯಾಬಿನ್, ಗೋವಿನ ಜೋಳ, ಭತ್ತ, ಕಬ್ಬು ಬೆಳೆಗಳಿಗೆ ನೀರು ನುಗ್ಗಿದೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಸಂಗಮೇಶ್ವರ ಗ್ರಾಮದ ಹತ್ತಿರದ ಮಂಗ್ಯಾನ ಹಳ್ಳ ತುಂಬಿ ಹರಿಯುತ್ತಿದೆ. ಇದರಿಂದಾಗಿ ಕಲಘಟಗಿ-ಹಳಿಯಾಳ ರಾಜ್ಯ ಹೆದ್ದಾರಿ ರಸ್ತೆ ಸಂಪರ್ಕ ಕಡಿತವಾಗಿದೆ.

ADVERTISEMENT

ಜೋಡಳ್ಳಿ- ಕಳಸನಕೊಪ್ಪ ಹಾಗೂ ಹಿರೇಹೊನ್ನಿಹಳ್ಳಿ- ಬಿಸರಳ್ಳಿ, ಬೆಲವಂತರ ಗ್ರಾಮದ ಬೇಡ್ತಿ ಹಳ್ಳದ ಅಪಾಯ ಮಟ್ಟ ತುಂಬಿ ಹರಿಯುತ್ತಿರುವುದು ಕೃಷ್ಣನ ದೇವಸ್ಥಾನ ಮುಳುಗಡೆಯಾಗಿದೆ. ಹುಬ್ಬಳ್ಳಿ-ಧಾರವಾಡಕ್ಕೆ ಕುಡಿಯುವ ನೀರು ಒದಗಿಸುವ ನೀರಸಾಗರ ಕೆರೆಯಲ್ಲಿ ಒಳಹರಿವು ಜಾಸ್ತಿಯಾಗಿದೆ. ಯಲ್ಲಾಪುರ ತಾಲ್ಲೂಕಿನ ಅರಬೈಲ್ ಗುಡ್ಡ ಕುಸಿತದಿಂದಾಗಿ ರಸ್ತೆ ಬಂದ್‌ ಆಗಿದ್ದರಿಂದ ಪಟ್ಟಣದಲ್ಲಿ ಮಧ್ಯಾಹ್ನದವರೆಗೆ ಸಂಪೂರ್ಣ ಸಂಚಾರ ದಟ್ಟಣೆಯಾಗಿತ್ತು. ಹೀಗಾಗಿ ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು. ಮುಂಡಗೋಡ ರಸ್ತೆ ಮೂಲಕ ವಾಹನ ಸಂಚಾರ ತೆರಳಿದವು.

ಮಳೆಯಿಂದಾಗಿ ಸಾಕಷ್ಟು ನಷ್ಟವಾಗಿದೆ. ಸರ್ಕಾರ ಆದಷ್ಟು ಬೇಗನೆ ಪರಿಹಾರ ಕೊಡುವ ವ್ಯವಸ್ಥೆ ಮಾಡಬೇಕು ಎಂದು ರೈತರಾದ ಕಲ್ಲಪ್ಪ ಪುಟ್ಟಪ್ಪನವರ ಹಾಗೂ ಮಲ್ಲಯ್ಯಸ್ವಾಮಿ ಗೂಡಿನಮನಿ ಆಗ್ರಹಿಸಿದ್ದಾರೆ. ಕೆರೆ ನೀರಿನಿಂದಾಗಿ ಸಮಸ್ಯೆ ಹೆಚ್ಚಾಗಿದೆ ಎಂದು ‌‌ಹನುಮಾಪುರ ಗ್ರಾಮದ ಶಂಕರೆವ್ವ ಹಾಗೂ ಚನ್ನಪ್ಪ ಶಿವಶೆಟ್ಟರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.