
ಹುಬ್ಬಳ್ಳಿ: ಇಲ್ಲಿನ ವಿಮಾನ ನಿಲ್ದಾಣ ವಿಸ್ತರಣೆಗಾಗಿ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ನೀಡಿದ ಜಾಗಕ್ಕೆ ಪರ್ಯಾಯವಾಗಿ ನಿವೇಶನ ನೀಡಕೆಂದು ಆಗ್ರಹಿಸಿ ಹುಬ್ಬಳ್ಳಿ ವಿಮಾನ ನಿಲ್ದಾಣ ಸಂತ್ರಸ್ತರ ಒಕ್ಕೂಟದ ಸದಸ್ಯರು ನವನಗರದಲ್ಲಿರುವ ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ನೂರಾರು ಸಂಖ್ಯೆಯಲ್ಲಿ ಹುಡಾ ಎದುರು ಸೇರಿದ ಪ್ರತಿಭಟನಕಾರರು, ಹಾಡು ಹಾಡಿ, ಭಜನೆ ಮಾಡಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಒಕ್ಕೂಟದ ಅಧ್ಯಕ್ಷ ರಘೋತ್ತಮ ಕುಲಕರ್ಣಿ ಮಾತನಾಡಿ, ‘ವಿಮಾನ ನಿಲ್ದಾಣ ವಿಸ್ತರಣೆಗಾಗಿ ಜಾಗ ನೀಡಿದರೆ ಪರ್ಯಾಯವಾಗಿ ನಿವೇಶನ ಕಲ್ಪಿಸುವುದಾಗಿ ಸರ್ಕಾರ ಭರವಸೆ ನೀಡಿದ್ದರಿಂದ 2007ರಲ್ಲಿ 529 ಕುಟುಂಬಗಳು ಒಟ್ಟು 710 ಎಕರೆ ಜಾಗ ನೀಡಿದ್ದವು. ನಂತರ ಹುಡಾ ವತಿಯಿಂದ 2008ರಲ್ಲಿ 83 ಜನರಿಗೆ, 2016ರಲ್ಲಿ 70 ಜನರಿಗೆ ನಿವೇಶನ ನೀಡಿದ್ದು, ಉಳಿದವರಿಗೆ ಈವರೆಗೂ ನೀಡಿಲ್ಲ’ ಎಂದು ದೂರಿದರು.
‘ಜಾಗ ನೀಡಿದವರ ಪೈಕಿ 83 ಜನರಿಗೆ ಪ್ರತಿ ಚದರ ಅಡಿಗೆ ಕರ್ನಾಟಕ ರಾಜ್ಯ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ವತಿಯಿಂದ ₹600 ಪರಿಹಾರ ನೀಡಲಾಗಿದೆ. ನಂತರ ಇವರಿಂದ ಚದರ ಅಡಿಗೆ ₹224 ಪಾವತಿಸಿಕೊಂಡು ಹುಡಾ ವತಿಯಿಂದ ಬೈರಿದೇವರಕೊಪ್ಪದಲ್ಲಿ ನಿವೇಶನ ನೀಡಲಾಗಿದೆ. ಆದರೆ, ಅದೇ ಸರ್ವೇ ನಂಬರ್‌ನಲ್ಲಿದ್ದ ಉಳಿದ ನಿವೇಶನದಾರರಿಗೆ ಪ್ರತಿ ಚದರ ಅಡಿಗೆ ₹450 ಪರಿಹಾರ ನೀಡಿ, ಪರ್ಯಾಯ ನಿವೇಶನ ಪಡೆಯಲು ₹485 ನಿಗದಿಪಡಿಸಿ ಸರ್ಕಾರ ತಾರತಮ್ಯ ಮಾಡಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸರ್ಕಾರಕ್ಕೆ ಹಾಗೂ ಹೈಕೋರ್ಟ್‌ಗೆ ತಪ್ಪು ಮಾಹಿತಿ ನೀಡಿರುವುದರಿಂದ ಉಳಿದವರಿಗೆ ನಿವೇಶನ ದೊರೆತಿಲ್ಲ. 20 ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಸಿದರೂ ಜನಪ್ರತಿನಿಧಿಗಳು ನಮ್ಮ ಗೋಳು ಕೇಳುತ್ತಿಲ್ಲ. ಕೂಡಲೇ ನಮಗೆ ಪುನರ್ವಸತಿ, ನಿವೇಶನ ಸೌಲಭ್ಯ ಕಲ್ಪಿಸಬೇಕು. ಇಲ್ಲವಾದರೆ ವಿಮಾನ ನಿಲ್ದಾಣಕ್ಕೆ ಈ ಹಿಂದೆ ನೀಡಿರುವ ನಮ್ಮ ಜಾಗಗಳನ್ನು ಮರಳಿಸಬೇಕು’ ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಹುಡಾ ಅಧ್ಯಕ್ಷ ಶಾಕೀರ ಸನದಿ, ‘ಈ ಬಗ್ಗೆ ಜ.24ರಂದು ಸಭೆ ಆಯೋಜಿಸಿ ಚರ್ಚಿಸಲಾಗುವುದು. ಕಾನೂನುಬದ್ಧವಾಗಿ ನಿವೇಶನ ಒದಗಿಸಲಾಗುವುದು’ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಎಸ್.ಎ.ಜಹಗೀರದಾರ, ಐ.ಬಿ. ಚಡಿಹಾಳ, ಎಂ.ಬಿ. ರಾಯ್ಕರ, ಜಿ.ಶಿರೂರ, ಆರ್.ಎಂ. ಅಣ್ವೇಕರ್, ಗುರುನಾಥ ಎಲಿವಾಳ, ಬಸವರಾಜ ಖಾನಾಪುರ, ರಾಮು ಹಬೀಬ, ಹೀರಾ ಸೋಳಂಕಿ, ವಿನಾಯಕ ಸೋಳಂಕಿ, ರಾಘವೇದ್ರ ಹಬೀಬ, ಲಕ್ಣ್ಮಣ ಖಾನಾಪುರ, ದೀಪಾ ಸೋಳಂಕಿ, ಪಾರ್ವತಿ ಸೋಳಂಕಿ, ಗೀತಾ ಸೋಳಂಕಿ, ಮಹಾದೇವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.