ADVERTISEMENT

ಬಿಜೆಪಿ ವೈಫಲ್ಯ ತಿಳಿಸಿ; ಪಕ್ಷದ ಸದಸ್ಯತ್ವ ಮಾಡಿಸಿ- ಡಿ.ಕೆ ಶಿವಕುಮಾರ್‌

ಕಾಂಗ್ರೆಸ್ ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2022, 5:25 IST
Last Updated 14 ಫೆಬ್ರುವರಿ 2022, 5:25 IST
ಹುಬ್ಬಳ್ಳಿಯ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಭಾನುವಾರ ರಾತ್ರಿ ಡಿಜಿಟಲ್ ಸದಸ್ಯತ್ವ ಅಭಿಯಾನ ಪ್ರಗತಿ ಪರಿಶೀಲನೆ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಕಾಂಗ್ರೆಸ್‌ ಸದಸ್ಯತ್ವದ ಡಿಜಿಟಲ್‌ ಕಾರ್ಡ್‌ ಪ್ರದರ್ಶಿಸಿದರು  
ಹುಬ್ಬಳ್ಳಿಯ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಭಾನುವಾರ ರಾತ್ರಿ ಡಿಜಿಟಲ್ ಸದಸ್ಯತ್ವ ಅಭಿಯಾನ ಪ್ರಗತಿ ಪರಿಶೀಲನೆ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಕಾಂಗ್ರೆಸ್‌ ಸದಸ್ಯತ್ವದ ಡಿಜಿಟಲ್‌ ಕಾರ್ಡ್‌ ಪ್ರದರ್ಶಿಸಿದರು     

ಹುಬ್ಬಳ್ಳಿ: ‘ಬಿಜೆಪಿ ಸರ್ಕಾರದಿಂದ ಆಗಿರುವ ಬೆಲೆ ಏರಿಕೆ ಹಾಗೂ ಆಡಳಿತ ನ್ಯೂನತೆಗಳನ್ನು ಜನರ ಮುಂದಿಟ್ಟು ಕಾಂಗ್ರೆಸ್‌ ಸದಸ್ಯತ್ವ ಹೆಚ್ಚಿಸಿ, ದೇಶದಲ್ಲಿ ಬದಲಾವಣೆ ಆಗಬೇಕಿರುವುದನ್ನು ಜನರಿಗೆ ಮನವರಿಕೆ ಮಾಡಿಕೊಡಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.

ಹುಬ್ಬಳ್ಳಿಯ ಜಿಲ್ಲಾಕಾಂಗ್ರೆಸ್‌ ಕಚೇರಿಯಲ್ಲಿ ಭಾನುವಾರ ರಾತ್ರಿ ಡಿಜಿಟಲ್ ಸದಸ್ಯತ್ವ ಅಭಿಯಾನ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

‘ಈಚೆಗೆ ನಡೆದ ವಿಧಾನಪರಿಷತ್‌ ಚುನಾವಣೆಯಲ್ಲಿ ಹೆಚ್ಚು ಕಾಂಗ್ರೆಸ್‌ ಶಾಸಕರು ಇಲ್ಲದಿರುವ ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್‌ಗೆ ಹೆಚ್ಚು ಮತಗಳು ಬಂದಿವೆ. ಕೆಲವು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೇವೆ ಕೂಡ. ಪಕ್ಷದ ಸಂಘಟಿತ ಪ್ರಯತ್ನವೇ ಇದಕ್ಕೆ ಕಾರಣ. ಸಂಘಟನೆ ಸಮರ್ಥವಾಗಿದ್ದರೆ, ಗೆಲುವು ಸಾಧಿಸಲು ಸಾಧ್ಯವಿದೆ’ ಎಂದರು.

ADVERTISEMENT

‘ಸದಸ್ಯತ್ವ ಅಭಿಯಾನಕ್ಕೆ ಮುಖ್ಯನೋಂದಣಾಧಿಕಾರಿಗಳನ್ನು ನೇಮಿಸಲಾಗಿದೆ. ಅವರು ಸದಸ್ಯತ್ವ ಅಭಿಯಾನದ ಮೇಲೆ ನಿಗಾ ವಹಿಸಲಿದ್ದಾರೆ. ಪ್ರತಿ ಬೂತ್‌ನಲ್ಲೂ ಒಬ್ಬ ಪುರುಷ ಮತ್ತು ಮಹಿಳೆಯನ್ನು ಸದಸ್ಯರನ್ನಾಗಿ ಮಾಡಬೇಕು. ಸಮರ್ಪಕವಾಗಿ ಪಕ್ಷ ಸಂಘಟನೆ ಮಾಡಿದರೆ ನಾವು ಬಿಜೆಪಿಯನ್ನು ಸೋಲಿಸಬಹುದು. ಮನೆ– ಮನೆಗೆ ಹೋಗಿ ಸದಸ್ಯತ್ವ ಅಭಿಯಾನ ನಡೆಸಿ. ಯಾರು ಕಾಂಗ್ರೆಸ್‌ ಪರ ಒಲವು ಹೊಂದಿದ್ದಾರೆ, ಯುವಕರು ಹಾಗೂ ಹಿಂದುಳಿದವರನ್ನು ಗುರುತಿಸಬೇಕು. ಇದರಿಂದ ಮುಂದೆ ಚುನಾವಣೆ ಎದುರಿಸಲು ಸಹಾಯವಾಗಲಿದೆ’ ಎಂದು ಹೇಳಿದರು.

‘ಯಾರು ಹೆಚ್ಚು ಸದಸ್ಯರನ್ನು ನೋಂದಣಿ ಮಾಡುತ್ತಾರೋ ಅವರಿಗೆ ಪಕ್ಷದಲ್ಲಿ ಆದ್ಯತೆ ನೀಡಲಾಗುತ್ತದೆ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಟಿಕೆಟ್‌ನಿಂದ ಹಿಡಿದು ಶಾಸಕ ಸ್ಥಾನದವರೆಗೂ ಟಿಕೆಟ್ ನೀಡುವುದಕ್ಕೆ ಸದಸ್ಯತ್ವ ನೆರವಾಗಲಿದೆ’ ಎಂದು ಹೇಳಿದರು.

ಪಾಲಿಕೆ ಚುನಾವಣೆಯಲ್ಲಿ ಹಸ್ತಕ್ಷೇಪ: ಹುಬ್ಬಳ್ಳಿ– ಧಾರವಾಡ ಪಾಲಿಕೆ ಚುನಾವಣೆಯಲ್ಲಿ ಕೆಲವು ಪಕ್ಷದ ಮುಖಂಡರ ಹಸ್ತಕ್ಷೇಪದಿಂದ ಐದಾರು ಸ್ಥಾನಗಳನ್ನು ಕಳೆದುಕೊಳ್ಳುವಂತಾಯಿತು. ನಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕು. ಈ ರೀತಿಯ ತಪ್ಪುಗಳನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ನೋಂದಣಿ ಕುರಿತು ತಿಳಿಸುವ ವಿಡಿಯೊ ಬಿತ್ತರಿಸಲಾಯಿತು‌. ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್, ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್, ಕುಸುಮಾವತಿ ಶಿವಳ್ಳಿ, ಪ್ರಸಾದ ಅಬ್ಬಯ್ಯ, ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಅನೀಲಕುಮಾರ ಪಾಟೀಲ್, ನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ, ನಾಗರಾಜ ಛಬ್ಬಿ, ಸದಾನಂದ ಡಂಗನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.