ಪ್ರಮೋದ ಮುತಾಲಿಕ್
ಧಾರವಾಡ: ‘ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿದ ಆದೇಶವನ್ನು ಪುನರ್ ಪರಿಶೀಲಿಸಬೇಕು’ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಘಟಕದ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಗ್ರಹಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಹಿಂದುತ್ವದ ಪಕ್ಷ. ಯತ್ನಾಳ ಅವರು ಹಿಂದುತ್ವದ ಪರ ಮಾತನಾಡುವ ಗಟ್ಟಿ ಧ್ವನಿಯಾಗಿದ್ದಾರೆ. ಅವರ ಉಚ್ಚಾಟನೆ ಹಿಂದೂ ಕಾರ್ಯಕರ್ತರಿಗೆ ನೋವು ತರಿಸಿದೆ. ಬಿಜೆಪಿ ವರಿಷ್ಠರು, ಯತ್ನಾಳ ಅವರನ್ನು ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳಬೇಕು’ ಎಂದು ಒತ್ತಾಯಿಸಿದರು.
‘ಹೊಸ ಪಕ್ಷ ಕಟ್ಟುವುದು ಯತ್ನಾಳ ಅವರ ವೈಯಕ್ತಿಕ ವಿಚಾರ. ಈ ವಿಚಾರವಾಗಿ ಅವರು ನನ್ನೊಂದಿಗೆ ಮಾತನಾಡಿಲ್ಲ. ನಿಜವಾದ ಹಿಂದುತ್ವ ದೃಷ್ಟಿ ಇದ್ದರೆ, ಅವರು ಆಹ್ವಾನಿಸಿದರೆ ಸಂಘಟನೆಯ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಗೋ ಹತ್ಯೆ ನಿಷೇಧ ಕಾನೂನು ಜಾರಿಯಾಗಿದ್ದರೂ ರಂಜಾನ್ ಸಮಯದಲ್ಲಿ ಗೋವುಗಳ ಅಕ್ರಮ ಸಾಗಣೆ, ವಧೆ ನಡೆಯುತ್ತಿದೆ. ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ. ಪ್ರತಿ ಚೆಕ್‍ಪೋಸ್ಟ್‌ನಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ವಾಹನಗಳ ಮೇಲೆ ನಿಗಾ ಇಡಲಿದ್ದಾರೆ. ಇದರಿಂದ ಏನಾದರೂ ಅವಡಗಳು ಸಂಭವಿಸಿದರೆ ಪೊಲೀಸರು ಹಾಗೂ ರಾಜ್ಯ ಸರ್ಕಾರವೇ ಹೊಣೆ’ ಎಂದು ಎಚ್ಚರಿಸಿದರು.
ಗಂಗಾಧರ ಕುಲಕರ್ಣಿ, ಅಮೃತೇಶ, ಬಸವರಾಜ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.