ADVERTISEMENT

ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆ: ದಿನಾಂಕ ಮರುನಿಗದಿ ಮಾಡಲು ಹೊರಟ್ಟಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಮೇ 2021, 14:49 IST
Last Updated 25 ಮೇ 2021, 14:49 IST

ಹುಬ್ಬಳ್ಳಿ: ಗ್ರೂಪ್‌ ‘ಬಿ’ ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆಗಳಿಗೆ ಬಡ್ತಿ ನೀಡಲು ಬೆಂಗಳೂರು ಮತ್ತು ಮೈಸೂರು ಪ್ರಾಧಿಕಾರವನ್ನಾಗಿ ಮಾತ್ರ ಮಾಡಿ ಬೆಳಗಾವಿ ಮತ್ತು ಕಲಬುರ್ಗಿ ವಿಭಾಗಗಳನ್ನು ಬಿಟ್ಟು ಬಡ್ತಿ ನೀಡುತ್ತಿ‌ರುವುದು ಸರಿಯಲ್ಲ. ಈಗ ಲಾಕ್‌ಡೌನ್‌ ಇರುವ ಕಾರಣ ಮತ್ತೊಮ್ಮೆ ದಿನಾಂಕ ನಿಗದಿ ಮಾಡಬೇಕು ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಆಗ್ರಹಿಸಿದ್ದಾರೆ.

ಈ ಕುರಿತು ಅವರು ಶಿಕ್ಷಣ ಸಚಿವ ಎಸ್‌. ಸುರೇಶ ಕುಮಾರ್‌ ಅವರಿಗೆ ಪತ್ರ ಬರೆದಿದ್ದಾರೆ.

2008ರಿಂದ 2016ರ ವರೆಗೆ ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರಿಗೆ ಅನ್ಯಾಯವಾಗಿದೆ. ಬೆಂಗಳೂರು ಮತ್ತು ಮೈಸೂರು ವಿಭಾಗಗಳ ಗ್ರೂಪ್‌ ‘ಬಿ’ ದೈಹಿಕ ಶಿಕ್ಷಣ ಪರಿವೀಕ್ಷಕರ ತತ್ಸಮಾನ ವೃಂದದ ಹುದ್ದೆಗಳಿಗೆ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ ಅವರನ್ನು ನೇಮಕಾತಿ ಪ್ರಾಧಿಕಾರವೆಂದು ನಿಗದಿಪಡಿಸಲಾಗಿದೆ. ಆದರೆ ಧಾರವಾಡ ಮತ್ತು ಕಲಬುರ್ಗಿ ಆಯುಕ್ತಾಲಯಗಳಿಗೆ ಸಂಬಂಧಿಸಿದಂತೆ ವೃಂದದ ಹುದ್ದೆಗಳಿಗೆ ನೇಮಕಾತಿ ಪ್ರಾಧಿಕಾರ ನಿಗದಿ ಪಡಿಸದೇ ಇರುವುದು ಸರಿಯಲ್ಲ ಎಂದಿದ್ದಾರೆ.

ADVERTISEMENT

ಸರ್ಕಾರ ಜೂನ್ 7ರ ತನಕ ಲಾಕ್‌ಡೌನ್‌ ಅವಧಿ ವಿಸ್ತರಿಸಿದ್ದು, ಶಿಕ್ಷಕರಿಗೆ ಆಕ್ಷೇಪಣೆ ಸಲ್ಲಿಸಲು ಬೇಕಾಗುವ ದಾಖಲೆಗಳು, ಶಾಲಾ ಮುಖ್ಯಸ್ಥರ ಸಹಿ ದೃಢೀಕರಣ, ಜೆರಾಕ್ಸ್ ಅಂಗಡಿಗೆ ಹೋಗಿ ಬರಲು ವಾಹನ ವ್ಯವಸ್ಥೆಯಿಲ್ಲ. ಪರಿಸ್ಥಿತಿ ಹೀಗಿದ್ದರೂ ಆಕ್ಷೇಪಣೆ ಸಲ್ಲಿಸಲು ಮೂರು ದಿನ ಮಾತ್ರ ಅವಕಾಶ ಕೊಡಲಾಗಿದೆ. ಈ ಅವಧಿಯಲ್ಲಿ ಆಕ್ಷೇಪಣೆ ಸಲ್ಲಿಸುವುದು ಅಸಾಧ್ಯವಾಗುತ್ತದೆ ಎಂದು ಹೊರಟ್ಟಿ ಹೇಳಿದ್ದಾರೆ.

ಹಿಂದೆ ಚುನಾವಣಾ ಕೆಲಸ ಮಾಡಿದ ಶಿಕ್ಷಕರು ಕೋವಿಡ್‌ನಿಂದ ಬಳಲಿದ್ದಾರೆ. ಅನೇಕ ಜನ ಈಗಲೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಆಕ್ಷೇಪಣೆ ಸಲ್ಲಿಸಲು ಸಮಯ ಮರುನಿಗದಿ ಮಾಡಬೇಕು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.