ADVERTISEMENT

ಬಂದ ಸಿದ್ದ ಹೋದ ಸಿದ್ದ ಅನ್ನೋ ಗ್ರಾಮ ವಾಸ್ತವ್ಯ ಇದಲ್ಲ: ಸಚಿವ ಅಶೋಕ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2021, 7:42 IST
Last Updated 20 ಮಾರ್ಚ್ 2021, 7:42 IST
   

ಹುಬ್ಬಳ್ಳಿ: ಜಿಲ್ಲಾಧಿಕಾರಿ ನಡೆ ಹಳ್ಳಿ‌ ಕಡೆ ಕಾರ್ಯಕ್ರಮದ ಅಂಗವಾಗಿ ತಾಲ್ಲೂಕಿನ‌ ಛಬ್ಬಿ ಗ್ರಾಮದಲ್ಲಿ ಶನಿವಾರ ವಾಸ್ತವ್ಯ ಹೂಡಲು ಬಂದ ಕಂದಾಯ ಸಚಿವ ಆರ್.‌ ಅಶೋಕ ಅವರನ್ನು ಗ್ರಾಮಸ್ಥರು ಜಗ್ಗಲಿಗೆ ಮೇಳ, ಕುಂಭ ಮೇಳದೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಿದರು.

ಗ್ರಾಮದ ಸದ್ಗುರು ಸಿದ್ಧಾರೂಢ ಮಠಕ್ಕೆ ಸಚಿವರು ಭೇಟಿ ನೀಡಿ, ಸಿದ್ಧಾರೂಢರ ಗದ್ದುಗೆ ದರ್ಶನ ಪಡೆದರು.

ನಂತರ ಮಾಧ್ಯಮದವರೊ‌ಂದಿಗೆ ಮಾತನಾಡಿದ ಅವರು, 'ಕಂದಾಯ ಆಡಳಿತ ಜನರ ಮನೆಯ ಬಾಗಿಲಿಗೆ ಕೊಂಡೊಯ್ಯಬೇಕು ಎನ್ನುವ ವಿನೂತನ ಯೋಜನೆ ಇದಾಗಿದದೆ. ಜನರಿಗೆ ಅಡೆತಡೆಯಿಲ್ಲದೆ ಕಂದಾಯ ಇಲಾಖೆಯ ಸೌಲಭ್ಯ ದೊರೆಯಬೇಕು. ಅಧಿಕಾರಿ ವರ್ಗದವರು ಜನರ ಸೇವಕರು. ನಲವತ್ತು ವರ್ಷಗಳಿಂದ ಜನ ಕಚೇರಿಗೆ ಅಲೆದಾಡುತ್ತಿದ್ದಾರೆ. ಅವರ ಎದುರಿಗೆ ಕೈ ಕಟ್ಟಿ ನಿಲ್ಲುವ ಪರಿಸ್ಥಿತಿ ಇದೆ. ಅದರಬದಲಾಗಿ ಅಧಿಕಾರಿಗಳೇ ಜನರ‌ ಎದುರು ಕೈಕಟ್ಟಿ ನಿಲ್ಲಬೇಕು ಎನ್ನುವುದು ಗ್ರಾಮ ವಾಸ್ತವ್ಯದ ಕಲ್ಪನೆ‌' ಎಂದರು.

ADVERTISEMENT

'15 ದಿನ ಮುಂಚಿತವಾಗಿ ಅಧಿಕಾರಿಗಳು ಜನರ ಮನೆಗೆ ಹೋಗಿ ಸಮಸ್ಯೆಗಳ ಪಟ್ಟಿ ತಯಾರಿಸಿದ್ದಾರೆ‌. ಅವುಗಳಲ್ಲಿ ಬಹುತೇಕ ಸಮಸ್ಯೆಗಳಿಗೆ ಪರಿಹಾರ ನೀಡಿದ್ದಾರೆ. ರಾಜ್ಯದ ವಿವಿಧ ಹಳ್ಳಿಗಳ ಜನ ತಮ್ಮ ಗ್ರಾಮಕ್ಕೆ ವಾಸ್ತವ್ಯಕ್ಕೆ ಬರುವಂತೆ ಒತ್ತಾಯಿಸುತ್ತಿದ್ದಾರೆ. ಜನರ ಮನೆ ಬಾಗಿಲಿಗೆ ಸರ್ಕಾರ ಕೊಂಡೊಯ್ಯವ ಯೋಜನೆ ಇದಾಗಿದೆ' ಎಂದು ತಿಳಿಸಿದರು.

'ಬಂದ ಸಿದ್ದ ಹೋದ ಸಿದ್ದ ಅನ್ನೋ ಗ್ರಾಮ ವಾಸ್ತವ್ಯ ಇದಲ್ಲ. 24 ಗಂಟೆ ಗ್ರಾಮದಲ್ಲಿಯೇ ಇದ್ದು ಸಮಸ್ಯೆ ಆಲಿಸಿ, ಪರಿಹಾರ ನೀಡಲು ಯತ್ನಿಸುತ್ತೇನೆ' ಎಂದು ಹೇಳಿದರು.

ಗ್ರಾಮಸ್ಥರ ಅಸಮಾಧಾನ
ಬೆಳಿಗ್ಗೆ ಒಂಬತ್ತರಿಂದಲೇ ಸಚಿವರನ್ನು ಸ್ವಾಗತಿಸಲು ಸಿದ್ಧಾರೂಢ ಮಠದಲ್ಲಿ ಗ್ರಾಮಸ್ಥರು ಒಂದೆಡೆ ಸೇರಿದ್ದರು. ಜಿಲ್ಲಾಡಳಿತ, ತಾಲ್ಲೂಕಾಡಳಿತ‌ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದ್ದರು. ಆದರೆ ಮಧ್ಯಾಹ್ನ‌ 12 ಆದರೂ‌ ಸಚಿವರು ಬಂದಿರಲಿಲ್ಲ. ಬೆಳಿಗ್ಗೆಯಿಂದ ಸಚಿವರ ಸ್ವಾಗತಕ್ಕೆ ಕಾದು ಕೂತಿದ್ದೇವೆ. ಆದರೆ, ಬಿಸಿಲು ನೆತ್ತಿಗೇರಿ, ಊಟದ ಸಮಯವಾದರೂ ಸಚಿವರು ಬಂದಿಲ್ಲ ಎಂದು ಕೆಲವು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.