ಹುಬ್ಬಳ್ಳಿ: ಸಹೋದರತ್ವದ ಬಾಂಧವ್ಯ ಬೆಸೆಯುವ ‘ರಕ್ಷಾ ಬಂಧನ’ ಹಬ್ಬದ ಹಿನ್ನೆಲೆ ನಗರದ ಮಾರುಕಟ್ಟೆಯಲ್ಲಿ ಶುಕ್ರವಾರ ರಾಖಿ ಖರೀದಿ ಭರಾಟೆ ಜೋರಾಗಿತ್ತು.
ಯುವತಿಯರು, ಶಾಲಾ– ಕಾಲೇಜು ವಿದ್ಯಾರ್ಥಿನಿಯರು, ಗೃಹಿಣಿಯರು ಸಹೋದರರಿಗೆ ಕಟ್ಟಲು ನಾನಾ ಬಗೆಯ ರಾಖಿಯನ್ನು ಸಂಭ್ರಮದಿಂದ ಖರೀದಿಸುವ ದೃಶ್ಯ ಸಾಮಾನ್ಯವಾಗಿತ್ತು. ಹಲವು ಬಗೆಯ ರಾಖಿಗಳು ಅಂಗಡಿ ಮುಂಗಟ್ಟೆಗಳನ್ನು ಸಿಂಗರಿಸಿದ್ದು, ಇಳಿಬಿಟ್ಟ ಹಗ್ಗಗಳಲ್ಲಿ ಗೊಂಚಲಿನಂತೆ ನೇತಾಡುತ್ತ ಕಣ್ಮನ ಸೆಳೆಯುತ್ತಿವೆ.
ಈ ಬಾರಿ ಮಾರುಕಟ್ಟೆಯಲ್ಲಿ ಫ್ಯಾನ್ಸಿ ರಾಖಿ, ಪೆಂಡೆಂಟ್ ರಾಖಿ, ಸ್ಟೋನ್ ರಾಖಿ, ಕಿಡ್ ರಾಖಿ, ಜಾರ್ದೋಸಿ ರಾಖಿ, ದೋರಿ ಹೆಸರಿನ ವಿವಿಧ ರಾಖಿಗಳು ಹೆಣ್ಣುಮಕ್ಕಳನ್ನು ಆಕರ್ಷಿಸುತ್ತಿವೆ.
ಬಟನ್ ರಾಖಿ, ಥ್ರೆಡ್ ರಾಖಿ, ಪೂಜಾ ರಾಖಿ, ಫ್ಲವರ್ ರಾಖಿ ಸೇರಿದಂತೆ ಕಾರ್ಟೂನ್ ಶೋಗಳ ಪಾತ್ರಗಳು, ವಾಟ್ಸ್‌ಆ್ಯಪ್, ಫೇಸ್‌ಬುಕ್, ಗೂಗಲ್ ಎಮೋಜಿಗಳೂ ರಾಖಿ ವಿನ್ಯಾಸಗಳಾಗಿ ಮಾರುಕಟ್ಟೆಗೆ ಬಂದಿವೆ. ಸ್ಪೈಡರ್ ಮ್ಯಾನ್, ಛೋಟಾ ಭೀಮ್, ಬ್ಯಾಟ್ ಮ್ಯಾನ್, ಡೊರೆಮಾನ್, ಪಬ್ಜಿ, ಪಾಂಡಾ, ಸಿಂಡ್ರೆಲಾ ಚಿತ್ರದ ಹಾಗೂ ಸ್ಪಂಜ್ ರಾಖಿಗಳು ಮಾರಾಟಕ್ಕಿವೆ.
₹10ರಿಂದ ₹1,000 ಬೆಲೆಯವರೆಗೂ ರಾಖಿಗಳು ಲಭ್ಯ ಇವೆ. ಗಣೇಶ, ಲಕ್ಷ್ಮಿ, ಕೃಷ್ಣ, ಆಂಜನೇಯ ಮುದ್ರೆ, ಓಂ ಚಿಹ್ನೆ, ನಕ್ಷತ್ರ ಮಾದರಿಯ ಹಾಗೂ ಸ್ಟೋನ್, ಶ್ರೀರಕ್ಷಾ, ಶುಭ, ಕ್ರೇಜಿ, ತಾರಾ, ಡೈಮಂಡ್ ಹೆಸರಿನ ಚಿತ್ತಾಕರ್ಷಕ ರಾಖಿಗಳು ಹೆಚ್ಚಾಗಿ ಮಾರಾಟ ಆಗುತ್ತಿವೆ. ಅಲ್ಲದೆ, ಸ್ಪಂಜ್, ವಿವಿಧ ಬಗೆಯ ದಾರ, ರುದ್ರಾಕ್ಷಿ, ಮಣಿ, ಹರಳು ಪೋಣಿಸಿರುವ ರಾಖಿಗಳು ಹಾಗೂ ಬೆಳ್ಳಿ– ಬಂಗಾರ ವರ್ಣದ ಆಲಂಕಾರಿಕ ರಾಖಿಗಳಿಗೆ ಬೇಡಿಕೆ ಹೆಚ್ಚಿದೆ.
ಬೆಂಗಳೂರು, ಕೋಲ್ಕತ್ತ, ಮುಂಬೈ, ಕೊಲ್ಹಾಪುರ, ಹೈದರಾಬಾದ್ ಸೇರಿದಂತೆ ವಿವಿಧ ಪ್ರಮುಖ ನಗರಗಳಿಂದ ರಾಖಿಗಳು ಹುಬ್ಬಳ್ಳಿಗೆ ಬಂದಿದೆ.
‘ಒಂದು ವಾರದಿಂದ ರಾಖಿ ಖರೀದಿ ಜೋರಾಗಿದೆ. ದೂರದ ಊರುಗಳಿಗೆ ರಾಖಿ ಕಳುಹಿಸುವವರು ಈ ಹಿಂದೆಯೇ ಖರೀದಿಸಿದ್ದಾರೆ. ಸ್ಥಳೀಯವಾಗಿ ಇರುವವರು ಎರಡು ದಿನಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಗೆ ಬರುತ್ತಿದ್ದಾರೆ’ ಎಂದು ದಾಜಿಬಾನಪೇಟೆಯ ವ್ಯಾಪಾರಿ ರಹೀಂಖಾನ್ ಹೇಳಿದರು.
‘ಕಳೆದ ವರ್ಷಕ್ಕಿಂತ ಈ ವರ್ಷ ಬೀದಿಬದಿಗಳಲ್ಲಿ ಹೆಚ್ಚಿನ ಅಂಗಡಿಗಳನ್ನು ತೆರೆದು ರಾಖಿ ಮಾರಾಟ ಮಾಡಲಾಗುತ್ತಿದ್ದು, ವ್ಯಾಪಾರ ಕಡಿಮೆ ಇದೆ. ಈವರೆಗೆ ಶೇ 60ರಷ್ಟು ರಾಖಿಗಳು ಮಾತ್ರ ಮಾರಾಟ ಆಗಿವೆ. ಉಳಿದ ರಾಖಿಗಳನ್ನು ತೆಗೆದಿಟ್ಟು, ಮುಂದಿನ ವರ್ಷ ಮಾರಾಟ ಮಾಡಲಾಗುವುದು’ ಎಂದು ದುರ್ಗದಬೈಲ್‌ನ ವ್ಯಾಪಾರಿ ವಸೀಂ ಅಬ್ದುಲ್‌ನವರ ತಿಳಿಸಿದರು.
ರಾಖಿ ಎಂದರೆ ರಕ್ಷೆ. ವರ್ಷಕ್ಕೊಮ್ಮೆ ಬರುವ ಈ ಹಬ್ಬದಲ್ಲಿ ಅಣ್ಣನಿಗೆ ರಾಖಿ ಕಟ್ಟುತ್ತೇನೆ. ಈ ಬಾರಿ ಮಾರುಕಟ್ಟೆಗೆ ಹೊಸ ಹೊಸ ವಿನ್ಯಾಸದ ರಾಖಿ ಬಂದಿರುವುದು ಖುಷಿ ತಂದಿದೆಪ್ರಣೀತಾ ಗಣೇಶ ಹುಬ್ಬಳ್ಳಿ ನಿವಾಸಿ
ಬೆಳ್ಳಿ ಬಂಗಾರದ ರಾಖಿಗೂ ಬೇಡಿಕೆ:
ದರ ಏರಿಕೆ ನಡುವೆಯೂ ಬೆಳ್ಳಿ ಬಂಗಾರದಿಂದ ತಯಾರಿಸಿದ ರಾಖಿಗಳಿಗೂ ಈ ಬಾರಿ ಬೇಡಿಕೆ ಹೆಚ್ಚಾಗಿದೆ. ನಗರದ ವಿವಿಧ ಆಭರಣ ಮಳಿಗೆಗಳಲ್ಲಿ ಶುಕ್ರವಾರ ಖರೀದಿ ಜೋರಾಗಿತ್ತು. ಸಹೋದರರಿಗಾಗಿ ಮಧ್ಯಮ ವರ್ಗದವರು ಬೆಳ್ಳಿಯ ಚೈನ್ ಹಾಗೂ ಆರ್ಥಿಕ ಸ್ಥಿತಿವಂತರು ಬಂಗಾರದ ಬ್ರೇಸಲೈಟ್ ಖರೀದಿಸಿದರು. ಅಲ್ಲದೆ ರಾಖಿ ಕಟ್ಟಿದ ಸಹೋದರಿಗೆ ಕೊಡುಗೆ ರೂಪದಲ್ಲೂ ಚಿನ್ನಾಭರಣ ಖರೀದಿ ಸಾಮಾನ್ಯವಾಗಿತ್ತು. ‘ಮಧ್ಯಮ ವರ್ಗದವರೂ ಚಿನ್ನ ಬೆಳ್ಳಿಯ ರಾಖಿ ಖರೀದಿಸಲಿ ಎಂಬ ಉದ್ದೇಶದಿಂದ ಕಡಿಮೆ ಬೆಲೆಗೆ ರಾಖಿಗಳನ್ನು ಸಿದ್ಧಪಡಿಸಲಾಗಿದೆ. ₹300ರಿಂದ ₹1000ದ ವರೆಗೆ ಬೆಳ್ಳಿಯ ರಾಖಿ ₹2700ರಿಂದ ₹1 ಲಕ್ಷದವರೆಗೆ ಚಿನ್ನದ ರಾಖಿ ತಯಾರಿಸಿದ್ದೇವೆ. ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಕೆಲವು ಗ್ರಾಹಕರು ತಮಗೆ ಬೇಕಾದ ವಿನ್ಯಾಸದಲ್ಲಿ ಚಿನ್ನ ಬೆಳ್ಳಿಯ ರಾಖಿ ತಯಾರಿಸಲು ಈ ಮುಂಚೆಯೇ ತಿಳಿಸಿ ಪಡೆಯುತ್ತಿದ್ದಾರೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ರಾಖಿ ತಯಾರಿಸಿ ಮಾರಾಟ ಮಾಡಲಾಗುತ್ತಿದೆ’ ಎಂದು ದುರ್ಗದಬೈಲ್‌ನ ರತ್ನದೀಪ ಜ್ಯುವೆಲರ್ಸ್‌ನ ಮಾಲೀಕ ಚೇತನ್ ಸಂಘ್ವಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.