ADVERTISEMENT

ಧಾರವಾಡ | ಆರ್‌ಟಿಐ: 1623 ಅರ್ಜಿ ವಿಲೇವಾರಿ ಬಾಕಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 5:10 IST
Last Updated 18 ಅಕ್ಟೋಬರ್ 2025, 5:10 IST
ಧಾರವಾಡದಲ್ಲಿ ನಡೆದ ಮಾಹಿತಿ ಹಕ್ಕು ಅಧಿನಿಯಮ ಕುರಿತ ಸಭೆಯಲ್ಲಿ ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತ ಅಶಿತ್ ಮೋಹನ್ ಪ್ರಸಾದ್ ಮಾತನಾಡಿದರು 
ಧಾರವಾಡದಲ್ಲಿ ನಡೆದ ಮಾಹಿತಿ ಹಕ್ಕು ಅಧಿನಿಯಮ ಕುರಿತ ಸಭೆಯಲ್ಲಿ ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತ ಅಶಿತ್ ಮೋಹನ್ ಪ್ರಸಾದ್ ಮಾತನಾಡಿದರು    

ಧಾರವಾಡ: ‘ಜಿಲ್ಲೆಯಲ್ಲಿ 1,623 ಆರ್‌ಟಿಐ ಅರ್ಜಿ ವಿಲೇವಾರಿ ಬಾಕಿ ಇದೆ. ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಶೀಘ್ರವಾಗಿ ಅರ್ಜಿಗಳನ್ನು ವಿಲೇವಾರಿ ಮಾಡಬೇಕು’ ಎಂದು ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತ ಅಶಿತ್ ಮೋಹನ್ ಪ್ರಸಾದ್ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಮಾಹಿತಿ ಹಕ್ಕು ಅಧಿನಿಯಮ-2005’ ಕುರಿತ ಸಭೆಯಲ್ಲಿ ಮಾತನಾಡಿದರು.

‘ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆಯ ತಿಳಿವಳಿಕೆ ಇರಬೇಕು. ಅರ್ಜಿಗಳನ್ನು ಪರಿಶೀಲಿಸಿ, ಕಾಲಮಿತಿಯಲ್ಲಿ ಉತ್ತರ ಒದಗಿಸಬೇಕು. ಮಾಹಿತಿ ನೀಡಲು ವಿಳಂಬ, ಮಾಹಿತಿ ನೀಡದಿರುವುದು, ಇತರೆ ಕಾರಣಕ್ಕೆ 10 ವರ್ಷಗಳಲ್ಲಿ ₹10 ಕೋಟಿ ದಂಡವನ್ನು ಅಧಿಕಾರಿಗಳು ಕಟ್ಟಿದ್ಧಾರೆ’ ಎಂದರು.

ADVERTISEMENT

‘ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೂರು ತಿಂಗಳಿಗೊಮ್ಮೆ ಆರ್‌ಟಿಐ ಅರ್ಜಿಗಳ ಕುರಿತು ಪ್ರಗತಿ ಪರಿಶೀಲನೆ ಮಾಡಬೇಕು. ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಬೇಕು’ ಎಂದು ತಿಳಿಸಿದರು.

‘ಆರ್‌ಟಿಐ ಶೂನ್ಯ ಪ್ರಕರಣ ಇರುವ ಜಿಲ್ಲೆಯನ್ನು ಆರ್‌ಟಿಐ ಉತ್ತಮ ನಿರ್ವಹಣೆ ಜಿಲ್ಲೆ ಎಂಬುದಾಗಿ ಗುರುತಿಸಿ, ಮಾಹಿತಿ ಹಕ್ಕು ಕಾಯ್ದೆ ದಿನಾಚರಣೆಯಲ್ಲಿ ಗೌರವಿಸಲಾಗುತ್ತದೆ. ಅರ್ಜಿ ಬಾಕಿ ಇರದ ಅಧಿಕಾರಿ, ಸಿಬ್ಬಂದಿಯನ್ನು ಉತ್ತಮ ಸಾರ್ವಜನಿಕ ಮಾಹಿತಿ ಅಧಿಕಾರಿ ಎಂದು ಗುರುತಿಸಿ, ಜಿಲ್ಲಾಮಟ್ಟದಲ್ಲಿ ಪುರಸ್ಕರಿಸಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಡಿಸಿಪಿ ಮಹಾನಿಂಗ ನಂದಗಾವಿ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಇದ್ದರು.

ಅರ್ಜಿಗಳನ್ನು 30 ದಿನಗಳಲ್ಲಿ ವಿಲೇವಾರಿ ಮಾಡಬೇಕು. ಇಲಾಖೆಗಳ ವೆಬ್‍ಸೈಟ್‍ನಿಂದ ಪಡೆಯುವ ಮಾಹಿತಿಗೆ ದೃಢೀಕರಣದ ಅಗತ್ಯ ಇಲ್ಲ
ಅಶಿತ್ ಮೋಹನ್ ಪ್ರಸಾದ್ ಮುಖ್ಯ ಆಯುಕ್ತ ರಾಜ್ಯ ಮಾಹಿತಿ ಆಯೋಗ

‘ಕಾಲಮಿತಿಯಲ್ಲಿ ವಿಲೇವಾರಿಗೆ ಕ್ರಮ’

‘ಆರು ತಿಂಗಳಿಗೊಮ್ಮೆ ಆರ್‌ಟಿಐ ಕಾಯ್ದೆ ಕುರಿತು ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ. ಬಾಕಿ ಇರುವ ಆರ್‌ಟಿಐ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಲು ಕ್ರಮ ವಹಿಸಲಾಗುವುದು’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು. ಹುಬ್ಬಳ್ಳಿ–ಧಾರವಾಡ ಮಹಾನಗರ ಪೊಲೀಸ್ ಕಮಿಷನರ್‌ ಎನ್. ಶಶಿಕುಮಾರ ಮಾತನಾಡಿ ‘ಕಾಯ್ದೆಯಡಿ ಯಾವ ಮಾಹಿತಿ ನೀಡಲು ಅವಕಾಶವಿದೆ ಮತ್ತು ಯಾವುದನ್ನು ನೀಡಲು ಅವಕಾಶವಿಲ್ಲ ಎಂಬುದರ ಬಗ್ಗೆ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ತಿಳಿವಳಿಕೆ ಇರಬೇಕು’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.