ADVERTISEMENT

ನವಲಗುಂದ: ಬಿಸಿಯೂಟ ಸೇವನೆಗೆ ಮಕ್ಕಳ ಹಿಂದೇಟು

145 ಶಾಲೆಗಳ 23,600 ವಿದ್ಯಾರ್ಥಿಗಳಲ್ಲಿ 4000 ಮಕ್ಕಳಿಂದ ಊಟ ಸೇವನೆ

​ಪ್ರಜಾವಾಣಿ ವಾರ್ತೆ
Published 15 ಮೇ 2024, 7:29 IST
Last Updated 15 ಮೇ 2024, 7:29 IST
ನವಲಗುಂದ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 1 ರಲ್ಲಿ ಬಿಸಿಯೂಟ ಸೇವಿಸುತ್ತಿರುವ ಮಕ್ಕಳು
ನವಲಗುಂದ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 1 ರಲ್ಲಿ ಬಿಸಿಯೂಟ ಸೇವಿಸುತ್ತಿರುವ ಮಕ್ಕಳು   

ನವಲಗುಂದ: ತಾಲ್ಲೂಕಿನ ಸರ್ಕಾರಿ ಹಾಗೂ ಅನುದಾನಿತ ಖಾಸಗಿ ಶಾಲೆಗಳಿಗೆ ಬೇಸಿಗೆ ರಜೆ ಇರುವುದರಿಂದ ಶಾಲಾ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟ ಮಾಡಲು ಬರಲು ಹಿಂದೇಟು ಹಾಕುತ್ತಿದ್ದು ಇದರಿಂದ ಆಹಾರವು ವ್ಯರ್ಥವಾಗುತ್ತಿದೆ.

40 ಡಿಗ್ರಿಯಷ್ಟು ಬಿಸಿಲಿನ ತಾಪಮಾನವಿರುವುದರಿಂದ ಮಧ್ಯಾಹ್ನ ಬಿಸಿಯೂಟ ಮಾಡಲು ವಿದ್ಯಾರ್ಥಿಗಳು ಆಗಮಿಸುತ್ತಿಲ್ಲ.ಇನ್ನು ಕೆಲವು ಮಕ್ಕಳು ಬೇಸಿಗೆ ಶಿಬಿರ, ಪ್ರವಾಸ, ಜತೆ ಇತರೆ ಚಟುವಟಿಕೆ ಕಾರ್ಯಗಳಲ್ಲಿ ಭಾಗಿಯಾಗಿದ್ದಾರೆ.

ರಾಜ್ಯ ಸರ್ಕಾರವು ತೀವ್ರ ಬರ ಪ್ರದೇಶದ ಸರ್ಕಾರಿ ಶಾಲೆಯ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ನೀಡಬೇಕೆಂದು ಆದೇಶ ಮಾಡಿದೆ. ಈ ಹಿನ್ನೆಲೆ ತಾಲ್ಲೂಕಿನ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿಯ ಪೋಷಕರ ಅಭಿಪ್ರಾಯವನ್ನು ಸಂಗ್ರಹಿಸಿ ಸಹಿ ಪಡೆದುಕೊಂಡು ಬಿಸಿಯೂಟಕ್ಕೆ ಒಪ್ಪಿಗೆ ಪಡೆದು ತಾಲ್ಲೂಕಿನ 145 ಶಾಲೆಗಳ 23,600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಏ.10 ರಿಂದ ಸರ್ಕಾರಿ ರಜೆ ದಿನ ಹೊರತುಪಡಿಸಿ ಉಳಿದ ದಿನಗಳಲ್ಲಿ ಮಧ್ಯಾಹ್ನ ಬಿಸಿಯೂಟವನ್ನು ಶಾಲೆಯಲ್ಲಿ ವಿತರಿಸಲಾಗುತ್ತಿದೆ.

ADVERTISEMENT

ಅಂದಾಜು ಪ್ರತಿನಿತ್ಯ ಒಟ್ಟು 4000 ರಿಂದ 5000 ಮಕ್ಕಳು ಮಾತ್ರ ಊಟ ಮಾಡುತ್ತಿದ್ದಾರೆ. ಉಳಿದ ಊಟವು ಮಕ್ಕಳು ಆಗಮಿಸದ ಕಾರಣ ವ್ಯರ್ಥವಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಕ್ಷರ ದಾಸೋಹ ಇಲಾಖೆ, ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿ, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ಇದ್ದರೂ ಕೂಡಾ ಅವರು ಇದರ ಬಗ್ಗೆ ಮೌನ ವಹಿಸಿರುವುದರಿಂದ ಸರ್ಕಾರದ ಯೋಜನೆಯು ವ್ಯರ್ಥವಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಜಿಲ್ಲಾಧಿಕಾರಿ, ಶಿಕ್ಷಣ ಇಲಾಖೆ ಮೇಲಾಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮವಹಿಸಬೇಕಾಗಿದೆ ಎಂಬುದು ಸಾರ್ವಜನಿಕರ ಅಗ್ರಹವಾಗಿದೆ.

ಆಹಾರ ಸಾಮಗ್ರಿ ನೀಡಲಿ:

ಸರ್ಕಾರವು ಬೇಸಿಗೆ ರಜೆಯಲ್ಲಿ ಮಧ್ಯಾಹ್ನ ಬಿಸಿಯೂಟ ನೀಡುವುದರಿಂದ ಮಕ್ಕಳಿಗೆ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ಅದನ್ನು ನಿಲ್ಲಿಸಿ ಆಹಾರ ಸಾಮಾಗ್ರಿಗಳನ್ನು ನೀಡಿದರೆ ಬಡ ವರ್ಗದ ಕುಟುಂಬಕ್ಕೆ ಹಾಗೂ ಮಕ್ಕಳಿಗೆ ಹೆಚ್ಚು ಉಪಯುಕ್ತವಾಗುತ್ತದೆ. ಇದರಿಂದ ಅರ್ಹ ಫಲಾನುಭವಿಗಳು ನೇರವಾಗಿ ಯೋಜನೆಯ ಪ್ರಯೋಜನ ಪಡೆಯುತ್ತಾರೆ. ಈ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಕ್ರಮವಹಿಸಲಿ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ  ಎಸ್.ಬಿ.ದಾನಪ್ಪಗೌಡ್ರ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.