ADVERTISEMENT

ಹುಬ್ಬಳ್ಳಿ|ಸತ್ತವರ ಹೆಸರಲ್ಲೂ ಪಡಿತರ ಚೀಟಿ!: 12.68 ಲಕ್ಷ ಸಂಶಯಾಸ್ಪದ ಚೀಟಿ ಪತ್ತೆ

ನಾಗರಾಜ್ ಬಿ.ಎನ್‌.
Published 6 ಸೆಪ್ಟೆಂಬರ್ 2025, 4:56 IST
Last Updated 6 ಸೆಪ್ಟೆಂಬರ್ 2025, 4:56 IST
ಪಡಿತರ ಚೀಟಿ
(ಸಾಂದರ್ಭಿಕ ಚಿತ್ರ)
ಪಡಿತರ ಚೀಟಿ (ಸಾಂದರ್ಭಿಕ ಚಿತ್ರ)   

ಹುಬ್ಬಳ್ಳಿ: ರಾಜ್ಯದಲ್ಲಿ ಪಡಿತರ ಚೀಟಿ ಪಡೆಯಲು ಅರ್ಹರಲ್ಲದ 12.68 ಲಕ್ಷ ಕುಟುಂಬಗಳು ಎಪಿಎಲ್‌, ಬಿಪಿಎಲ್‌ ಮತ್ತು ಅಂತ್ಯೋದಯ ಕಾರ್ಡ್‌ಗಳನ್ನು ಪಡೆದಿವೆ. ಸತ್ತವರ ಹೆಸರಲ್ಲೂ ಪಡಿತರ ಚೀಟಿ ನೀಡಲಾಗಿದೆ. ಆಹಾರ ಇಲಾಖೆಯ ಇತ್ತೀಚಿನ ಸಮೀಕ್ಷೆಯಲ್ಲಿ ಇವು ಬೆಳಕಿಗೆ ಬಂದಿವೆ.

ಸರ್ಕಾರಿ ಉದ್ಯೋದಲ್ಲಿರುವ, ರಾಷ್ಟ್ರೀಯ–ಬಹುರಾಷ್ಟ್ರೀಯ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿರುವ, ಆದಾಯ ತೆರಿಗೆ ಪಾವತಿಸುವ ಹೀಗೆ ಮಾನದಂಡಗಳನ್ನು ಮೀರಿದ ಶ್ರೀಮಂತ ಕುಟುಂಬದವರು ಪಡಿತರ ಚೀಟಿ ಪಡೆದಿದ್ದಾರೆ. ಸಾರ್ವಜನಿಕರ ದೂರಿನ ಮೇರೆಗೆ ಸಮೀಕ್ಷೆ ನಡೆಸಿದ ಇಲಾಖೆ, 12 ವಿಭಾಗಗಳಲ್ಲಿ ಅನರ್ಹ ಪಡಿತರ ಚೀಟಿದಾರರ ಕುಟುಂಬಗಳನ್ನು ಗುರುತಿಸಿದೆ. ಇದರ ಅಂಕಿ–ಅಂಶಗಳ ಮಾಹಿತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ತಮಿಳುನಾಡು, ಆಂಧ್ರಪ್ರದೇಶ, ಓಡಿಶಾ‌, ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿ ಕೆಲ ರಾಜ್ಯಗಳ 57,864 ಕುಟುಂಬಗಳಿಗೆ ಪಡಿತರ ಚೀಟಿ ವಿತರಿಸಲಾಗಿದೆ. ಅವರಲ್ಲಿ 73,859 ಫಲಾನುಭವಿಗಳು ಪ್ರತಿ ತಿಂಗಳು ಅಕ್ಕಿ, ಗೋಧಿ, ಬೇಳೆ–ಕಾಳು ನ್ಯಾಯಬೆಲೆ ಅಂಗಡಿಗಳಲ್ಲಿ ಪಡೆಯುತ್ತಾರೆ. 1,446 ಪಡಿತರ ಚೀಟಿಗಳು ಮೃತರ ಹೆಸರಲ್ಲಿದ್ದು, ಅವರ ಪರ ಸಂಬಂಧವಿಲ್ಲದ 1,452 ಮಂದಿ ಪಡಿತರ ದಿನಸಿಗಳನ್ನು ಪ್ರತಿ ತಿಂಗಳು ಪಡೆಯುತ್ತಾರೆ.

ADVERTISEMENT

ವಾರ್ಷಿಕ ₹25 ಲಕ್ಷ  ವಹಿವಾಟು ಮೀರಿ ವ್ಯವಹಾರ ನಡೆಸುವ 2,684 ಕುಟುಂಬಗಳು ಮತ್ತು ₹1.20 ಲಕ್ಷ ಆದಾಯ ಮೀರಿದ 5,13,613 ಕುಟುಂಬಗಳು ಪಡಿತರ ಚೀಟಿ ಹೊಂದಿವೆ. ಪಿಎಂ ಕಿಸಾನ್‌ ಯೋನೆಯಡಿ ನೋಂದಾಯಿತ 7.5 ಎಕರೆ ಕೃಷಿ ಜಮೀನು ಹೊಂದಿದ 33,456 ಕುಟುಂಬಗಳು ಮತ್ತು 18 ವರ್ಷಕ್ಕಿಂತ ಕೆಳಗಿರುವ ಏಕ ಸದಸ್ಯರು ಇರುವ 731 ಕುಟುಂಬಗಳು ಪಡಿತರ ಚೀಟಿ ಬಳಸುತ್ತಿವೆ. ಸ್ವಂತ ಬಳಕೆಗೆ ವಾಹನವುಳ್ಳ 119 ಕುಟುಂಬಗಳು ಎಪಿಎಲ್‌ ಮತ್ತು ಬಿಪಿಎಲ್‌ ಚೀಟಿಗಳನ್ನು ಪಡೆದು, ಪಡಿತರ ಸೌಲಭ್ಯಗಳನ್ನು ಪಡೆಯುತ್ತಿವೆ. 

ರಾಷ್ಟ್ರೀಯ, ಅಂತರಾಷ್ಟ್ರೀಯ ಕಂಪನಿಗಳಲ್ಲಿ ನಿರ್ದೇಶಕರು, ಆಡಳಿತ ಮಂಡಳಿ ಪದಾಧಿಕಾರಿಗಳಾಗಿ ವಾರ್ಷಿಕ ಕೋಟಿ ಸಂಬಳ ಪಡೆಯುತ್ತಿರುವ 19,690 ಕುಟುಂಬದ ಸದಸ್ಯರು ಸಹ ಪಡಿತರ ಚೀಟಿ ಪಡೆದಿದ್ದಾರೆ. ಪಡಿತರ ಚೀಟಿ ಪಡೆದ 6.16 ಲಕ್ಷ ಕುಟುಂಬದವರು ಇನ್ನೂ ಕೆವೈಸಿ ಮಾಡಿಸಿಲ್ಲ. 19,893 ಕುಟುಂಬಗಳು 6 ತಿಂಗಳಿನಿಂದ ನ್ಯಾಯಬೆಲೆ ಅಂಗಡಿಗಳಿಂದ ಪಡಿತರ ಪಡೆದಿಲ್ಲ. ಮೃತರ ಹೆಸರಲ್ಲೂ 1,446 ಪಡಿತರ ಚೀಟಿಗಳಿವೆ.

‘ಬಿಪಿಎಲ್‌ ಪಡಿತರ ಚೀಟಿ ಹಂಚಿಕೆ’
‘ರಾಜ್ಯದಲ್ಲಿ ಒಟ್ಟು 1.53 ಕೋಟಿಗೂ ಹೆಚ್ಚು ಪಡಿತರ ಚೀಟಿಗಳಿದ್ದು, 5.41 ಕೋಟಿಗೂ ಹೆಚ್ಚು ಫಲಾನುಭವಿಗಳಿದ್ದಾರೆ. ಕಳೆದ ವರ್ಷ ನಡೆಸಿದ ಸಮೀಕ್ಷೆಯಲ್ಲಿ ಆದಾಯ ತೆರಿಗೆ ಪಾವತಿಸುವ, ಸರ್ಕಾರಿ ನೌಕರರು, ಪಡಿತರ ಪಡೆಯದೇ ಇರುವವರು ಎಂದು 3.62 ಲಕ್ಷ ಚೀಟಿಗಳನ್ನು ಪತ್ತೆ ಮಾಡಿ, ರದ್ದುಪಡಿಸಲು ಕ್ರಮ ಕೈಗೊಳ್ಳಲಾಗಿತ್ತು. ಸರ್ಕಾರದ ನಿರ್ದೇಶನದನ್ವಯ ಆದಾಯ ತೆರಿಗೆ ಪಾವತಿಸುವ ಹಾಗೂ ಸರ್ಕಾರಿ ನೌಕರರನ್ನು ಹೊರತುಪಡಿಸಿ ಉಳಿದ ಪಡಿತರ ಚೀಟಿಗಳನ್ನು ಬಿಪಿಎಲ್‌ ಪಡಿತರ ಚೀಟಿಗಳನ್ನಾಗಿ ಮರುಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಆಹಾರ, ನಾರಿಕ ಸರಬರಾಜು ಸಚಿವ ಕೆ.ಎಚ್‌. ಮುನಿಯಪ್ಪ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.