
ಹುಬ್ಬಳ್ಳಿ: ಇಲ್ಲಿನ ರಾಜನಗರದಲ್ಲಿನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಕ್ರೀಡಾಂಗಣದಲ್ಲಿ ಭಾನುವಾರದಿಂದ ನಾಲ್ಕು ದಿನ ಕ್ರಿಕೆಟ್ ಕಲರವ ಏರ್ಪಡಲಿದೆ.
ಕರ್ನಾಟಕ ಮತ್ತು ಚಂಡೀಗಡ ತಂಡಗಳ ನಡುವೆ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ‘ಬಿ’ ಗುಂಪಿನ ಪಂದ್ಯ ಇಲ್ಲಿ ನಡೆಯಲಿದ್ದು, ಪಂದ್ಯಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದೆ.
ಉಭಯ ತಂಡಗಳು ಶುಕ್ರವಾರವೇ ನಗರಕ್ಕೆ ಆಗಮಿಸಿವೆ. ಶುಕ್ರವಾರ ಮಧ್ಯಾಹ್ನ ಅಭ್ಯಾಸ ಮಾಡಿದ್ದ ಆಟಗಾರರು ಶನಿವಾರ ಬೆಳಿಗ್ಗೆಯೂ ಸುಮಾರು ಎರಡು ಗಂಟೆ ನೆಟ್ಸ್‌ನಲ್ಲಿ ಬೆವರು ಹರಿಸಿದರು.
ಸ್ಥಳೀಯ ಕ್ಲಬ್‌ಗಳ ಆಟಗಾರರು, ಕ್ರಿಕೆಟ್ ಪ್ರೇಮಿಗಳಿಗೆ ರಾಜ್ಯ ತಂಡದಲ್ಲಿರುವ ತಾರಾ ವರ್ಚಸ್ಸಿನ ಆಟಗಾರರಾದ ಮಯಂಕ್ ಅಗರವಾಲ್, ಕರುಣ್ ನಾಯರ್, ಶ್ರೇಯಸ್ ಗೋಪಾಲ್ ಸೇರಿ ಇತರ ಆಟಗಾರರನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಬಹುದು.
ಪಂದ್ಯ ವೀಕ್ಷಣೆಗೆ ಬರುವ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಕ್ರೀಡಾಂಗಣದ ಮೂರನೇ ಪ್ರವೇಶದ್ವಾರದ ಮೂಲಕ ಉಚಿತ ಪ್ರವೇಶ ಇರುತ್ತದೆ. ಶಾಮಿಯಾನ ಹಾಕಿ, ಆಸನಗಳನ್ನು ಅಳವಡಿಸಲಾಗಿದೆ.
ಇಲ್ಲಿನ ಕ್ರೀಡಾಂಗಣದಲ್ಲಿ 2012ರಿಂದ 2024ರವರೆಗೆ ಒಟ್ಟು ಎಂಟು ರಣಜಿ ಪಂದ್ಯಗಳು ನಡೆದಿದ್ದು, ಇದು ಇಲ್ಲಿ ನಡೆಯುತ್ತಿರುವ ಒಂಬತ್ತನೇ ರಣಜಿ ಪಂದ್ಯವಾಗಿದೆ. 2024ರ ಜನವರಿ ನಡೆದಿದ್ದ ಪಂಜಾಬ್ ಎದುರಿನ ಪಂದ್ಯದಲ್ಲಿ ಕರ್ನಾಟಕ ತಂಡ ಏಳು ವಿಕೆಟ್‌ಗಳಿಂದ ಜಯಿಸಿತ್ತು. ಅದೇ ವರ್ಷ ಫೆಬ್ರುವರಿ ನಡೆದ ಚಂಡೀಗಡ ಎದುರಿನ ಪಂದ್ಯ ಡ್ರಾ ಆಗಿತ್ತು.
ಕರ್ನಾಟಕ ತಂಡ: ಮಯಂಕ್ ಅಗರವಾಲ್ (ನಾಯಕ), ನಿಕಿನ್ ಜೋಸ್, ಕರುಣ್ ನಾಯರ್, ಸ್ಮರಣ್ ರವಿಚಂದ್ರನ್, ಕೆ.ಎಲ್. ಶ್ರೀಜಿತ್, ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ವಿದ್ವತ್ ಕಾವೇರಪ್ಪ, ವಿದ್ಯಾಧರ ಪಾಟೀಲ, ಅಭಿಲಾಷ್ ಶೆಟ್ಟಿ, ಎಂ.ವೆಂಕಟೇಶ, ಕೃತಿಕ್ ಕೃಷ್ಣ, ಮೊಹ್ಸಿನ್ ಖಾನ್, ಶಿಖರ್ ಶೆಟ್ಟಿ, ಅನೀಶ್ ಕೆ.ವಿ.
ಚಂಡೀಗಡ ತಂಡ: ಮನನ್ ವೋಹ್ರಾ (ನಾಯಕ), ಅಮೃತ್ ಲುಬಾನಾ, ನಿಖಿಲ್ ಠಾಕೂರ್, ಶಿವಂ ಭಾಂಬ್ರಿ, ಅರ್ಜಿತ್ ಸಿಂಗ್, ಅರ್ಜುನ್ ಆಜಾದ್, ತರಣ್‌ಪ್ರೀತ್ ಸಿಂಗ್, ವಿಷ್ಣು ಕಷ್ಯಪ್, ಗೌರವ್ ಪುರಿ, ಅನಿರುದ್ಧ ಕನ್ವರ್, ಜಗಜಿತ್ ಸಿಂಗ್ ಸಂಧು, ಮೋಹಿತ್ ಸೋನಿ, ರಾಜನಗಡ ಬಾವಾ, ನಿಶುಂಕ್ ಬಿರ್ಲಾ, ಅಂಕಿತ್ ಕೌಶಿಕ್.
ಮೂರನೇ ದ್ವಾರದಿಂದ ಸಾರ್ವಜನಿಕರಿಗೆ ಪ್ರವೇಶ ಪಂದ್ಯ ವೀಕ್ಷಣೆಗೆ ಆಸನಗಳ ವ್ಯವಸ್ಥೆ ತಾರಾ ವರ್ಚಸ್ಸಿನ ಆಟಗಾರರ ನೋಡಲು ಅವಕಾಶ
ಪಂದ್ಯಕ್ಕೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ವೀಕ್ಷಣೆಗೆ ಸ್ಥಳೀಯ ಜನಪ್ರತಿನಿಧಿಗಳು ಅಧಿಕಾರಿಗಳು ಮತ್ತು ವಿವಿಧ ಕ್ಲಬ್‌ನವರಿಗೆ ಆಹ್ವಾನಿಸಲಾಗಿದೆ.ನಿಖಿಲ್ ಬೂಸದ್ ಹಂಗಾಮಿ ನಿಮಂತ್ರಕ ಕೆಎಸ್‌ಸಿಎ ಧಾರವಾಡ ವಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.