
ಹುಬ್ಬಳ್ಳಿ: ‘ರಾಜ್ಯದಲ್ಲಿ ದಾಖಲೆಯಿಲ್ಲದ 6,500 ವಸತಿ ಪ್ರದೇಶಗಳನ್ನು ಗುರುತಿಸಿ, 4,500ಕ್ಕೂ ಹೆಚ್ಚು ಪ್ರದೇಶಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಲಾಗಿದೆ. ಉಳಿದ ವಸತಿ ಪ್ರದೇಶಗಳ ದಾಖಲೆಗಳನ್ನು ಸಂಗ್ರಹಿಸುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
‘ಯಾರಿಂದಲೂ ಅರ್ಜಿ ಪಡೆಯದೆ, ಸರ್ಕಾರವೇ ದಾಖಲೆಗಳನ್ನು ಸಂಗ್ರಹಿಸಿ ಕಂದಾಯ ಗ್ರಾಮವೆಂದು ಘೋಷಿಸುತ್ತಿದೆ’ ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
‘ಉಳಿದ ವಸತಿ ಪ್ರದೇಶಗಳನ್ನು 2026ರ ಡಿಸೆಂಬರ್ ಒಳಗೆ ಕಂದಾಯ ಗ್ರಾಮಗಳೆಂದು ಘೋಷಿಸುವ ಗುರಿ ಇತ್ತು. ಕೇಂದ್ರ ಸರ್ಕಾರದ ಜನಗಣತಿಯಿರುವುದರಿಂದ, ಹೊಸ ಕಂದಾಯ ಗ್ರಾಮ ಘೋಷಿಸದಂತೆ ಸೂಚಿಸಿದೆ. ಸೂಚನೆ ಹಿಂಪಡೆದ ತಕ್ಷಣ ಹೊಸ ಕಂದಾಯ ಗ್ರಾಮಗಳನ್ನು ಘೋಷಿಸಲಾಗುವುದು’ ಎಂದರು.
‘ಸರ್ಕಾರಿ ಜಮೀನುಗಳ ಒತ್ತುವರಿ ತಡೆಯಲು ತಂತ್ರಜ್ಞಾನ ಆಧಾರಿತ ಲ್ಯಾಂಡ್ ಬೀಟ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಈಗಾಗಲೇ ಕಂದಾಯ ಇಲಾಖೆಯ ಜಮೀನುಗಳು ಆ ಸಾಫ್ಟ್‌ವೇರ್‌ನಲ್ಲಿ ದಾಖಲೆ ಸಹಿತ ಸೇರ್ಪಡೆಯಾಗಿವೆ. ಉಳಿದ ಇಲಾಖೆಗಳಿಗೂ ಅವಕಾಶ ಕಲ್ಪಿಸಲಾಗುತ್ತಿದ್ದು, ಆಸಕ್ತಿಯಿಂದ ತಮ್ಮ ಇಲಾಖೆಯಲ್ಲಿನ ಜಮೀನುಗಳನ್ನು ಸೇರ್ಪಡೆ ಮಾಡಬಹುದು’ ಎಂದು ಸಚಿವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.