ADVERTISEMENT

ಧಾರವಾಡ: ಪ್ರಾದೇಶಿಕ ವಿಜ್ಞಾನ ಕೇಂದ್ರ, ಜ್ಞಾನ ವಿಕಸನ ತಾಣ

ವಿಜ್ಞಾನ, ಗಣಿತ, ಪರಂಪರೆ ಕಲಾಕೃತಿ ನೋಡು ಬಾ...

ಬಿ.ಜೆ.ಧನ್ಯಪ್ರಸಾದ್
Published 5 ಆಗಸ್ಟ್ 2023, 7:04 IST
Last Updated 5 ಆಗಸ್ಟ್ 2023, 7:04 IST
ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣ
ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣ    ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ

ಧಾರವಾಡ: ನಗರದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿನ ಪ್ರಾದೇಶಿಕ ವಿಜ್ಞಾನ ಕೇಂದ್ರವು ವಿಜ್ಞಾನ, ಗಣಿತ, ಪರಂಪರೆಯ ಜ್ಞಾನ ಭಂಡಾರ. ಕುತೂಹಲ, ಆಸಕ್ತಿ ಮೂಡಿಸುವ ವೈವಿಧ್ಯಮಯ ಮಾದರಿಗಳ ಆಕರ್ಷಣೆಯ ತಾಣ.

ವಿದ್ಯಾ ಕಾಶಿಯ 22 ಎಕರೆ ಪ್ರದೇಶದಲ್ಲಿ ತಾಣ ಇದೆ. 2012ರ ಫೆಬ್ರುವರಿಯಲ್ಲಿ ಆರಂಭವಾಗಿರುವ ಈ ಕೇಂದ್ರವು ಕಲಿಕೆಗೆ ಪ್ರೇರಣೆಯ ತಾಣವಾಗಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಈ ಕೇಂದ್ರವನ್ನು ನಿರ್ವಹಿಸುತ್ತಿದೆ. ಮಕ್ಕಳು, ವಿದ್ಯಾರ್ಥಿಗಳು, ಶಿಕ್ಷಕರು, ಪ್ರವಾಸಿಗರು ಸಹಿತ ಎಲ್ಲರನ್ನು ಆಕರ್ಷಿಸುವ ಜ್ಞಾನ ವಿಕಸನ ಸ್ಥಳ.

ADVERTISEMENT

ಆವರಣದ ಮುಖ್ಯದ್ವಾರದ ಇಕ್ಕೆಲಗಳಲ್ಲಿ ಬೀರಬಲ್‌ ಸಹಾನಿ, ಸಿ.ವಿ.ರಾಮನ್‌, ಎಸ್‌.ಎನ್‌.ಬೋಸ್‌, ವಿಕ್ರಮ್‌ ಸಾರಾಭಾಯ್‌, ಮೇಘನಾಧ್‌ ಸಹಾ, ಜೆ.ಸಿ.ಬೋಸ್‌, ಹೋಮಿ ಜಹಂಗೀರ್‌ ಬಾಬಾ, ಎಸ್‌.ರಾಮಾನುಜನ್‌ ಅವರ ಮೂರ್ತಿಗಳು ಇವೆ. ಯುದ್ಧ ವಾಹನ, ವಿಮಾನ ಇವೆ. ವಿವಿಧ ಬಗೆಯ ಸಸ್ಯ ಪ್ರಭೇದಗಳು ಇವೆ.

ನಿತ್ಯ ನೂರಾರು ಪ್ರವಾಸಿಗರು ಕೇಂದ್ರಕ್ಕೆ ಭೇಟಿ ನೀಡುತ್ತಾರೆ. ಶಾಲೆ, ಕಾಲೇಜಿನಲ್ಲಿ ಇತಿಹಾಸ, ವಿಜ್ಞಾನ, ತಂತ್ರಜ್ಞಾನ, ಗಣಿತದಲ್ಲಿ ಓದಿದ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳಲು ಕಲಾಕೃತಿಗಳು ಸಹಕಾರಿಯಾಗಿವೆ.

ಇತಿಹಾಸ ಪರಿಚಯ: ಕೇಂದ್ರದ ಒಳ ಆವರಣದಲ್ಲಿ ಕುತುಬ್‌ ಮಿನಾರ್‌, ಹಂಪಿಯ ಕಲ್ಲಿನ ರಥದ ಪ್ರತಿಕೃತಿ, ದೆಹಲಿ ಕಬ್ಭಿಣದ ಸ್ತಂಭ, ಕೋನಾರ್ಕ್‌ ದೇವಾಲಯ ಚಕ್ರದ ಮಾದರಿಗಳು, ಕಲೆ ವಾಸ್ತುಶಿಲ್ಪದ ಕಲಾಕೃತಿಗಳು ಇವೆ.

ಪೂರ್ವಜರ ಕೊಡುಗೆಗಳು, ಭಾರತೀಯ ನಾಗರಿಕತೆಯ ಐದು ಸಾವಿರ ವರ್ಷಗಳ ವೈಜ್ಞಾನಿಕ ಸಂಸ್ಕೃತಿಯ ಲಿಖಿತ ಇತಿಹಾಸ ಚಿತ್ರಣದ ಪ್ರದರ್ಶಿಕೆಗಳು ಇವೆ. ಆಗಿನ ಜನರು ಉಡುಪು, ಕಸುಬುಗಳ ಪರಿಚಯ ಇದೆ. ಹರಪ್ಪ ನಾಗರಿಕತೆಯ ಸಂಸ್ಕೃತಿ ತಂತ್ರಜ್ಞಾನ ಪ್ರದರ್ಶಿಸಲಾಗಿದೆ.

ಹಿಂದಿನ ವೈದ್ಯ ಪದ್ಧತಿ, ಗಿಡಮೂಲಿಕೆಗಳು, ಬಳಸುತ್ತಿದ್ದ ಪರಿಕರಗಳ ಕಲಾಕೃತಿಗಳು ಇವೆ. ಕಲಾಕೃತಿಗಳನ್ನು ಇಟ್ಟಿರುವ ಭಾಗದಲ್ಲಿನ ಗುಂಡಿ ಒತ್ತಿ ಕಲಾಕೃತಿಗೆ ಸಂಬಂಧಿಸಿದ ವಿವರಣೆ (ಕನ್ನಡ, ಇಂಗ್ಲಿಷ್‌, ಹಿಂದಿ ಭಾಷೆ) ಕೇಳಿಸಿಕೊಳ್ಳಬಹುದು. ತಂತ್ರಜ್ಞಾನ ಬೆಳೆದು ಬಂದ ಬಗೆ ತಿಳಿದುಕೊಳ್ಳಬಹುದು.

ಗಣಿತ ಗ್ಯಾಲರಿ: ಕೇಂದ್ರದಲ್ಲಿನ ಗಣಿತ ಗ್ಯಾಲರಿಯಲ್ಲಿ ರೇಖಾಗಣಿತ, ಅಂಕಗಣಿತ, ಟ್ರಿಗ್ನಾಮೆಟ್ರಿ ಮೊದಲಾದವುಗಳಿಗೆ ಸಂಬಂಧಿಸಿದ ಅಂಶಗಳು ಇವೆ. ಸಂಖ್ಯೆಗಳು, ದಶಮಾಂಶ ಪದ್ಧತಿ, ಕೋನಗಳು, ಆಕೃತಿಗಳು, ವೃತ್ತ, ಪೈಥಾಗರಸ್‌ ಪ್ರಮೇಯ ಸಹಿತ ವಿವಿಧ ವಿಷಯಗಳ ಕುರಿತ ಆಕೃತಿಗಳು ಇವೆ. ಗಣಿತದ ಮಹತ್ವ ಮತ್ತು ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಬಹುದು.

ಈ ಕೇಂದ್ರದಲ್ಲಿ ಮೋಜಿನ ವಿಜ್ಞಾನ (ಫನ್‌ ಸೈನ್ಸ್‌) ಪ್ರದರ್ಶನಾಲಯ ಇದೆ. ಆಸಕ್ತಿ ಕೆರಳಿಸುವ ಪ್ರದರ್ಶಿಕೆಗಳು ಇಲ್ಲಿ ಇವೆ. ತ್ರಿ ಡಿ ಥಿಯೇಟ್‌ ಇಲ್ಲಿದೆ. ಬಿಂಬಗಳನ್ನು ಮೂರು ಆಯಾಮಗಳಲ್ಲಿ ಇಲ್ಲಿ ವೀಕ್ಷಿಸಬಹುದು. ತಾರಮಂಡಲ ಇದೆ. ಇಲ್ಲಿ ಕುಳಿತು ಖಗೋಳ ಪರಿಚಯ ಮಾಡಿಕೊಳ್ಳಬಹುದು. ಕಂಪ್ಯೂಟರ್‌ ಕೊಠಡಿಯೂ ಇದೆ. ಕಂಪ್ಯೂಟರ್ ಬಳಕೆ ಕುರಿತು ಇಲ್ಲಿ ತರಬೇತಿ ನೀಡಲಾಗುತ್ತದೆ.

ವಿಜ್ಞಾನ ಪ್ರಯೋಗಗಳ (ಬೆಳಕು, ಲೋಲಕ, ಗುರುತ್ವಾಕರ್ಷಣೆ...) ಪ್ರಾತ್ಯಕ್ಷಿಕೆ ಕೊಠಡಿ ಇದೆ. ಮಕ್ಕಳ ಚಟುವಟಿಕೆ ತಾಣದಲ್ಲಿ ಸರಳ ಪ್ರಯೋಗಗಳನ್ನು ಮಾಡಬಹುದು. ಮಕ್ಕಳು ವಿವಿಧ ಮಾದರಿಗಳನ್ನು ತಯಾರಿಸುತ್ತಾರೆ.

ಆವರಣದಲ್ಲಿ ವಿಜ್ಞಾನ ಉದ್ಯಾನ ಇದೆ. ಇಲ್ಲಿನ ಗೋಳಾಕಾರದ ಪಂಜರಮಾದರಿಗಳಲ್ಲಿ ದೃಷ್ಟಿ ಇಟ್ಟು ವೀಕ್ಷಿಸಿದರೆ ವಿಜ್ಞಾನಿಗಳ (ಸಿ.ವಿ.ರಾಮನ್‌...) ಆಕೃತಿಗಳು ಗೋಚರಿಸುತ್ತವೆ. ಇಲ್ಲಿ ಸನ್ನೆ, ರಾಟೆ, ಉಯ್ಯಾಲೆ ಮೊದಲಾದವುಗಳ ಕಾರ್ಯನಿರ್ವಹಣೆ ವಿಧಾನಗಳು ಇವೆ. ಡೈನೋಸಾರ್‌ ಕಲಾಕೃತಿಗಳು ಇವೆ. ಉದ್ಯಾನದಲ್ಲಿ ವಿವಿಧ ಪ್ರಭೇದದ ಗಿಡ, ಮರಗಳು ಇವೆ.

ಧಾರವಾಡದ ಪ್ರಮುಖ ಪ್ರೇಕ್ಷಣೀಯ ತಾಣಗಳಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರವೂ ಒಂದು. ಕೇಂದ್ರದೊಳಗೆ ಸುತ್ತಾಡಿದರೆ ತಂತ್ರಜ್ಞಾನದ ಉಗಮ, ಅನ್ವೇಷಣೆ ಹಾದಿಯ ಪರಿಚಯವಾಗುತ್ತದೆ.

ಬಹಳಷ್ಟು ಕೌತುಕಗಳನ್ನು ತಿಳಿದುಕೊಳ್ಳಬಹುದು. ಭೂಮಿ ಸುತ್ತುವುದನ್ನು ಇಳಿಬಿಟ್ಟ ಲೋಲಕದ ತಿರುಗುವಿಕೆಯಿಂದ ತಿಳಿಸುವುದು ಮೊದಲಾದ ಪ್ರದರ್ಶಿಕೆಗಳು ಇವೆ.

ಕೇಂದ್ರದ ಅವರಣದಲ್ಲಿ ಮತ್ಸ್ಯಾಲಯ, ಸೌರಶಕ್ತಿ ಗ್ಯಾಲರಿ ಸ್ಥಾಪನೆಗೆ ಪ್ರಯತ್ನಗಳು ನಡೆದಿವೆ. ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

‘ಕೇಂದ್ರಕ್ಕೆ ಪ್ರವಾಸಿಗರನ್ನು ಹೆಚ್ಚು ಸೆಳೆಯುವ ನಿಟ್ಟಿನಲ್ಲಿ ಒತ್ತು ನೀಡಬೇಕು. ಕೇಂದ್ರದಲ್ಲಿನ ಉದ್ಯಾನದ ವ್ಯವಸ್ಥಿತ ನಿರ್ವಹಣೆಗೆ ಗಮನ ಹರಿಸಿ, ಇನ್ನಷ್ಟು ಆಕರ್ಷಕವಾಗಿಸಬೇಕು. ಕೇಂದ್ರಕ್ಕೆ ಒದಗಿಸುವ ಅನುದಾನ ಕಡಿಮೆ ಮಾಡಬಾರದು. ಕೇಂದ್ರದಲ್ಲಿ ಕಲಿಕೆ ಆಧಾರಿತ ಚಟುವಟಿಕೆಗಳನ್ನು ಹೆಚ್ಚಿಸಬೇಕು’ ಎಂದು ಕೇಂದ್ರದ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರ ಆವರಣದಲ್ಲಿ ಪ್ರವಾಸಿಗರು ವಿಜ್ಞಾನಿಗಳ ಮೂರ್ತಿಗಳನ್ನು ವೀಕ್ಷಿಸುತ್ತಿರುವುದು ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರ ಪ್ರವಾಸಿಗರು ಕಲಾಕೃತಿಗಳನ್ನು ವೀಕ್ಷಿಸುತ್ತಿರುವುದು ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರ ಆವರಣದಲ್ಲಿ ಪ್ರದರ್ಶಿಸಿರುವ ಯುದ್ಧ ವಾಹನ ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರ ಆವರಣದಲ್ಲಿನ ಡೈನೊಸಾರ್‌ ಕಲಾಕೃತಿ ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಪ್ರವಾಸಿಗರು ಕಲಾಕೃತಿಗಳನ್ನು ವೀಕ್ಷಿಸುತ್ತಿರುವುದು ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿರುವ ಕಲ್ಲಿನ ರಥದ ಪ್ರತಿಕೃತಿ ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿನ ವಿಜ್ಞಾನ ಮಾದರಿ ಕುರಿತು ಸಿಬ್ಬಂದಿ ವಿವರಣೆ ನೀಡುತ್ತಿರುವುದು ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
‘ವಿಜ್ಞಾನಿಗಳು ಗಣಿತಜ್ಞರ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ತಯಾರಿ’
‘ರಾಜ್ಯದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರಗಳು ಧಾರವಾಡ ಮತ್ತು ಮಂಗಳೂರಿನಲ್ಲಿ ಮಾತ್ರ ಇವೆ. ಕಲಾಕೃತಿ ಪ್ರದರ್ಶನ ಮಾತ್ರವಲ್ಲ ಶಿಕ್ಷಕರಿಗೆ ತರಬೇತಿ ವಿದ್ಯಾರ್ಥಿಗಳಿಗೆ ಪ್ರಯೋಗ ಚಟುವಟಿಕೆಗಳು ಮೊದಲಾದವನ್ನು ಇಲ್ಲಿ ನಡೆಸಲಾಗುತ್ತದ’ ಎಂದು ಕೇಂದ್ರ ನಿರ್ದೇಶಕ ವಿ.ಡಿ.ಬೋಳಿಶೆಟ್ಟಿ ತಿಳಿಸಿದರು. ‘ವಿಜ್ಞಾನಕ್ಕೆ ಸಂಬಂಧಿಸಿದ ಉಪಕರಣಗಳ ಕಿಟ್‌ ಸಿದ್ಧಪಡಿಸಿ ಶಾಲೆಗಳಿಗೆ ಒದಗಿಸಲಾಗುತ್ತಿದೆ. ವಿಜ್ಞಾನಿಗಳು ಗಣಿತಜ್ಞರ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ತಯಾರಿ ನಡೆದಿದೆ. ಎನ್‌ಪಿಸಿಎಲ್‌ನ ಗ್ಯಾಲರಿ ನಿರ್ಮಾಣ ಪ್ರಗತಿಯಲ್ಲಿದೆ. ಇದೊಂದು ಜ್ಞಾನ ವಿಕಸನಕ್ಕೆ ಪೂರಕವಾದ ಪ್ರವಾಸಿ ತಾಣ. ನಿತ್ಯ ಸುಮಾರು 200 ಮಂದಿ ಭೇಟಿ ನೀಡುತ್ತಾರೆ ವಾರಾಂತ್ಯದಲ್ಲಿ ಹೆಚ್ಚು ಜನ ಬರುತ್ತಾರೆ’ ಎಂದು ತಿಳಿಸಿದರು.
ಈ ಕೇಂದ್ರದಲ್ಲಿ ಸ್ಪರ್ಧಾ ಪರೀಕ್ಷೆಗೆ ತಯಾರಿ ನಡೆಸುವವರು ತಿಳಿದುಕೊಳ್ಳುವ ಬಹಳಷ್ಟು ವಿಷಯಗಳು ಇವೆ. ಕಲಾಕೃತಿಗಳ ದರ್ಶನದಿಂದ ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಸಹಕಾರಿ.
-ಪ್ರಭು ಅಂಬಲಿ ಪ್ರವಾಸಿಗ, ಸ್ಪರ್ಧಾರ್ಥಿ
ಕೇಂದ್ರ ವೀಕ್ಷಣೆಯಿಂದ ಬಹಳಷ್ಟು ವಿಷಯಗಳು ತಿಳಿಯುತ್ತವೆ. ನಮ್ಮ ಪೂರ್ವಜರು ನಾಗರಿಕತೆಗಳ ವೃತ್ತಾಂತಗಳ ಪರಿಚಯವಾಗುತ್ತದೆ. ಶಿಕ್ಷಕರಿಗೆ ಬೋಧನೆಗೆ ಅನುಕೂಲವಾಗುವ ಬಹಳಷ್ಟು ಅಂಶಗಳು ಇಲ್ಲಿವೆ.
-ರೇಷ್ಮಾ ಅಯ್ಯಣ್ಣವರ ವಿಜ್ಞಾನ ಶಿಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.