ADVERTISEMENT

ಮರಗಳಿಗೆ ರಾಖಿ ಕಟ್ಟೋಣ... ಪರಿಸರ ರಕ್ಷಿಸುವ ಪಣ ತೊಡೋಣ...

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2019, 19:30 IST
Last Updated 14 ಆಗಸ್ಟ್ 2019, 19:30 IST
ರಾಖಿ ಖರೀದಿಯ ಸಂಭ್ರಮದಲ್ಲಿ ಹುಬ್ಬಳ್ಳಿಯ ನಾಗರಿಕರು  ಚಿತ್ರ: ಈರಪ್ಪ ನಾಯ್ಕರ್‌
ರಾಖಿ ಖರೀದಿಯ ಸಂಭ್ರಮದಲ್ಲಿ ಹುಬ್ಬಳ್ಳಿಯ ನಾಗರಿಕರು  ಚಿತ್ರ: ಈರಪ್ಪ ನಾಯ್ಕರ್‌   

ಮತ್ತೆ ಬಂದಿದೆ ರಕ್ಷಾಬಂಧನ. ಅಣ್ಣ ತಂಗಿಯರ ಸಂಬಂಧವನ್ನು ಗಟ್ಟಿಯಾಗಿ ಬೆಸೆಯುವ ಹಬ್ಬ. ಗ್ರಾಮೀಣ ಪ್ರದೇಶದಲ್ಲಿ ನೂಲು ಹುಣ್ಣಿಮೆ ಎಂದೇ ಈ ಹಬ್ಬ ಪ್ರಸಿದ್ಧ. ಸಹೋದರಿ ತನ್ನ ಸಹೋದರನ ಕೈಗಳಿಗೆ ನೂಲಿನ ದಾರವನ್ನು ಕಟ್ಟಿ, ಮನೆಯಲ್ಲಿ ಮಾಡಿದ ಸಿಹಿ ತಿನಿಸಿ ‘ನಿನ್ನ ಬಾಳು ಸಿಹಿಯಾಗಿರಲಿ. ನಿನಗೆ ಭಗವಂತ ಹೆಚ್ಚು ಶಕ್ತಿ ಕೊಡಲಿ, ನನ್ನ ತವರನ್ನು ಚೆನ್ನಾಗಿ ನೋಡಿಕೋ, ನಿನಗೆ ಸಮೃದ್ಧಿ ಸಿಗಲಿ’ ಎಂದು ಬೇಡಿಕೊಳ್ಳುವ ಹಬ್ಬವಿದು. ಅದೇ ರೀತಿ ಸಹೋದರ ತನ್ನ ಅಕ್ಕ ಅಥವಾ ತಂಗಿಗೆ ನೂಲಿನ ಬಟ್ಟೆಯನ್ನು ಕೊಡಿಸಿ, ಸಿಹಿ ತಿನಿಸಿ ‘ಚಿಂತೆ ಮಾಡಬೇಡಾ, ನಿನ್ನ ರಕ್ಷಣೆಗೆ ನಾನು ಸದಾ ಬದ್ಧನಾಗಿದ್ದೇನೆ’ ಎಂದು ಆತ್ಮವಿಶ್ವಾಸ ಹೆಚ್ಚಿಸುವ ಆಚರಣೆ.

ಆದರೆ ಇತ್ತೀಚಿನ ದಿನಗಳಲ್ಲಿ ನೂಲ ಹುಣ್ಣಿಮೆ ತನ್ನ ಅರ್ಥ ಕಳೆದುಕೊಂಡು ರಕ್ಷಾ ಬಂಧನ, ರಾಖಿ ಹಬ್ಬವಾಗಿ ಫ್ಯಾಶನ್ ಆಗಿಬಿಟ್ಟಿದೆ. ಹತ್ತಿ, ರೇಷ್ಮೆ, ಉಣ್ಣೆ, ಕಲ್ನಾರು, ಸೆಣಬಿನ ನೂಲುಗಳ ಜಾಗದಲ್ಲಿ ಬಣ್ಣ ಬಣ್ಣದ ಪ್ಲಾಸ್ಟಿಕ್, ಫೋಮ್, ಥರ್ಮಾಕೋಲ್ ಆವರಿಸಿಬಿಟ್ಟಿದೆ. ಮನೆಯಲ್ಲಿ ಮಾಡಿದ ಉಂಡಿ, ಕೋಡುಬಳೆ ಜಾಗದಲ್ಲಿ ಅಂಗಡಿಗಳಲ್ಲಿ ಸಿಗುವ ಕೃತಕ ಬಣ್ಣ ಮಿಶ್ರಿತ ಸಿಹಿತಿನಿಸುಗಳು ಬಂದು ಸೇರಿಕೊಂಡಿವೆ. ಹಬ್ಬದ ನಂತರದ ಪರಿಣಾಮ ಊಹಿಸಿಕೊಂಡರೆ ಭೂಮಿ ಪ್ಲಾಸ್ಟಿಕ್ ಸುರಿಯುವ ಕಸದ ತೊಟ್ಟಿಯಾಯಿತಲ್ಲಾ? ಎಂದು ಖೇದವೆನಿಸುತ್ತದೆ. ಮಾರ್ಕೆಟ್‌ನಲ್ಲಿ ಎಲ್ಲಿ ನೋಡಿದರೂ ಹೊಳೆಯುವ, ನಿಸರ್ಗಕ್ಕೆ ಮಾರಕವಾದ ಬಣ್ಣ ಬಣ್ಣದ ರಾಖಿಗಳೇ!

ಸರ್ಕಾರ ಪ್ಲಾಸ್ಟಿಕ್ ನಿಷೇಧ ಕಾನೂನು ಜಾರಿ ತಂದಿದೆ ನಿಜ. ಆದರೆ ಅದು ಜಾರಿಯಾಗುವುದು ಆ ಕಾನೂನುಗಳನ್ನು ನಾವು ಆಚರಣೆಗೆ ತಂದಾಗ ಮಾತ್ರ. ನಿಜವಾದ ಅರ್ಥದಲ್ಲಿ ನೈಸರ್ಗಿಕ ಅಂದರೆ ಹತ್ತಿ, ನಾರು, ಉಣ್ಣೆ, ರೇಷ್ಮೆ ನೂಲು ಬಳಸುವ ಹುಣ್ಣಿಮೆಯಾಗಬೇಕೆ ವಿನಃ,
ಪ್ಲಾಸ್ಟಿಕ್, ಫೋಮ್‌ಗಳಿಂದ ತಯಾರಿಸಿದ ರಾಖಿ ಖರೀದಿಸುವುವುದರಿಂದಲ್ಲ.

ADVERTISEMENT

ಪ್ಲಾಸ್ಟಿಕ್ ಎಷ್ಟೇ ವರ್ಷ ಗತಿಸಿದರೂ ಭೂಮಿಯ ಒಡಲು ಸೇರಿ ಕೊಳೆಯದೇ ಉಳಿಯವುದು. ಭೂಮಿಯ ಮಾಲಿನ್ಯಕ್ಕೆ ಕಾರಣವಾಗುವುದು. ನೀರು ಭೂಮಿಯೊಳಗೆ ಇಳಿಯುವುದನ್ನು ತಡೆಗಟ್ಟುವುದು. ಆದ್ದರಿಂದ ಪರಿಸರಸ್ನೇಹಿ ನೂಲು ಹುಣ್ಣಿಮೆ ಆಚರಣೆ ನಿಜವಾದ ಅರ್ಥದಲ್ಲಿ ಅಣ್ಣ ತಂಗಿಯರ ಸಂಬಂಧವನ್ನು ಬೆಸೆಯಬಲ್ಲದು ಅಲ್ಲವೇ?

ಅಷ್ಟಕ್ಕೂ ಈಗ ನಿಜವಾದ ರಕ್ಷಣೆ ಬೇಕಾಗಿರುವುದು ಮನುಷ್ಯಕುಲಕ್ಕಲ್ಲ. ಆಪತ್ತು ಬಂದೊದಗಿರುವುದು ನಮ್ಮ ಪರಿಸರಕ್ಕೆ. ಪರಿಸರ ಸಮತೋಲನವಾಗಿಡಲು ಕಾರಣವಾದ, ನಮ್ಮ ಅತಿಯಾಸೆಗೋಸ್ಕರ ಅನ್ನ, ನೀರು, ಗಾಳಿ, ಆಶ್ರಯ ನೀಡುತ್ತ ಬಂದ ಆ ಮರಗಿಡಗಳಿಗೆ. ಸಾವಿರಾರು ಜೀವ ಜಂತುಗಳಿಗೆ, ಸೂಕ್ಷ್ಮಜೀವಿಗಳಿಗೆ, ಪಕ್ಷಿ ಪ್ರಾಣಿಗಳಿಗೆ ಆಶ್ರಯವಾಗಿದ್ದ ಸಸ್ಯ ಸಂಕುಲಕ್ಕೆ. ಅವು ನೀಡುವ ಆಮ್ಲಜನಕ, ನೆರಳು, ತಂಪು, ಕಣ್ಣಿಗೆ ಹಸಿರು ಇವುಗಳನ್ನು ಲೆಕ್ಕ ಹಾಕಲು ಸಾಧ್ಯವೇ? ಪರಿಸರ ದಿನವೆಂದು ಬರೀ ಗಿಡ ನೆಟ್ಟರೆ ಸಾಲದು. ನೂಲು ಹುಣ್ಣಿಮೆಯಂದು ಅವುಗಳಿಗೆ ನೂಲು ಕಟ್ಟಿ ಅವುಗಳನ್ನು ಉಳಿಸುವ, ಬೆಳೆಸುವ, ರಕ್ಷಿಸುವ ಪ್ರತಿಜ್ಞೆ ಮಾಡೋಣ. ಈ ಪರಿಸರಸ್ನೇಹಿ ಆಚರಣೆ ನಿಜವಾದ ಅರ್ಥದಲ್ಲಿ ರಕ್ಷಾ ಬಂಧನವಾಗಬಹುದು. ಮುಂದಿನ ಪ್ರಜೆಗಳಾದ ಮಕ್ಕಳಿಗೆ ಒಂದು ಉತ್ತಮ ಪಾಠವಾಗಬಹುದು. ಜೀವ ಇರುವ ಗಿಡಮರಗಳ ಅನ್ಯೋನ್ಯತೆ, ಬಾಂಧವ್ಯ ಏರ್ಪಡುವುದು. ಮಗು ಮತ್ತು ಮರದ ನಡುವೆ ಉತ್ತಮ ಸ್ಪಂದನೆ ಉಂಟಾಗುವುದು. ಮಗು ತಾನು ರಾಖಿ ಕಟ್ಟಿದ ಮರದ ಜವಾಬ್ದಾರಿ, ರಕ್ಷಣೆ ತನ್ನದೇ ಎಂದು ಕಾರ್ಯೋನ್ಮುಖನಾಗಲು ಸಾಧ್ಯವಾಗುವುದು.

ಈ ರೀತಿಯ ಹಸಿರು ಅಭ್ಯಾಸಗಳು ನಮ್ಮ ಪ್ರಕೃತಿ ಮೇಲಿನ ಒತ್ತಡವನ್ನು ಸ್ವಲ್ಪ ಮಟ್ಟಿಗಾದರೂ ತಗ್ಗಿಸಬಹುದು. ನೈಸರ್ಗಿಕ ನೂಲು, ಮನೆಯಲ್ಲಿ ತಯಾರಿಸಿದ ತಿಂಡಿ ತಿನಿಸುಗಳು ಮನುಷ್ಯನ ಆರೋಗ್ಯವನ್ನು ಹೆಚ್ಚಿಸಬಹುದು. ಹಾಗೇ ನೂಲಿನ ರಾಖಿ ಗಿಡಮರಗಳ ಮೇಲಿನ ಪ್ರೀತಿ, ಪ್ರೇಮ, ವಿಶ್ವಾಸವನ್ನು ಇಮ್ಮಡಿಗೊಳಿಸಬಹುದು ಅಲ್ಲವೇ? ಹಾಗಾದರೆ ಬನ್ನಿ, ಗಿಡಮರಗಳಿಗೆ ರಾಖಿ ಕಟ್ಟೋಣ.

ಡಾ.ಲಿಂಗರಾಜ ರಾಮಾಪೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.