ADVERTISEMENT

ಹುಬ್ಬಳ್ಳಿ: ಕಾಯಂ ನೋಂದಣಿ ಇಲ್ಲದ ಆಟೊ ವಿರುದ್ಧ ಕ್ರಮ

ಮಾರ್ಚ್‌ 31ರ ವರೆಗೆ ಅವಕಾಶ ನೀಡಿದ್ದ ಆರ್‌ಟಿಒ: ನೋಂದಣಿ ಮಾಡದೆ ವಾಹನ ಬಳಕೆ

ಎಂ.ನವೀನ್ ಕುಮಾರ್
Published 25 ಏಪ್ರಿಲ್ 2019, 20:15 IST
Last Updated 25 ಏಪ್ರಿಲ್ 2019, 20:15 IST

ಹುಬ್ಬಳ್ಳಿ: ಆಟೊ ರಿಕ್ಷಾಗೆ ಕಾಯಂ ನೋಂದಣಿ ಮಾಡಿಸಿಲ್ಲವೇ, ಕೇವಲ ತಾತ್ಕಾಲಿಕ ನೋಂದಣಿಯಲ್ಲಿಯೇ ಆಟೊ ಓಡಿಸುತ್ತಿದ್ದೀರ? ಹಾಗಿದ್ದರೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳುವುದು ನಿಶ್ಚಿತ.

ಹೌದು, ತಾತ್ಕಾಲಿಕ ನೋಂದಣಿ ಮಾಡಿಸಿದ ಆಟೊ ರಿಕ್ಷಾಗಳು ಕಾಯಂ ನೋಂದಣಿ ಮಾಡಿಸಬೇಕು ಎಂದು ಸೂಚನೆ ನೀಡಲಾಗಿತ್ತು. ಅದಕ್ಕಾಗಿ ಮಾರ್ಚ್‌ 31ರ ವರೆಗೆ ಕಾಲಾವಕಾಶ ಸಹ ನೀಡಲಾಗಿತ್ತು. ಆದರೂ ಕೆಲವರು ಇನ್ನೂ ನೋಂದಣಿ ಮಾಡಿಸಿಲ್ಲ. ಚುನಾವಣೆಯ ಕರ್ತವ್ಯದಲ್ಲಿದ್ದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿರಲಿಲ್ಲ. ಆದರೆ ಈಗ ಕಾನೂನು ಪಾಲಿಸದವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ‍ಪ್ರತಿಕ್ರಿಯೆ ನೀಡಿದ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ರವೀಂದ್ರ ಕವಲಿ, ‘ತಾತ್ಕಾಲಿಕ ನೋಂದಣಿ ಮಾಡಿಸಲು ಅವಕಾಶ ಇದೆ. ಆದರೆ ನಿರ್ದಿಷ್ಟ ದಿನದ ನಂತರ ವಾಹನದ ಕಾಯಂ ನೋಂದಣಿ ಮಾಡಿಸಬೇಕು. ಆದರೆ ಕೆಲವರು ನೋಂದಣಿ ಮಾಡಿಸುವ ಗೋಜಿಗೆ ಹೋಗಿಲ್ಲ. ಹೀಗೆ ಮಾಡುವುದು ನಿಯಮದ ಸ್ಪಷ್ಟ ಉಲ್ಲಂಘನೆ’ ಎಂದು ತಿಳಿಸಿದರು.

ADVERTISEMENT

‘ಈ ವಿಷಯ ಗಮನಕ್ಕೆ ಬಂದ ನಂತರ, ಹುಬ್ಬಳ್ಳಿ ಧಾರವಾಡದ ಮಹಾನಗರ ವ್ಯಾಪ್ತಿಯಲ್ಲಿ ಸಂಚರಿಸುವ ಇಂತಹ ತಾತ್ಕಾಲಿಕ ನೋಂದಣಿ ಆಟೊ ರಿಕ್ಷಾಗಳು ಕಾಯಂ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಹಲವು ಬಾರಿ ಸೂಚನೆ ನೀಡಲಾಗಿತ್ತು. ಮಾರ್ಚ್‌ 31 ಕೊನೆಯ ದಿನ ಎಂದು ಸಹ ಘೋಷಿಸಲಾಗಿತ್ತು. ಆದರೂ ಕೆಲವು ವಾಹನ ಮಾಲೀಕರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನಿಯಮ ಪಾಲಿಸದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುವುದು’ ಎಂದು ಅವರು ಹೇಳಿದರು.

‘ಸಿಬ್ಬಂದಿ ಲೋಕಸಭೆ ಚುನಾವಣಾ ಕರ್ತವ್ಯದಲ್ಲಿ ತೊಡಗಿದ್ದರಿಂದ ಇಂತಹ ವಾಹನ ಎಷ್ಟಿದೆ ಎಂಬುದನ್ನು ಪರಿಶೀಲಿಸಿಲ್ಲ. ಆ ಮಾಹಿತಿಯನ್ನೂ ಸಹ ಸಂಗ್ರಹಿಸಲಾಗುವುದು. ಅದರ ವಿರುದ್ಧ ಅಭಿಯಾನ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಅಂತಹ ವಾಹನ ಮಾಲೀಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಏನಾದರೂ ಅನಾಹುತ ಸಂಭವಿಸಿದರೆ ಅವರೇ ಹೊಣೆಗಾರರಾಗುತ್ತಾರೆ ಎಂಬುದರನ್ನು ಗಮನದಲ್ಲಿಟ್ಟುಕೊಳ್ಳಬೇಕು’ ಎಂದು ಅವರು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.