ADVERTISEMENT

ಗ್ರಾಮೀಣ ಆಟಗಳ ಸವಿ ಮತ್ತೆ ಸಿಕ್ಕೀತೆ?

ಹುಬ್ಬಳ್ಳಿ–ಧಾರವಾಡ ಮೆಟ್ರೊ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2019, 19:45 IST
Last Updated 18 ಅಕ್ಟೋಬರ್ 2019, 19:45 IST
ಲಗೋರಿ
ಲಗೋರಿ   

ಬಾಲ್ಯ ಎಂದರೆ ಯಾರಿಗೆ ಇಷ್ಟವಿಲ್ಲ ತಾನೇ ಹೇಳಿ... ಜವಾಬ್ದಾರಿಗಳು ಕಡಿಮೆ ಆಟ, ಪಾಠ ನಲಿದಾಟವೇ ಹೆಚ್ಚು.ತಿಂಡಿಪೋತರಿಗೆ ಊಟದ ಅಭಿರುಚಿಯೂ ಹೆಚ್ಚು. ಶಾಲೆ ಕಲಿಯುವಾಗಿನ ದಿನಗಳು ಅವಿಸ್ಮರಣೀಯ. ಅದರಲ್ಲಿಯೂ ರಜಾ ದಿನಗಳಂತೂ ಮತ್ತಷ್ಟು ಮಕ್ಕಳಿಗೆ ಖುಷಿ ನೀಡುತ್ತವೆ.ಗೃಹಪಾಠಗಳ ಕಿರಿಕಿರಿಯಿಲ್ಲ. ಬಯಸಿದ ಆಟ ಆಡಲು ಹೆಚ್ಚು ಸಮಯ ಸಿಗುವುದು. ಗ್ರಾಮೀಣ ಪ್ರದೇಶದಲ್ಲಿ ಜನಿಸಿದ ನಮಗೆ ಆಟಗಳೆಂದರೆ ವಿಶೇಷ ಆಸಕ್ತಿ.

ಭಾನುವಾರ ಮತ್ತು ಹುಣ್ಣಿಮೆ ಬಂದರೆ ನಮಗೆ ದೊಡ್ಡ ಹಬ್ಬವೇ ಸರಿ. ಅದರಲ್ಲಿಯೂ ಆಟ ಆಡುವುದೆಂದರೆ ಹಬ್ಬದೂಟವೇ ಸವಿದಂತೆ. ನಾವೂ ಆಡಿದ ಆಟ ಮಾಡಿದ ಕಾರ್ಯ ನಲಿದಾಟ ಅಷ್ಟಿಷ್ಟಲ್ಲ.ಬಾಲ್ಯದಲ್ಲಿದ್ದಾಗ ಗೋಲಿ, ಲಗೋರಿ,ಸರಗೆರೆ, ಕಬಡ್ಡಿ, ಕೊಪ್ಪದ ಆಟ, ಹಾವು ಏಣಿ ಇನ್ನಿತರ ಎಲ್ಲಾ ಪ್ರಕಾರದ ಗ್ರಾಮೀಣ ಆಟ ಆಡಿ ನಲಿದಿದ್ದೇವೆ. ಆಟ ಆಡುವಾಗ ನಮಗೆ ಎರಡರ ಪರಿವೆ ಇರುತ್ತಿರಲಿಲ್ಲ. ಅದೆಂದರೆ, ಒಂದು ಊಟದ್ದು, ಇನ್ನೊಂದು ಸಮಯದ್ದು.ಹಾಗೇ ಎರಡರ ಬಗ್ಗೆ ಚಿಂತೆ ಇರಲಿಲ್ಲ– ಒಂದು ಹಿರಿಯರು ಬೈಯುತ್ತಾರೆ ಎಂದು, ಇನ್ನೊಂದು ಪಂದ್ಯದಲ್ಲಿ ಸೋಲುತ್ತೇವೆ ಎಂಬ ಭಯ.

ನಾವು ಆಡುವುದು ಮನರಂಜನೆಗಾಗಿ, ಖುಷಿಗಾಗಿ.ಆಟವಾಡುವಾಗಿನ ತನ್ಮಯತೆ ಓದುವುದರಲ್ಲಿ ಇದ್ರೆ ದೊಡ್ಡ ಅಧಿಕಾರಿ ಆಗುತ್ತಿದ್ದೆವೋ ಏನೋ ಗೊತ್ತಿಲ್ಲ. ಆದರೆ ಆಟ ನಮ್ಮನ್ನು ಸೆಳೆದಷ್ಟೂ ಓದು ನಮ್ಮನ್ನು ಸೆಳೆಯಲಿಲ್ಲ.ಹಾಗಂತ ಓದುವುದನ್ನೂ ಬಿಡಲಿಲ್ಲ.ಸಂಧ್ಯಾ ಸಮಯ ನಮ್ಮ ನೆಚ್ಚಿನ ಸಮಯ. ಕಾರಣ ಓದು ಮನೆಕೆಲಸ ಮುಗಿಸಿ ಮನೆಯಿಂದ ಹೊರಬಿದ್ರೆ ಮತ್ತೆ ಗೂಡು ಸೇರುವುದು ರಾತ್ರಿಯೇ. ಅಷ್ಟೂ ಆಟದ ಬಗ್ಗೆ ಸೆಳೆತ ಆಸಕ್ತಿ. ಅಪ್ಪ ಅಮ್ಮಂದಿರಿಂದಅತಿ ಹೆಚ್ಚು ಬೈಗುಳ ತಿಂದದ್ದು.ಇದೇ ವಿಚಾರವಾಗಿಅವರು ಬೈದಾಗ ಆರಂಭದಲ್ಲಿ ಚೂರು ಬೇಜಾರು ಆಗುತ್ತಿತ್ತು. ತದನಂತರ ಅದೇ ಅಭ್ಯಾಸ ಆಗಿ ಹೋಯಿತು. ಎಷ್ಟೆಂದರೆ ಒಂದು ದಿನ ಅವರು ಆಟದ ವಿಚಾರವಾಗಿ ಬೈಯ್ಯದಿದ್ದರೆ ಅಂದು ಏನೋ ಕಳೆದು ಕಹಿ ಅನುಭವ. ರೂಢಿ ಅಂದರೆ ಇದೆಯಲ್ವಾ.

ADVERTISEMENT

ಹೀಗಿರಲು ದಿನಕಳೆದಂತೆ ಪ್ರಾಥಮಿಕ ಹಂತ ಮುಗಿಸಿ ಪ್ರೌಢ ಹಂತಕ್ಕೆ ಬಂದಾಗ ಕ್ರಿಕೆಟ್‌ಕುರಿತು ಆಸಕ್ತಿ ಹೆಚ್ಚಾಯಿತು. ಸಹಜ ಅಭ್ಯಾಸ ಮಾಡುವಾಗಲೂ ಒಂದು ಬೌಂಡರಿ ಹೊಡೆದರೆ ಶತಕ ಹೊಡೆದಷ್ಟೇ ಸಂಭ್ರಮ ನಮ್ಮದು. ಒಂದು ವಿಕೆಟ್ ಪಡೆದಾಗ ಸ್ವರ್ಗಕ್ಕೆ ಮೂರೇ ಗೇಣು ಎಂದು ಸಂಭ್ರಮ ಪಟ್ಟಿದ್ದು ಉಂಟು. ಸೋತಾಗ ಮರಳಿ ಯತ್ನವ ಮಾಡೋಣ ಎಂದು ಮನಕ್ಕೆ ಸಮಾಧಾನ ಹೇಳಿವೆವು. ಭಾನುವಾರ ಹುಣ್ಣಿಮೆ ದಿನ ನಮ್ಮೂರಿನ ಬೇರೆ ಬೇರೆ ಓಣಿಯ ಹುಡುಗರ ಜೊತೆ ಕ್ರಿಕೆಟ್‌ಮ್ಯಾಚ್ ಆಡುತ್ತಿದ್ದೆವು. ಅಂದು ಮನೆಯಲ್ಲಿ ಎಷ್ಟೇ ಕೆಲಸ ಇರಲಿ ಮಧ್ಯಾಹದ ವೇಳೆಗೆ ಮುಗಿಸಿ ಕ್ರಿಕೆಟ್‌ಪಂದ್ಯಕ್ಕೆ ಹಾಜರು.ಬಿರು ಬಿಸಿಲು ನಮಗೆ ಯಾವ ಲೆಕ್ಕವೇ ಇಲ್ಲ. ಅಷ್ಟೊಂದು ಆಟದ ಹುಚ್ಚು.

ಇನ್ನುಕ್ರಿಕೆಟ್‌ ಪಂದ್ಯವನ್ನುಟಿವಿಯಲ್ಲಿ ನೋಡುವುದು ಬಲು ಖುಷಿ. ಕರೆಂಟ್ ಹೋದ್ರೆ ಕಾಮೆಂಟರಿ ಕೇಳುತ್ತಿದ್ದವು. ನಮ್ಮೂರಿನಲ್ಲಿ ಪಂದ್ಯ ಪ್ರಸಾರವಾಗದಿದ್ದರೆ ಪಕ್ಕದೂರಿಗೆ ಹೋಗಿ ಕ್ರಿಕೆಟ್‌ನೋಡಿದ್ದೂ ಉಂಟು.ಅದೆಷ್ಟು ಕ್ರಿಕೆಟ್‌ಕ್ರೇಜ್ ಇತ್ತೆಂದರೆ ಡಿಗ್ರಿ ಕಲಿಯುವಾಗ ಕಾಲೇಜ್ ಅವಧಿ ಬಿಟ್ಟು ಕ್ರಿಕೆಟ್‌ನೋಡುತ್ತಿದ್ದೆವು,ಜೊತೆಗೆ ಆಡುತ್ತಿದ್ದೆವು. ನಮಗೆ ಕ್ರಿಕೆಟ್‌ಆಡಲೂ ಬ್ಯಾಟೇ ಬೇಕು ಅಂತಿಲ್ಲ, ಒಂದು ಕಟ್ಟಿಗೆ ಬ್ಯಾಟ್ ಆಗುತ್ತಿತ್ತು. ಸಣ್ಣ ಹರಳೇ ಬೌಲ್ ಆಗುತ್ತಿತ್ತು. ಅಷ್ಟು ಖುಷಿ ಆ ಬಾಲ್ಯದೇ ನೆನಪೇ ಹಾಗಲ್ಲವೇ? ಬದುಕಿನ ಒತ್ತಡಗಳಿಲ್ಲ, ಜವಾಬ್ದಾರಿಗಳಿಲ್ಲ. ಆಟ ನಲಿದಾಟವೇ ಬದುಕಾಗಿತ್ತು. ಅದಕ್ಕೆ ಹೇಳುವುದು ವಿದ್ಯಾರ್ಥಿ ಬದುಕು ಬಂಗಾರದ ಬದುಕು ಇದ್ದಂತೆ.

ಕ್ರಮೇಣ ಓದು ಮುಂದುವರಿದು ಬದುಕಿನ ಒತ್ತಡ ಜವಾಬ್ದಾರಿ ಹೆಚ್ಚಾಗಿ ಆಟ ಆಡುವುದರಲ್ಲಿ ಆಸಕ್ತಿ ಇದ್ದರೂ ಸಮಯ ಸಿಗದೆ ಆಟ ಕಡಿಮೆ ಆಯಿತು. ಮುಂದೆ ನೌಕರಿ ಅದು ಇದು ಅಂತ ಬದುಕಿನ ನೊಗ ಹೊತ್ತ ಪರಿಣಾಮ ಬಾಲ್ಯದ ಆ ದಿನಗಳು ನೆನಪಾಗಿ ಉಳಿದವು. ನೌಕರಿ ಸೇರಿದ ಮೇಲೆ ಆಗೊಮ್ಮೆ ಈಗೊಮ್ಮೆ ಆಡಿದ್ದು ಉಂಟಾದರೂ ಅತಿ ವಿರಳ.. ಹೀಗಿರಲೂ ಇತ್ತೀಚಿಗೆ ಕಾರ್ಯ ನಿಮಿತ್ತಗೆಳೆಯರೆಲ್ಲರೂ ಸೇರಿ ಧಾರವಾಡಕ್ಕೆ ಹೋಗಿದ್ದೆವು. ಇನ್ನಿತರ ಕಾರಣಗಳಿಂದ ಆಗಬೇಕಾದ ಕೆಲಸ ಆಗುವ ಲಕ್ಷಣ ಕಂಡುಬರಲಿಲ್ಲ, ಅಪರೂಪಕ್ಕೆ ಎಲ್ಲರೂ ಸೇರಿದ್ದೆವು.ತಡ ಮಾಡಲೇ ಇಲ್ಲ ಅಲ್ಲಿಯೇ ಇದ್ದ ತೆಂಗಿನಗರಿಯಲ್ಲಿಕ್ರಿಕೆಟ್‌ಆಡಲು ಶುರು ಮಾಡಿದೆವು.ಅಕ್ಷರಶಃ
ಅಂದು ನಾವೂ ಮಕ್ಕಳಾಗಿದ್ದೆವು, ತುಂಬಾ ಸಂಭ್ರಮಿಸಿದೆವು. ನಲಿದೆವು... ಗೆದ್ದೆವು ಸೋತೆವು... ಪರಸ್ಪರ ಸಂತಸ ಹಂಚಿಕೊಂಡೆವು... ಕಳೆದು ಹೋದ ಬಾಲ್ಯದ ನೆನಪು ಅಂದುಮರುಕಳಿಸಿತು. ಬಾಲ್ಯದ ನೆನಪು ಅವಿಸ್ಮರಣೀಯ ಅಲ್ಲವೇ?

ಅದೇಕೋ ಏನೋ ಆ ಎಲ್ಲ ಬಾಲ್ಯದ ಸವಿ ಇಂದಿನ ಮಕ್ಕಳಿಗೆ ಲಭ್ಯವಿಲ್ಲ. ಅವರಿಗೆ ಆ ಅದೃಷ್ಟವೇ ಇಲ್ಲ ಎಂದೇ ಹೇಳಬೇಕಿದೆ. ನರ್ಸರಿಯಿಂದಲೇ ಅವರೆಲ್ಲ ಪಠ್ಯಪುಸ್ತಕದಲ್ಲೇ ಮಗ್ನ. ಇನ್ನು ಮನೆಗೆ ಬಂದರೆ, ಹೋಂವರ್ಕ್‌ ಮುಗಿಸಲೇ ಸಮಯ ಸಾಕಾಗುತ್ತಿಲ್ಲ. ಇನ್ನು ಬಾಲ್ಯದ ಆಟಗಳು ಅವರತ್ತ ಒಲಿಯುವುದ್ಹೇಗೆ...?

-ರಂಗನಾಥ ಎನ್. ವಾಲ್ಮೀಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.