ಕುಂದಗೋಳ: ತಾಲ್ಲೂಕಿನ ಶಿರೂರ-ಹಿರೇನರ್ತಿ ಗ್ರಾಮದ ಮಾರ್ಗ ಮಧ್ಯದ ರಸ್ತೆ ನಾಲೈದು ದಿನದಿಂದ ಸುರಿಯುತ್ತಿರುವ ಮಳೆಗೆ ಪೂರ್ಣ ಕಿತ್ತು ಹೋಗಿ ರೈತರಿಗೆ, ಸಾರ್ವಜನಿಕರಿಗೆ, ವಾಹನ ಸವಾರರಿಗೆ ತೊಂದರೆ ಉಂಟಾಗಿ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ಮಳೆಯ ನೀರು ಹರಿದು ರಸ್ತೆ ಕಿತ್ತು ಹೋಗಬಾರದು ಎಂದು ಕಳೆದ ವರ್ಷ ವಿಪತ್ತು ನಿರ್ವಹಣೆ (ಫ್ಲಡ್) ಯೋಜನೆಯಲ್ಲಿ ಸರ್ಕಾರದಿಂದ ₹10 ಲಕ್ಷ ಖರ್ಚು ಮಾಡಿ ರಸ್ತೆ ಪಕ್ಕದಲ್ಲಿ ತಡೆಗೊಡೆ ನಿರ್ಮಾಣ ಮಾಡಲಾಗಿತ್ತು. ಆದರೆ ಅಧಿಕಾರಿಗಳು, ಎಂಜಿನಿಯರ್ ಕಳಪೆ ಸಲಹೆ ಮತ್ತು ಕಾಮಗಾರಿಯಿಂದ ಗೋಡೆ ಒಡೆದು ಹೋಗಿದೆ.
ಒಂದೇ ವರ್ಷದಲ್ಲಿ ತಡೆಗೋಡೆ ಹಾಳಾಗಿದೆ. ಇದರಿಂದ ಅಕ್ಕಪಕ್ಕದ ಜಮೀನಿಗೆ ತೆರಳುವ ರೈತರು ಹರಸಾಹಸ ಪಡುವಂತಾಗಿದೆ. ಇನ್ನೂ ಮುಂಗಾರು ಬಿತ್ತನೆ ಪ್ರಾರಂಬವಾಗುತ್ತಿದ್ದು, ರೈತರು ತಮ್ಮ ಜಮೀನುಗಳಿಗೆ ಹೇಗೆ ತೆರಳಬೇಕು ಎಂಬುವುದೇ ಸವಾಲಾಗಿದೆ.
ಸುತ್ತುವರೆದು ಜಮೀನಿಗೆ ತೆರಳಿ ತಮ್ಮ ಕಾರ್ಯ ಮಾಡಬೇಕು. ಮೊದಲೇ ಕಷ್ಟದಲ್ಲಿರುವ ರೈತರಿಗೆ ಈ ರಸ್ತೆ ಅವಸ್ಥೆ ಸಂಕಷ್ಟ ತಂದೊಡ್ಡೊದೆ. ಇನ್ನೂ ಹಿರೇನೆರ್ತಿ ಗ್ರಾಮದಿಂದ ಶಿರೂರ ಮಾರ್ಗವಾಗಿ ಲಕ್ಷ್ಮೇಶ್ವರ, ಶಿಗ್ಗಾವಿ, ಸವಣೂರು, ಹೀಗೆ ನಾನಾ ಊರಿಗೆ ತೆರಳಲು ಜನರು ತಮ್ಮ ಸ್ವಂತ ವಾಹನಗಳ ಮೂಲಕ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಈಗ ಈ ರಸ್ತೆ ಹಾಳಾಗಿದ್ದರಿಂದ ಕುಂದಗೋಳ ಮಾರ್ಗವಾಗಿ ಮತ್ತೆ ಮುಖ್ಯರಸ್ತೆ ಮೂಲಕ ತೆರಳಬೇಕಾಗಿದೆ.
‘ಈ ರಸ್ತೆ ಹಾಳಾಗಿದ್ದರಿಂದ ರೈತರಿಗೆ ತುಂಬಾ ಕಷ್ಟವಾಗಿದೆ. ಸಾಲ ಮಾಡಿ ಬೀಜ, ಗೊಬ್ಬರ ತಂದು ಮುಂಗಾರು ಬಿತ್ತನೆ ತಯಾರಿಯಲ್ಲಿದ್ದ ನಮಗೆ ತೊಂದರೆಯಾಗಿದೆ’ ಎಂದು ಶಿರೂರ ಗ್ರಾಮದ ಮಂಜುನಾಥ ಅಳಲು ತೊಂಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.