ADVERTISEMENT

ರಸ್ತೆಗಳ ಅಭಿವೃದ್ಧಿಗೆ ₹21 ಸಾವಿರ ಕೋಟಿ: ಸಚಿವ ನಿತಿನ್ ಗಡ್ಕರಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 13:53 IST
Last Updated 15 ಜನವರಿ 2021, 13:53 IST
ನಿತಿನ್‌ ಗಡ್ಕರಿ
ನಿತಿನ್‌ ಗಡ್ಕರಿ   

ಹುಬ್ಬಳ್ಳಿ: ಉತ್ತರ ಕರ್ನಾಟಕದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಮತ್ತು ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲು₹21 ಸಾವಿರ ಕೋಟಿ ಅನುದಾನ ನೀಡಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಿಸಿದರು.

ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಫ್ಲೈ ಓವರ್‌ ನಿರ್ಮಾಣ ಮತ್ತು ಕಲಘಟಗಿ ತಾಲ್ಲೂಕಿನ ದಾಸ್ತಿಕೊಪ್ಪದ ರಾಷ್ಟ್ರೀಯ ಹೆದ್ದಾರಿ 63ರ ಮೇಲೆ ಚತುಷ್ಪಥ ರಸ್ತೆ ಮತ್ತು ಸಣ್ಣ ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ವರ್ಚುವಲ್‌ ಮೂಲಕ ಅವರು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

’ಹುಬ್ಬಳ್ಳಿ–ಧಾರವಾಡ ಚತುಷ್ಪಥ ಬೈ ಪಾಸ್‌ ಕಾಮಗಾರಿಗೆ ₹1,200 ಕೋಟಿ, ಬೆಳಗಾವಿ ರಿಂಗ್‌ ರೋಡ್‌ (₹2,800 ಕೋಟಿ), ಬೆಳಗಾವಿ–ಹುನಗುಂದ–ರಾಯಚೂರುಚತುಷ್ಪಥ ರಸ್ತೆಗೆ (₹12,500 ಕೋಟಿ), ಹಾವೇರಿಯಿಂದ ಶಿರಸಿ ಮೂಲಕ ಯಾಕುಂಬಿ ದ್ವಿಪಥ ಮಾರ್ಗಕ್ಕೆ (₹2,000 ಕೋಟಿ), ಅಮೀನಗಡ–ಭಾನಾಪುರ ದ್ವಿಪಥ ಕಾಮಗಾರಿಗೆ (₹400 ಕೋಟಿ), ನಿಪ್ಪಾಣಿಯಿಂದ ಚಿಕ್ಕೋಡಿಗೆ ದ್ವಿಪಥ(₹145 ಕೋಟಿ), ಬೀದರ್‌ನಿಂದ ತೆಲಂಗಾಣ ಗಡಿತನಕ ದ್ವಿಪಥ (₹120 ಕೋಟಿ), ಸಂಕೇಶ್ವರದಿಂದ ಮುರ್ಗುಂಡಿ (₹550 ಕೋಟಿ) ಸೇರಿದಂತೆ ಒಟ್ಟು 13 ಯೋಜನೆಗಳಿಗೆ ಅನುದಾನ ನೀಡಲಾಗಿದೆ. 874 ಕಿ.ಮೀ. ರಸ್ತೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು. ಸಂಚಾರ ದಟ್ಟಣೆ ಕಡಿಮೆ ಮಾಡಲು ಬೆಂಗಳೂರಿನಲ್ಲಿ ಇನ್ನೊಂದು ರಿಂಗ್‌ ರೋಡ್‌ ನಿರ್ಮಿಸಲಾಗುವುದು ಎಂದೂ ಹೇಳಿದರು.‌

ADVERTISEMENT

ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಿಗೆ ಸುಲಭವಾಗಿ ಸಂಪರ್ಕ ಕಲ್ಪಿಸಲು ಈ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.