ಧಾರವಾಡ: ‘ಆರ್‌ಎಸ್‌ಎಸ್ ಜನಪ್ರಿಯತೆಯನ್ನು ಸಿ.ಎಂ ಸಿದ್ದರಾಮಯ್ಯ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಆದ್ದರಿಂದ ಕಲಬುರಗಿಯ ಚಿತ್ತಾಪುರದಲ್ಲಿ ನಡೆಯುವ ಪಥಸಂಚಲನಕ್ಕೆ ಅಡ್ಡಿಪಡಿಸಲು ಯತ್ನಿಸಿದರು’ ಎಂದು ಸಂಸದ ಜಗದೀಶ ಶೆಟ್ಟರ್ ದೂರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚಿತ್ತಾಪುರದಲ್ಲಿ ಪಥಸಂಚಲನ ತಡೆಯಲು ಪ್ರಯತ್ನಿಸಿದರು. ಪಥಸಂಚಲನಕ್ಕೆ ಹೈಕೋರ್ಟ್ ಅವಕಾಶ ನೀಡಿದೆ. ಕಾನೂನು ಬಾಹಿರವಾಗಿದ್ದರೆ, ಅನುಮತಿ ನೀಡುತ್ತಿರಲಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕು’ಎಂದರು.
‘ಹಿಂದೂ ಹಾಗೂ ಲಿಂಗಾಯತ ಸಮಾಜವನ್ನು ಒಡೆಯುವುದು ಸಿದ್ದರಾಮಯ್ಯ ಉದ್ದೇಶವಾಗಿದೆ. ಆರ್‌ಎಸ್ಎಸ್ ಹಿಂದುತ್ವ ಮತ್ತು ರಾಷ್ಟ್ರ ಕಟ್ಟುವ ಕಾರ್ಯ ಮಾಡುತ್ತಿದೆ. ಎದುರು ಹಾಕಿಕೊಂಡರೆ ಭಸ್ಮವಾಗುತ್ತಿರಿ’ ಎಂದು ಎಚ್ಚರಿಸಿದರು.
‘ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಸರ್ಕಾರಿ ನೌಕರರಿಗೆ ಸಂಬಳ ನೀಡುತ್ತಿಲ್ಲ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ವಿಚಾರಗಳನ್ನು ಮರೆಮಾಚಲು ಜನರ ಗಮನ ಬೇರೆಡೆ ಸೆಳೆಯಲು ಹುನ್ನಾರ ನಡೆಸಿದ್ದಾರೆ’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.