ಕಲಘಟಗಿ: ಸರ್ಕಾರಿ ಶಾಲೆ ಅಂದಾಗ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಇಷ್ಟೊಂದು ನಿರ್ಲಕ್ಷವೇಕೆ ಎಂಬಂತೆ ಇಲ್ಲಿನ ಪ್ರೌಢಶಾಲೆಯೊಂದರ ಆವರಣ ಮಳೆಗಾಲದಲ್ಲಿ ಮಳೆ ನೀರು ಶೇಖರಣೆಯಾಗಿ ಕೆಸರು ಗದ್ದೆಯಾಗಿ ಮಾರ್ಪಡುತ್ತದೆ. ವಿದ್ಯಾರ್ಥಿಗಳು ದಿನನಿತ್ಯ ಇದರಲ್ಲಿ ಓಡಾಡುವ ಪರಿಸ್ಥಿತಿ ಎದುರಾಗಿದೆ.
ತಾಲ್ಲೂಕಿನ ಸಂಗಮೇಶ್ವರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 176 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಶಾಲೆ ಆವರಣ 10 ರಿಂದ 15 ವರ್ಷಗಳಿಂದ ಸ್ವಚ್ಛತೆ ಕೊರತೆ ಎದುರಿಸುತ್ತಿದೆ. ಆವರಣಕ್ಕೆ ಮುರುಮ್ ಹಾಕಿಸಿ ಸಮತಟ್ಟು ಮಾಡಿ ಅಭಿವೃದ್ಧಿ ಪಡಿಸಲು ಹಲವು ಬಾರಿ ಗ್ರಾಮ ಪಂಚಾಯಿತಿಗೆ ಹಾಗೂ ಶಿಕ್ಷಣ ಇಲಾಖೆಗೆ ತಿಳಿಸಿದರೂ ಸುಧಾರಣೆ ಮಾಡುವ ಭರವಸೆ ನೀಡಿದ್ದು, ಇನ್ನು ಈಡೇರಿಸಿಲ್ಲ ಎಂಬ ದೂರುಗಳು ಕೇಳಿ ಬಂದವು.
ಮಳೆಗಾಲ ಪ್ರಾರಂಭವಾದರೆ ಶಾಲೆಯ ಸುತ್ತಮುತ್ತಲಿನ ಮಳೆ ನೀರು ಆವರಣದಲ್ಲಿ ಶೇಖರಣೆಯಾಗಿ ನೀರು ನಿಂತು ಕೆಸರಿನ ಗದ್ದೆಯಾಗಿ ನಿರ್ಮಾಣವಾಗುತ್ತದೆ. ಬೆಳಿಗ್ಗೆ ಶಾಲೆಗೆ ಪ್ರವೇಶ ಮಾಡುವ ಇಲ್ಲಿನ ವಿದ್ಯಾರ್ಥಿಗಳಿಗೆ ಮೊದಲನೇ ಪಾಠ ಶಾಲೆ ಕೆಸರೇ ನೋಡುವಂತಾಗಿದೆ.
ದಿನನಿತ್ಯದ ಪ್ರಾಥನೆ, ಕ್ರೀಡಾ ಚಟುವಟಿಕೆಗಳು, ಯೋಗಾಸನ, ಸ್ವಾತಂತ್ರ ದಿನಾಚರಣೆ ಹಾಗೂ ಇನ್ನಿತರ ಆಟೋಟಗಳ ಚುಟುವಟಿಕೆ ಕೈಗೊಳ್ಳಲ್ಲೂ ಪರದಾಡುವಂತ ಪರಿಸ್ಥಿತಿ ಇಲ್ಲಿನ ಶಿಕ್ಷಕರಿಗೆ ಬಂದೊದಗಿದೆ. ಕೆಸರಿನೊಂದಿಗೆ ಹುಲ್ಲು ಬೆಳೆದು ನಿಂತಿದ್ದರಿಂದ ಸ್ವಚ್ಛತೆ ಮರೀಚಿಕೆಯಾಗಿ ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಕಾಡುತ್ತಿದೆ.
‘ಮಕ್ಕಳನ್ನ ಹೊರಗೆ ಬಿಡುವುದೇ ಒಂದು ಸವಾಲಿನ ಕೆಲಸವಾಗಿದೆ. ಸ್ವಲ್ಪ ಮಕ್ಕಳು ಎಚ್ಚರ ತಪ್ಪಿ ಓಡಾಡಿದರೆ ಕೆಸರು ಮೆತ್ತಿ ಕೊಳ್ಳುತ್ತದೆ. ಮಕ್ಕಳ ದೈನಂದಿನ ಶಾಲಾ ಚಟುವಟಿಕೆ ಕೈಗೊಳ್ಳಲೂ ಸಮಸ್ಯೆಯಾಗಿದೆ. ಇನ್ನಾದರೂ ಶಾಲಾ ಆವರಣ ಸಮತಟ್ಟು ಮಾಡಿಕೊಟ್ಟರೆ ಅನುಕೂಲವಾಗುತ್ತದೆ’ ಎಂದು ಮುಖ್ಯಶಿಕ್ಷಕ ಸಂತೋಷ ಗುಣಾರಿ ತಿಳಿಸಿದರು.
ಅವರಣಕ್ಕೆ ಮಣ್ಣು ಹಾಕಿಸಲು ಮನವಿ ಗ್ರಾಮ ಪಂಚಾಯತಿ, ಶಿಕ್ಷಣ ಇಲಾಖೆಗೆ ಹಲವು ಬಾಡಿ ಮನವಿ ಆಟೋಟ, ಶೈಕ್ಷಣಿಕ ಚಟುವಟಿಕೆಗೆ ಪರದಾಟ
ಮಳೆಗಾಲ ಬಂತೆಂದರೆ ಸಾಕು ಶಾಲಾ ಆವರಣ ನೀರು ನಿಂತು ಹೊಂಡವಾಗಿ ಮಕ್ಕಳ ಆಟೋಟಕ್ಕೆ ಹಾಗೂ ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗಿದೆಯಲ್ಲಾರಿ ಬಾರಗಾವಕರ ಎಸ್‌ಡಿಎಂಸಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.